ಮೇಕ್ ​ಇನ್​ ಇಂಡಿಯಾ ಹೊಗಳಿದ ಪುಟಿನ್; ಶುರುವಾಗಲಿದ್ಯಾ ಮೇಕ್​ ಇನ್ ರಷ್ಯಾ?!

Putin vvani
Published on

ನವದೆಹಲಿ: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ತಮ್ಮ ಮಿತ್ರ ಪ್ರಧಾನಿ ನರೇಂದ್ರ ಮೋದಿಯವರ 'ಮೇಕ್​ ಇನ್ ಇಂಡಿಯಾ' ಉಪಕ್ರಮವನ್ನು ಶ್ಲಾಘಿಸಿದ್ದಾರೆ ಎಂದು ರಷ್ಯಾದ ಸರ್ಕಾರ ನಿಯಂತ್ರಿತ ಸುದ್ದಿ ವಾಹಿನಿ RT ವರದಿ ಮಾಡಿದೆ.

ಮಾಸ್ಕೋದಲ್ಲಿ ಸ್ಟೇಟ್ ಏಜೆನ್ಸಿ ಫಾರ್ ಸ್ಟ್ರಾಟೆಜಿಕ್ ಇನಿಶಿಯೇಟಿವ್ಸ್ ನಡೆಸಿದ ವಾರ್ಷಿಕ ವೇದಿಕೆಯಲ್ಲಿ ಮಾತನಾಡಿದ ಪುಟಿನ್, "ನಮ್ಮ ಕಾಲದ ಬಲಶಾಲಿ ಕಲ್ಪನೆಗಳು" ಎಂದು ಮೇಕ್​ ಇನ್ ಇಂಡಿಯಾವನ್ನು ಕರೆದರು. ಇದರಲ್ಲಿ ಅವರು ದೇಶೀಯ ಉತ್ಪನ್ನಗಳು ಮತ್ತು ಬ್ರಾಂಡ್‌ಗಳ ಅಭಿವೃದ್ಧಿಯನ್ನು ಉತ್ತೇಜಿಸಲು ಭಾರತದ ಉದಾಹರಣೆ ನೀಡಿದರು.

"ಭಾರತದಲ್ಲಿರುವ ನಮ್ಮ ಸ್ನೇಹಿತ ಪ್ರಧಾನಿ ನರೇಂದ್ರ ಮೋದಿ ಅವರು ಕೆಲವು ವರ್ಷಗಳ ಹಿಂದೆ 'ಮೇಕ್ ಇನ್ ಇಂಡಿಯಾ' ಪರಿಕಲ್ಪನೆಯನ್ನು ಪ್ರಸ್ತುತಪಡಿಸಿದರು. ಇದು ಭಾರತದ ಆರ್ಥಿಕತೆಯ ಮೇಲೆ ಬಹಳ ಒಳ್ಳೆಯ ಪರಿಣಾಮವನ್ನು ಬೀರಿದೆ ಎಂದು ಪುಟಿನ್ ಹೇಳಿದರು.

"ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಯೋಜನೆ ಅನುಕರಿಸುವುದರಿಂದ ಯಾವುದೇ ಹಾನಿ ಆಗುವುದಿಲ್ಲ." ಎಂದು ಅವರು ಹೇಳಿದರು. ಇದಕ್ಕೂ ಮೊದಲು, ನವದೆಹಲಿಯಲ್ಲಿ ರಷ್ಯಾದ ರಾಯಭಾರಿ ಡೆನಿಸ್ ಅಲಿಪೋವ್ ಅವರು ವಿಶೇಷ "ರಷ್ಯಾ-ಭಾರತ ಪಾಲುದಾರಿಕೆ" "ಎಂದಿಗೂ ಹೆಚ್ಚು ಬಲಶಾಲಿಯಾಗಿದೆ" ಎಂದು ಹೇಳಿದರು.

ಈ ಸಂದರ್ಭ ಭಾರತದಲ್ಲಿನ ರಷ್ಯಾದ ರಾಯಭಾರಿ, "ರಷ್ಯಾದ ಬಗ್ಗೆ ಪ್ರತಿದಿನ ಮತ್ತು ಜಾಗತಿಕ ಮಟ್ಟದಲ್ಲಿ ಸುಳ್ಳುಗಳು ಹರಡುತ್ತಿವೆ. ರಷ್ಯಾ-ಭಾರತದ ಸಂಬಂಧಗಳನ್ನು ಅಡ್ಡಿಪಡಿಸುವ ಪ್ರಯತ್ನಗಳು ನಡೆಯುತ್ತಿವೆ. ಆದರೆ ಅನಿವಾರ್ಯ ಸತ್ಯವೆಂದರೆ- ರಷ್ಯಾ-ಭಾರತದ ವಿಶೇಷ ಕಾರ್ಯತಂತ್ರದ ಪಾಲುದಾರಿಕೆಯು ಶಕ್ತಿಯನ್ನು ತೋರಿಸಿದ್ದು ನಾವು ಎಂದಿಗಿಂತಲೂ ಬಲವಾಗಿ ಬೆಳೆಯುತ್ತಿದ್ದೇವೆ" ಎಂದು ಅವರು ಹೇಳಿದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net