ದೇಶದ್ರೋಹ ಎಸಗಿದವರು ಕಠಿಣ ಶಿಕ್ಷೆ ಅನುಭವಿಸುತ್ತಾರೆ; ವ್ಯಾಗ್ನರ್ ಗ್ರೂಪ್ ವಿರುದ್ಧ ವ್ಲಾಡಿಮಿರ್ ಪುಟಿನ್ ಆಕ್ರೋಶ

Putin
Published on

ಮಾಸ್ಕೋ: ವ್ಯಾಗ್ನರ್ ಗ್ರೂಪ್ ಸೈನಿಕರು ಮತ್ತು ದೇಶದ ಮಿಲಿಟರಿ ವ್ಯವಸ್ಥೆ ವಿರುದ್ಧ ದಾಳಿ ನಡೆಸುತ್ತಿರುವವರು ‘ದೇಶದ್ರೋಹಿಗಳು.’ ಅವರೆಲ್ಲರನ್ನು ಬಂಧಿಸಿ, ಕಠಿಣವಾಗಿ ಶಿಕ್ಷಿಸಲಾಗುವುದು ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ. ಬಂಡಾಯ ಎದ್ದಿರುವ ವ್ಯಾಗ್ನರ್ ಸೇನೆ(ಅರೆಸೇನಾ ಮಾದರಿಯಲ್ಲಿ ಸೇನೆಯ ಪರವಾಗಿ ಕಾರ್ಯನಿರ್ವಹಿಸುವ ಖಾಸಗಿ ಮಿಲಿಟರಿ ಕಂಪನಿ)ಯ ಕ್ರಮವನ್ನು ‘ಬೆನ್ನಿಗೆ ಇರಿತ’ ಎಂದು ಕರೆದಿರುವ ಪುಟಿನ್, ದೇಶದ್ರೋಹ ಮಾಡುತ್ತಿರುವವರು ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.

ನಾವೀಗ ವಿಶ್ವಾಸ ದ್ರೋಹವನ್ನು ಎದುರಿಸುತ್ತಿದ್ದೇವೆ. ಅತಿಯಾದ ಮಹತ್ವಾಕಾಂಕ್ಷೆ ಮತ್ತು ವೈಯಕ್ತಿಕ ಹಿತಾಸಕ್ತಿಗಳು ದೇಶದ್ರೋಹಕ್ಕೆ ಕಾರಣವಾಗುತ್ತದೆ. ವ್ಯಾಗ್ನರ್ ಹೋರಾಟಗಾರರು ಮತ್ತು ಕಮಾಂಡರ್‌ಗಳು ನಮ್ಮ ಸೈನ್ಯದೊಂದಿಗೆ ಹೋರಾಡಿ ಸಾಯುತ್ತಾರೆ. ನಮ್ಮ ಏಕತೆಯನ್ನು ಮುರಿಯುವ ಕ್ರಮಗಳು 'ನಮ್ಮ ದೇಶ ಮತ್ತು ಜನರ ಬೆನ್ನಿಗೆ ಇರಿತ' ಎಂದು ಪುಟಿನ್ ಹೇಳಿದ್ದಾರೆ.

ವ್ಯಾಗ್ನರ್​ ಗುಂಪಿನ ಮುಖ್ಯಸ್ಥ ಯೆವ್ಗೆನಿ ಪ್ರಿಗೊಜಿನ್ ರಷ್ಯಾದ ವಿರುದ್ಧ ಸಮರ ಸಾರಿದ್ದು, ಸೈನ್ಯದ ಮೇಲೆ ದಾಳಿಗೆ ನಡೆಸುತ್ತಿವೆ. ರಷ್ಯಾ ಇದನ್ನು 'ಸಶಸ್ತ್ರ ದಂಗೆ' ಎಂದು ಕರೆದಿದೆ. ಈ ಗುಂಪಿನ 30 ಸಾವಿರಕ್ಕೂ ಹೆಚ್ಚು ಹೋರಾಟಗಾರರು ಮಾಸ್ಕೋದತ್ತ ಧಾವಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ವ್ಯಾಗ್ನರ್‌ ಮುಖ್ಯಸ್ಥನ ಬಂಧನಕ್ಕೆ ಆದೇಶ

ವ್ಯಾಗ್ನರ್ ಸೇನೆಯ ಮುಖ್ಯಸ್ಥ ಪ್ರಿಗೋಜಿನ್ ವಿರುದ್ಧ ರಷ್ಯಾದ ರಕ್ಷಣಾ ಸಚಿವಾಲಯ ಬಂಧನ ವಾರಂಟ್ ಹೊರಡಿಸಿದೆ. ಪ್ರಿಗೋಜಿನ್ ವಿರುದ್ಧ ರಕ್ಷಣಾ ಸಚಿವಾಲಯವು ಸಶಸ್ತ್ರ ದಂಗೆಯ ಆರೋಪ ಹೊರಿಸಿದೆ. ಜತೆಗೆ ಪ್ರಿಗೋಜಿನ್ ಆದೇಶಗಳನ್ನು ಪಾಲಿಸದಂತೆ ವ್ಯಾಗ್ನರ್ ಗುಂಪಿನ ಪಡೆಗಳಿಗೆ ಮನವಿ ಮಾಡಿದೆ. ಸಶಸ್ತ್ರ ದಂಗೆಗಾಗಿ ಪ್ರಿಗೋಜಿನ್ 20 ವರ್ಷಗಳ ಜೈಲು ಶಿಕ್ಷೆಯನ್ನು ಎದುರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ರಷ್ಯಾ ರಕ್ಷಣಾ ಇಲಾಖೆಯ ಪ್ರಧಾನ ಕಚೇರಿ ಇರುವ ರೊಸ್ಟೊವ್​​ನಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಯಿಂದ ಹೊರಬರದಂತೆ ಜನರಿಗೆ ರೊಸ್ಟೊವ್ ರಾಜ್ಯಪಾಲ ವಸಿಲಿ ಗೊಲುಬೆವ್ ಮನವಿ ಮಾಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net