ಜಗತ್ತಿನ ಮೊಟ್ಟಮೊದಲ ಸುಸಜ್ಜಿತ ಹಾರುವ ಕಾರಿಗೆ ಸಿಕ್ತು ಅಧಿಕೃತ ಅನುಮೋದನೆ!

flying car
Published on

ನವದೆಹಲಿ: ಇನ್ನು ನೀವು ರೋಡಿನಿಂದ ಆಗಸಕ್ಕೇ ಟೇಕಾಫ್ ಮಾಡಬಹುದು! ಹೌದು, ಸ್ಕೈ-ಫೈ ಸಿನಿಮಾಗಳಲ್ಲಿ ನೀವು ನೋಡಿದಂತೆಯೇ ಇದೀಗ ಹಾರುವ ಕಾರುಗಳಿಗೆ ಅಧಿಕೃತವಾಗಿ ಅನುಮೋದನೆ ಸಿಕ್ಕಿದೆ.

ನೀವು ರಸ್ತೆಗಳಲ್ಲಿ ಓಡಿಸಬಹುದಾದ ಮತ್ತು ಆಕಾಶದಲ್ಲಿ ಹಾರಿಸಬಹುದಾದ ಸಂಪೂರ್ಣವಾಗಿ ತಯಾರಾಗಿರುವ ಎಲೆಕ್ಟ್ರಿಕ್ ಕಾರು ಯುಎಸ್ ಸರ್ಕಾರದಿಂದ ಹಾರಲು ಕಾನೂನು ಅನುಮೋದನೆಯನ್ನು ಪಡೆದಿದೆ.

ವರ್ಷಗಳ ಸ್ಕೈ-ಫೈ ಕನಸು ನನಸು!

ಅಮೆರಿಕ ಮೂಲದ ಅಲೆಫ್ ಏರೋನಾಟಿಕ್ಸ್ ಅಭಿವೃದ್ಧಿಪಡಿಸಿರುವ ಈ ಹಾರುವ ಕಾರಿಗೆ ಅಮೆರಿಕ ಸರ್ಕಾರದಿಂದ ಅನುಮೋದನೆ ಸಿಕ್ಕಿದೆ. ಮಾಡೆಲ್ ಎ ಎಂದು ಕರೆಯಲ್ಪಡುವ ತನ್ನ ಕಾರು ಯುಎಸ್ ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ (ಎಫ್‌ಎಎ) ಯಿಂದ ವಿಶೇಷ ಏರ್‌ವರ್ದಿನೆಸ್ ಪ್ರಮಾಣೀಕರಣವನ್ನು ಪಡೆದಿದೆ ಎಂದು ಕಂಪನಿಯು ಘೋಷಿಸಿತು. ಈ ಬೆಳವಣಿಗೆಯು ಐತಿಹಾಸಿಕವಾಗಿದೆ. ಏಕೆಂದರೆ ಇದು ಮೊದಲ ಬಾರಿಗೆ ಯಾವುದೇ ದೇಶ ಈ ರೀತಿಯ ವಾಹನವನ್ನು ಪ್ರಮಾಣೀಕರಿಸಿದ್ದು. ಈ ಮೂಲಕ ಅನೇಕ ವರ್ಷಗಳಿಂದ ಜನರು ಕಾಣುತ್ತಿದ್ದ ಹಾರುವ ಕಾರಿನ ಸ್ಕೈ-ಫೈ ಕನಸು ನನಸಾಗಿದೆ ಎಂದೇ ಹೇಳಬಹುದು.

"ಎಫ್‌ಎಎ ಎಲೆಕ್ಟ್ರಿಕಲ್ ವರ್ಟಿಕಲ್ ಟೇಕ್‌ಆಫ್ ಮತ್ತು ಲ್ಯಾಂಡಿಂಗ್ (ಇವಿಟಿಒಎಲ್) ವಾಹನಗಳಿಗಾಗಿ ತನ್ನ ನೀತಿಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಜತೆಗೆ ಇವಿಟಿಒಎಲ್‌ಗಳು ಮತ್ತು ನೆಲದ ಮೂಲಸೌಕರ್ಯಗಳ ನಡುವಿನ ಸಂವಹನಗಳನ್ನು ನಿಯಂತ್ರಿಸುತ್ತದೆ" ಎಂದು ಕಂಪನಿಯು ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. 

ಕಾರಿನಂತೆ ಚಾಲನೆ ಮಾಡುವ ಸಾಮರ್ಥ್ಯ, ನಿಂತಲ್ಲಿಂದಲೇ ಟೇಕ್‌ಆಫ್ ಮಾಡುವ ಸಾಮರ್ಥ್ಯಗಳು ಮತ್ತು ಕೈಗೆಟುಕುವ ಸಾಮರ್ಥ್ಯದಂತಹ ನಿರ್ದಿಷ್ಟ ಅವಶ್ಯಕತೆಗಳನ್ನು ಪೂರೈಸಲು ಅಲೆಫ್ ಏರೋನಾಟಿಕ್ಸ್ ತನ್ನ ಮೊದಲ ಮಾದರಿಯನ್ನು 2016 ರಲ್ಲಿ ನಿರ್ಮಿಸಿತು. ಮಾಡೆಲ್ ಎ 200 ಮೈಲುಗಳ ಚಾಲನಾ ವ್ಯಾಪ್ತಿಯನ್ನು ಹೊಂದಿದ್ದು 110 ಮೈಲುಗಳವರೆಗೆ ಹಾರಾಟ ಮಾಡಬಲ್ಲದು ಎಂದು ಕಂಪನಿ ಹೇಳಿಕೊಂಡಿದೆ. ಈ ಮಾದರಿಯು ಅಕ್ಟೋಬರ್ 2022ರಲ್ಲಿ ಪೂರ್ವ ಮಾರಾಟವನ್ನು ಪ್ರಾರಂಭಿಸಿ ಆ ವರ್ಷದ ಅಂತ್ಯದ ವೇಳೆಗೆ ಅದಾಗಲೇ 440ಕ್ಕೂ ಹೆಚ್ಚು ಮೀಸಲಾತಿಗಳನ್ನು ಪಡೆದುಕೊಂಡಿದೆ ಎಂದು ಕಂಪನಿ ವರದಿ ಮಾಡಿದೆ.

ಈಗಾಗಲೇ ಬಂದಿವೆ ಪ್ರೀ ಆರ್ಡರ್ಸ್!

ಅಲೆಫ್ ಏರೋನಾಟಿಕ್ಸ್ 2019ರಿಂದ ತಮ್ಮ ಮೂಲಮಾದರಿಗಳನ್ನು ಟೆಸ್ಟ್-ಡ್ರೈವಿಂಗ್ ಮತ್ತು ಟೆಸ್ಟ್-ಫ್ಲೈ ಮಾಡುತ್ತಿದೆ. ಮಾಡೆಲ್ ಎ ಉತ್ಪಾದನೆಯು 2025 ರ Q4ನಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಕಂಪನಿಯು ನಾಲ್ಕು ವ್ಯಕ್ತಿಗಳು ಪ್ರಯಾಣಿಸಬಹುದಾದ ಮಾದರಿಗಳನ್ನು ಅಭಿವೃದ್ಧಿಪಡಿಸಲು ಯೋಜಿಸುತ್ತಿದೆ. ಮಾಡೆಲ್ Z ಎಂದು ಹೆಸರಿಸಲಾದ ಸೆಡಾನ್, 2035 ರಲ್ಲಿ ಪ್ರಾರಂಭಿಕ ಬೆಲೆ $35,000ಗೆ ಮಾರಾಟವಾಗುವ ಸಾಧ್ಯತೆ ಇದೆ. ಮಾಡೆಲ್ Z, 300 ಮೈಲುಗಳಿಗಿಂತ ಹೆಚ್ಚು ಹಾರುವ ವ್ಯಾಪ್ತಿಯನ್ನು ಹೊಂದಿರಲಿದ್ದು ಅದನ್ನು ಬಿಟ್ಟು 200 ಮೈಲುಗಳಿಗಿಂತ ಹೆಚ್ಚಿನ ಚಾಲನಾ ವ್ಯಾಪ್ತಿಯನ್ನು ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: ಬರೀ ಮುಟ್ಟಿದರೇ ಹೊಗೆ ಹಾಕಿಸಬಲ್ಲ ಕಪ್ಪೆಗಳು!!

ಈ ವರ್ಷದ ಆರಂಭದಲ್ಲಿ, ಕಂಪನಿಯ CEO, ಜಿಮ್ ಡುಖೋವ್ನಿ, ಅಲೆಫ್ ಇತಿಹಾಸದಲ್ಲಿ ಮೊದಲ ನೈಜ ಹಾರುವ ಕಾರನ್ನು ಜನರಿಗೆ ತಲುಪಿಸುವ ಗುರಿಯನ್ನು ಹೊಂದಿದ್ದಾರೆ. ಈಗಾಗಲೇ ಹಲವಾರು ಪ್ರೀ ಆರ್ಡರ್‌ಗಳನ್ನು ಕಂಪನಿಯು ಸ್ವೀಕರಿಸಿದ್ದು ಖುಷಿ ತಂದಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net