More

    ಬರೀ ಮುಟ್ಟಿದರೇ ಹೊಗೆ ಹಾಕಿಸಬಲ್ಲ ಕಪ್ಪೆಗಳು!!

    | ಸುರೇಶ್ ಮರಕಾಲ ಸಾಯ್ಬರಕಟ್ಟೆ

    ನಾವಾಗ ಒಂದನೇ ತರಗತಿಯಲ್ಲಿದ್ದೆವು. ಶನಿವಾರ, ಆದಿತ್ಯವಾರ ಬಂತೆಂದರೆ ಮುಗಿಯಿತು, ತೋಡುಬದಿಗೆ, ಗದ್ದೆ ಬದಿಗೆ ಹೋಗಿ ನಮ್ಮ ಕಪಿ ಸೈನ್ಯ ಜಮಾಯಿಸುತ್ತಿತ್ತು! ಆ ವೇಳೆಗಾಗಲೆ ಕೆಲವು ದೊಡ್ಡ ಗಂಡಸರು ಉದ್ದನೆಯು ಕೋಲು ಹಿಡಿದುಕೊಂಡು ಕಲ್ಲು ಎಡೆಗಳಲ್ಲಿ, ಗದ್ದೆಬದಿಗಳಲ್ಲಿ- ಆಲಸ್ಯದ ಕಣ್ಣು ಬಿಟ್ಟುಕೊಂಡು ಕಲ್ಲಿನಂತೆ ಬಿದ್ದುಕೊಂಡಿರುತ್ತಿದ್ದ ದೊಡ್ಡದೊಡ್ಡ ಡೋಂಗರು ಕಪ್ಪೆಗಳನ್ನು ಹಿಡಿದು ಚೀಲಕ್ಕೆ ಹಾಕಿಕೊಳ್ಳುತ್ತಿದ್ದರು. ಆ ಕಪ್ಪೆಗಳಾದರೋ – ದೇಹದಲ್ಲಿ ಮಾಂಸ ತುಂಬಿಕೊಂಡು ಎಷ್ಟೊಂದು ಸೋಮಾರಿಗಳಾಗಿ ಬಿದ್ದುಕೊಂಡಿರುತ್ತಿದ್ದವೆಂದರೆ- ಕಪ್ಪೆ ಹಿಡಿಯುವವರಿಗೆ ಯಾವುದೇ ಕಿರಿಕಿರಿ ಮಾಡದೆ “ಹಿಡಿಯೋದಾದ್ರೆ ಹಿಡಿದುಕೊಳ್ಳಿ” ಎಂಬಂತೆ ತೆಪ್ಪಗೆ ಚೀಲ ಸೇರಿಬಿಡುತ್ತಿದ್ದವು! ನಮ್ಮ ಶಾಲೆಗೆ ತುಸು ದೂರದಲ್ಲಿಯೇ ಒಂದು ಕಟ್ಟಡವಿತ್ತು. ಅದರ ಎದುರು ಬಣ್ಣಬಣ್ಣದ ಪಟ್ಟಿಗಳಿರುವ ಒಂದು ದೊಡ್ಡ ತೆರೆದ ಸಿಮೆಂಟ್ ತೊಟ್ಟಿ. ಆ ತೊಟ್ಟಿಯಲ್ಲಿ ಹಿಡಿದ ಕಪ್ಪೆಗಳನ್ನೆಲ್ಲ ಹಾಕುತ್ತಿದ್ದರು. ಆ ಪ್ರದೇಶಕ್ಕೆ ಎಲ್ಲರೂ “ಕಪ್ಪೆ ಹಿಡಿಯುವವರ ಮನೆ” ಎಂತಲೇ ಕರೆಯುತ್ತಿದ್ದುದು. ನಾವು ಚಿಕ್ಕ ಮಕ್ಕಳೋ- ಅಲ್ಲಿ ಹತ್ತಿರ ಹೋಗಲೂ ಹೆದರುತ್ತಿದ್ದೆವು- ‘ಮಕ್ಕಳನ್ನು ಹಿಡಿಯುತ್ತಾರೆ’ ಎಂಬ ಸುಳ್ಳು ವದಂತಿಯಿಂದ! ಆ ಕಪ್ಪೆಗಳನ್ನೆಲ್ಲಾ ವಿದೇಶಕ್ಕೆ ಕಳುಹಿಸುತ್ತಾರೆ, ಅಲ್ಲಿಂದ ಅವುಗಳೆಲ್ಲಾ ಬಲೂನುಗಳಾಗಿ ಬರುತ್ತವೆ ಎಂದು ಎಲ್ಲರೂ ಹೇಳುತ್ತಿದ್ದುದರಿಂದ, ನಾವು ಅನೇಕರು ಪ್ರಾಥಮಿಕ ಶಾಲೆಯಲ್ಲಿ ಬಲೂನಿಗೆ ಬಾಯಿಹಾಕಲು ಹೇಸುತ್ತಿದ್ದೆವು. ಬಲೂನು ಮಾಡುತ್ತಿದ್ದರೋ, ಬಾಂಬು ಮಾಡುತ್ತಿದ್ದರೋ!, ಒಟ್ಟಿನಲ್ಲಿ ಲಕ್ಷಾಂತರ ಕಪ್ಪೆಗಳು ನಿರ್ನಾಮವಾದದ್ದಂತೂ ಸತ್ಯ! ಮುಂದೆ ಸರ್ಕಾರ ತಡವಾಗಿಯಾದರೂ ಎಚ್ಚೆತ್ತು, ಕಪ್ಪೆಗಳ ರಫ್ತನ್ನು ನಿಲ್ಲಿಸದೇ ಹೋಗಿದ್ದರೆ, ಇವತ್ತು ನಾವು ಕಪ್ಪೆಗಳ ಸಂತತಿಯನ್ನೇ ಕಳೆದುಕೊಳ್ಳುತ್ತಿದ್ದೆವೇನೊ?! ಆದರೊಂದು ಮಾತು, ಆ ಕಪ್ಪೆ ಹಿಡಿಯುವವರು ನಮ್ಮ ದೇಶದಲ್ಲಿ ಕಪ್ಪೆ ಹಿಡಿದದ್ದರಿಂದ ಬಚಾವಾದರು! ಏಕೆಂದರೆ ಇವರು ಏನಾದರೂ ದಕ್ಷಿಣ, ಮಧ್ಯ ಮತ್ತು ಲ್ಯಾಟಿನ್ ಅಮೆರಿಕಗಳಲ್ಲಿ ಕಪ್ಪೆ ಹಿಡಿಯಲು ಹೋಗಿದ್ದರೆ, ಕಪ್ಪೆಗಳು ಹಾಯಾಗಿ ಕುಳಿತಲ್ಲೇ ಕುಳಿತಿರುತ್ತಿದ್ದವು, ಇವರು ಮಾತ್ರ ಪರಾಂಧಾಮ ಸೇರುತ್ತಿದ್ದರು!! ಏಕೆಂದರೆ, ಈ ಸ್ಥಳಗಳಲ್ಲಿ ಪ್ರಪಂಚದಲ್ಲೆ ಅತೀ ಘೋರ ವಿಷ ಹೊಂದಿರುವ ಕಪ್ಪೆಗಳಿವೆ. ಅವುಗಳ ವಿಷ ನಾಗರಹಾವಿನ ವಿಷಕ್ಕಿಂತ ನೂರಾರು ಪಟ್ಟು ತೀಕ್ಷ್ಣವಾದದ್ದು!! ನಾವು ‘ಕಾರ್ಕೋಟಕ ವಿಷ’ ಅಂತೀವಲ್ಲ, ಥೇಟ್ ಅಂಥದ್ದು ಅಥವಾ ಅದಕ್ಕಿಂತಲೂ ಮಿಗಿಲು!

    ಕಪ್ಪೆಗಳಲ್ಲಿ ಅನೇಕ ಜಾತಿಗಳಿವೆ. ನಮ್ಮ ಮುಂಗಾಲು ಗಂಟಿನೆತ್ತರ ಬೆಳೆಯಬಲ್ಲ ಗೊಲಿಯಾತ್ ಕಪ್ಪೆಗಳಿವೆ!, ಮರದಿಂದ ಮರಕ್ಕೆ ಗಾಳಿಯಲ್ಲಿ ತೇಲಿಕೊಂಡು ಹಾರಬಲ್ಲ ‘ಹಾರುವ’ ಕಪ್ಪೆಗಳಿವೆ, ‘ಬುಲ್‌ಫ್ರಾಗ್’ ಎಂಬ ಕಪ್ಪೆ – ಹೆಸರೇ ಸೂಚಿಸುವಂತೆ ದಡಿಯರಲ್ಲಿ ದಡಿಯ!; ಬರೋಬ್ಬರಿ ಮೂರೂವರೆ-ನಾಲ್ಕು ಕೆ.ಜಿ. ತೂಗುತ್ತದೆ!! ಎಲ್ಲಾ ಕಡೆ ಹಾವುಗಳು ಕಪ್ಪೆಗಳನ್ನು ಬಾಯಲ್ಲಿಟ್ಟುಕೊಂಡು ನುಂಗುವುದನ್ನು ನಾವು ನೋಡಿದರೆ, ಈ ದಡಿಯ ಬುಲ್‌ಫ್ರಾಗ್‌ಗಳು ಮೀನನ್ನು, ಮಿಡತೆಗಳನ್ನು, ಹಕ್ಕಿಗಳನ್ನು ಕೊನೆಗೆ ಹಸಿವಾದರೆ ಹಾವನ್ನೇ ಇಡಿಯಾಗಿ ನುಂಗುತ್ತವೆ!! ನಮ್ಮ ಪ್ರಕೃತಿಯೇ ಅಂತಹ ವಿಸ್ಮಯಗಳ ಆಗರ!!

    ಇಪ್ಪತ್ತನಾಲ್ಕನೆಯ ಹಣತೆಯ ಈ ಕಂತಿನಲ್ಲಿ ನಾನು ಹೇಳಲು ಹೊರಟಿರುವುದು ಇನ್ನೊಂದು ರೀತಿಯ ಕಪ್ಪೆಯನ್ನು. ಅವುಗಳು ಬುಲ್‌ಫ್ರಾಗ್‌ನಂತೆ ಕೇಜಿಗಟ್ಟಲೆ ತೂಗುವುದಿಲ್ಲ, ಬುಲ್‌ಫ್ರಾಗ್‌ನಂತೆ ಮೂರ್ನಾಲ್ಕು ಅಡಿಗಳಷ್ಟು ಎತ್ತರ ಬೇಡಬಿಡಿ, ನಮ್ಮೂರಿನ ಡೋಂಗರು ಕಪ್ಪೆಗಳಷ್ಟೂ ದೊಡ್ಡದಿರುವುದಿಲ್ಲ! ಹೆಚ್ಚೆಂದರೆ ಅವುಗಳು ಕೇವಲ ಒಂದೂವರೆ ಸೆಂಟಿಮೀಟರ್‌ನಿಂದ ನಾಲ್ಕು ಸೆಂಟಿಮೀಟರ್‌ತನಕ ಬೆಳೆಯಬಲ್ಲವು, ಎಂದರೆ ನಿರಾಯಾಸವಾಗಿ ನಮ್ಮ ಹಸ್ತದ ಮೇಲೆ ಇಪ್ಪತ್ತರಿಂದ ಇಪ್ಪತ್ತೈದು ಕಪ್ಪೆಗಳನ್ನು ಕೂರಿಸಿಕೊಳ್ಳಬಹುದು! ಹಾಗಂತ ಕೂರಿಸಿಕೊಂಡೀರಾ ಮತ್ತೆ!, ಏಕೆಂದರೆ ಕೂರಿಸಿಕೊಂಡರೆ ಅವು ನಿರಾತಂಕವಾಗಿ ಕೂತಿರುತ್ತವೆ, ನಾವು ಮಾತ್ರ ಶಾಶ್ವತವಾಗಿ ಪರಂಧಾಮದ ಯಾತ್ರೆಗೆ ಕೂತೇ ಬಿಡುತ್ತೇವೆ!- ಅಷ್ಟೊಂದು ಘೋರ ವಿಷ ಅವುಗಳದ್ದು!! ಕೈಯಲ್ಲಿ ಗಾಯವೇನಾದರೂ ಇದ್ದರೆ ‘ಅಯ್ಯೋ…’ ಎನ್ನುವುದರೊಳಗೆ, ಮರೆತು ಕೈಯನ್ನು ಬಾಯಿಗೆ ಹಾಕಿಕೊಂಡರೆ ‘ಓಹ್…..” ಎನ್ನುವುದರೊಳಗೆ- ವಿಷದ ರುಚಿ ತಿಳಿಯುವ ಮೊದಲು- ಸಾವಿನ ಮನೆ ಬಾಗಿಲು ತೆರೆದಿರುತ್ತದೆ!

    ಬರೀ ಮುಟ್ಟಿದರೇ ಹೊಗೆ ಹಾಕಿಸಬಲ್ಲ ಕಪ್ಪೆಗಳು!!

    ಅಮೆರಿಕದ ಬೊಲಿವಿಯಾ, ಕೋಸ್ಟಾರಿಕಾ, ಬ್ರೆಜಿಲ್, ಕೊಲಂಬಿಯಾ, ಈಕ್ವೆಡಾರ್, ವೆನಿಜು಼ವೆಲಾ, ಫ್ರೆಂಚ್ ಗಯಾನಾ, ಪೆರು, ಪನಾಮಾ, ನಿಕಾರುಗಾವಾ ಮೊದಲಾದೆಡೆ ವಾಸಿಸುವ ಈ ಕಪ್ಪೆಯನ್ನು “ಡಾರ್ಟ್-ಫ್ರಾಗ್” ಅಥವಾ “ಘೋರ ವಿಷದ ಕಪ್ಪೆ” ಎನ್ನುತ್ತಾರೆ. ಹೆಚ್ಚೆಂದರೆ ಎರಡು ಗ್ರಾಂ ತೂಗುವ ಈ ಕಪ್ಪೆಗಳ ವಿಶೇಷ ಅವುಗಳ ಕಣ್ಣುಕೋರೈಸುವ ಗಾಢ ಬಣ್ಣ! ಕಡು ನೀಲಿ, ಕೆಂಪು, ಕಪ್ಪು, ಹಸಿರು ಮತ್ತು ಚಿನ್ನದ ಬಣ್ಣ ಹೊಂದಿರುವ ಈ ಕಪ್ಪೆಗಳ ಮೈಮೇಲೆ ಚುಕ್ಕೆಗಳ ಚಿತ್ತಾರವಿರುತ್ತದೆ. ಅವುಗಳ ಕಣ್ಣು ಕೋರೈಸುವ ಬಣ್ಣ ಎರಡು ರೀತಿಯಲ್ಲಿ ಸಹಕಾರಿಯಾಗಿದೆ; ಒಂದು- ಯಾವುದೇ ಶತ್ರುಗಳು ಅವುಗಳ ತೀಕ್ಷ್ಣ ಬಣ್ಣ ನೋಡಿಯೇ, ‘ಇದೊಂದು ಅಪಾಯಕಾರಿ ಪ್ರಾಣಿ, ಇದರ ಸಹವಾಸವೇ ಬೇಡ’ ಎಂದು ವಾಪಸಾಗುತ್ತದೆ, ಎರಡು- ಹೆಣ್ಣು ಕಪ್ಪೆಗಳು ಗಂಡನ್ನು ಆರಿಸುವುದು ಗಂಡಿನ ಮೈಬಣ್ಣದ ತೀಕ್ಷ್ಣತೆಯ ಆಧಾರದ ಮೇಲೆ! ಬಹುತೇಕ ಕಾಡು, ಪರ್ವತಶ್ರೇಣಿ, ನದಿ, ಸರೋವರಗಳ ಪಕ್ಕದ ನೆಲಮಟ್ಟದಲ್ಲಿ ಇವುಗಳ ವಾಸ. ಕೆಲವೊಮ್ಮೆ ನೆಲದಿಂದ ಸುಮಾರು ಹತ್ತು ಮೀಟರ್ ಎತ್ತರದವರೆಗಿನ ಮರಗಳಲ್ಲೂ ವಾಸಿಸುವುದುಂಟು!

    ಬರೀ ಮುಟ್ಟಿದರೇ ಹೊಗೆ ಹಾಕಿಸಬಲ್ಲ ಕಪ್ಪೆಗಳು!!

    ಡಾರ್ಟ್ ಫ್ರಾಗ್ ವಿಷಕಾರಿಯಾದರೂ ಅವುಗಳೇನೂ ಕಚ್ಚುವುದಿಲ್ಲ. ಅದರ ವಿಷ ಇರುವುದು ಅವುಗಳ ಚರ್ಮದಲ್ಲಿ. ಈ ವಿಷದಲ್ಲಿ ಪ್ರಮುಖವಾದದ್ದು, ಲಿಪೋಫಿಲಿಕ್ ಅಲ್ಕಾಲಾಯಿಡ್ ವಿಷ. ಇದಲ್ಲದೆ, ಇನ್ನೂ ಸುಮಾರು ಇಪ್ಪತ್ತೆಂಟು ಬಗೆಯ ಬೇರೆಬೇರೆ ಅಲ್ಕಲಾಯಿಡ್ ವಿಷಗಳನ್ನು ಇವುಗಳು ತಮ್ಮ ಚರ್ಮದಿಂದ ಹೊರಸೂಸುತ್ತವೆ. ಈ ಕಪ್ಪೆಗಳಲ್ಲಿ ಫಿಲ್ಲೋಬೇಟ್ಸ್ ಟೆರಿಬಿಲಿಸ್ ಪ್ರಬೇಧ ಮಾತ್ರ ಅತ್ಯಂತ ಅಪಾಯಕಾರಿಯಾದ ವಿಷ ಹೊಂದಿದೆ. ಈ ಪ್ರಬೇಧದ ‘ಚಿನ್ನದ ಬಣ್ಣದ ಕಪ್ಪೆ’ಯ (ಗೋಲ್ಡನ್ ಡಾರ್ಟ್ ಫ್ರಾಗ್) ವಿಷ ಏಕಕಾಲಕ್ಕೆ ಇಪ್ಪತ್ತು ಮಂದಿ ಮನುಷ್ಯರ ಪ್ರಾಣವನ್ನು ತೆಗೆಯಬಹುದು! ಅಷ್ಟೇ ಅಲ್ಲ, ಹತ್ತು ಸಾವಿರ ಇಲಿಗಳು ಇದರ ವಿಷಕ್ಕೆ ಒಂದೇ ಕ್ಷಣಕ್ಕೆ ಉಸಿರುಕಟ್ಟಿ ಸಾಯಬಲ್ಲವು!! ವಿಚಿತ್ರವೆಂದರೆ, ಡಾರ್ಟ್ ಕಪ್ಪೆಗಳ ಈ ವಿಷ ಅವುಗಳ ದೇಹದಲ್ಲಿ ತಾನಾಗಿಯೇ ತಯಾರಾಗುವುದಿಲ್ಲ! ಬದಲಿಗೆ, ಅವುಗಳು ತಮ್ಮ ಆಹಾರವಾಗಿ ಬಳಸುವ ಕೆಲವು ಜಾತಿಯ ಇರುವೆ, ಶತಪದಿ, ಹುಳುಗಳನ್ನು ತಿನ್ನುವುದರಿಂದ ನೈಸರ್ಗಿಕವಾಗಿ ಅವುಗಳ ದೇಹದಲ್ಲಿ ಇಂತಹ ಭೀಕರ ವಿಷ ಹುಟ್ಟಿಕೊಳ್ಳುತ್ತದೆ. ಮೃಗಾಲಯದಲ್ಲಿ ಮತ್ತು ಪ್ರಯೋಗಾಲಯದಲ್ಲಿ ಸಾಕುವ ಡಾರ್ಟ್ ಕಪ್ಪೆಗಳಿಗೆ ಇಂತಹ ಆಹಾರ ಕೊಡದೇ ಇದ್ದಾಗ, ಅವುಗಳ ದೇಹದಲ್ಲಿ ಯಾವುದೇ ವಿಷವೂ ಉತ್ಪತ್ತಿಯಾಗದಿರುವುದನ್ನು ವಿಜ್ಞಾನಿಗಳು ಗುರುತಿಸಿದ್ದಾರೆ.

    ಇಂತಹ ಘನ ವಿಷವನ್ನು ಹೊಂದಿರುವ ಕಪ್ಪೆಗಳನ್ನು ನೋಡಿ ಇವುಗಳ ಸಹವಾಸವೇ ಬೇಡವೆಂದು ಹೆದರಿ ದೂರ ಹೋಗುವ ಪ್ರಾಣಿಗಳೇ ಹೆಚ್ಚು. ಆದರೆ ಇವುಗಳನ್ನೂ ತಿನ್ನುವ ಪ್ರಾಣಿಯೊಂದನ್ನು ಪ್ರಕೃತಿ ಸೃಷ್ಟಿಸಿದೆ ಎಂದರೆ ಆಶ್ಚರ್ಯವಾಗಬಹುದಲ್ಲವೆ? ಅಮೆಜಾ಼ನಿನ ‘ನೆಲಹಾವು’ (Liopis Epinephelus) ಮುಟ್ಟಿದರೇ ಆಪೋಷನ ತೆಗೆದುಕೊಳ್ಳುವ ಡಾರ್ಟ್ ಕಪ್ಪೆಗಳನ್ನು ಯಾವುದೇ ಯೋಚನೆ ಇಲ್ಲದೆ ತಿಂದು ಮುಗಿಸುತ್ತದೆ! ಸಾವಿರಾರು ವರ್ಷಗಳಿಂದ ಈ ಕಪ್ಪೆಗಳನ್ನು ತಿನ್ನುತ್ತ ಬಂದಿರುವ ಅಮೆಜಾ಼ನಿನನ ನೆಲದ ಹಾವು, ಡಾರ್ಟ್ ಕಪ್ಪೆಗಳ ಪ್ರಾಣೋತ್ಕ್ರಮಣಕಾರಿ ವಿಷವನ್ನೂ ಜೀರ್ಣಿಸಿಕೊಳ್ಳುವ ಪ್ರತಿರೋಧ ಶಕ್ತಿಯನ್ನು ಬೆಳೆಸಿಕೊಂಡಿವೆ!

    ಬರೀ ಮುಟ್ಟಿದರೇ ಹೊಗೆ ಹಾಕಿಸಬಲ್ಲ ಕಪ್ಪೆಗಳು!!

    ವಿಷಕಾರಿ ಡಾರ್ಟ್ ಕಪ್ಪೆಗಳು ಇನ್ನೊಂದು ವಿಚಾರದಲ್ಲಿ ವಿಶೇಷತೆಯನ್ನು ಮೆರೆಯುತ್ತವೆ. ಕಪ್ಪೆಗಳ ಜಾತಿಯಲ್ಲೆ ಸಾಮಾನ್ಯವಾಗಿ ಇಲ್ಲದ – ಮರಿಗಳ ಪಾಲನೆ ವಿಚಾರದಲ್ಲಿ ತೆಗೆದುಕೊಳ್ಳುವ ಅತಿಶಯ ಕಾಳಜಿಗಾಗಿ- ಈ ಕಪ್ಪೆಗಳು ಹೆಸರುವಾಸಿಯಾಗಿವೆ. ಮೊಟ್ಟೆಯಿಂದ ಹೊರಬರುವ ಚಿಕ್ಕಚಿಕ್ಕ ಗೊದಮರಿಗಳನ್ನು ತಂದೆ ಅಥವಾ ತಾಯಿ ತಮ್ಮ ಬೆನ್ನ ಮೇಲೆ ಹೊತ್ತು, ಸುರಕ್ಷಿತವಾಗಿ ಬದುಕಬಲ್ಲ ವಾತಾವರಣದತ್ತ ಕೊಂಡೊಯ್ಯುತ್ತವೆ. ಹೆಚ್ಚಾಗಿ ಯಾವ ಶತ್ರುವಿನಿಂದಲೂ ತಮ್ಮ ಮರಿ ಅಪಾಯಕ್ಕೀಡಾಗದಂತಹ ಅತ್ಯಂತ ಎತ್ತರದ ಮರಗಳ ತುತ್ತತುದಿಗೆ ಬೆನ್ನಮೇಲೆ ಹೊತ್ತೊಯ್ದು, ಸುರಕ್ಷಿತ ಸ್ಥಳವೆಂದು ಕಂಡುಬಂದಲ್ಲಿ ಮಾತ್ರ ಬಿಟ್ಟು ಬರುತ್ತವೆ. ಹಾಗೆಂದು ಎಲ್ಲಾ ಮರಿಗಳನ್ನು ಒಂದೇ ಬಾರಿಗೆ ಕೊಂಡೊಯ್ಯುವುದಿಲ್ಲ. ರಾಶಿ ರಾಶಿ ಮರಿಗಳಿದ್ದರೂ ಒಂದೊಂದೇ ಮರಿಯನ್ನು ಬೆನ್ನಮೇಲೆ ಹೊತ್ತುಕೊಂಡು ಮರವನ್ನು ಹತ್ತಿ-ಇಳಿದು ಮತ್ತೊಂದು ಮರಿಯ ಬಳಿ ಬರುತ್ತದೆ. ಅಷ್ಟೊಂದು ಅಗಾಧ ಸಂಖ್ಯೆಯ ಮರಿಗಳನ್ನು ಈ ಆಗಸದೆತ್ತರದ ಮರಗಳ ತುತ್ತತುದಿಯ ಸುರಕ್ಷಿತ ಸ್ಥಳಕ್ಕೆ ಸಾಗಹಾಕಲು, ತಂದೆ-ತಾಯಿ ಕಪ್ಪೆಗಳು ಅದೆಷ್ಟು ಬಾರಿ ಮರ ಹತ್ತಿ-ಇಳಿಯುತ್ತವೆ, ಶ್ರಮಪಡುತ್ತವೆ?- ಅದನ್ನುಕಲ್ಪಿಸುವುದೇ ರೋಮಾಂಚನವೆನಿಸುತ್ತದೆ! ಮೊಟ್ಟೆ ಹಾಕಿಬಿಟ್ಟರೆ ‘ತಮ್ಮ ಕರ್ತವ್ಯ ಮುಗಿಯಿತು’ ಎಂದುಕೊಳ್ಳುವ ಕಪ್ಪೆಯ ಜಾತಿಯಲ್ಲಿ, ಡಾರ್ಟ್ ಕಪ್ಪೆಗಳು ವಿಶೇಷವೆನಿಸುವುದು ಈ ಕಾರಣಕ್ಕೆ!!

    ಬರೀ ಮುಟ್ಟಿದರೇ ಹೊಗೆ ಹಾಕಿಸಬಲ್ಲ ಕಪ್ಪೆಗಳು!!

    ಇಷ್ಟೆಲ್ಲ ಓದಿದ ಮೇಲೆ, ಮುಟ್ಟಿದರೇ ಕೊಲ್ಲಬಲ್ಲ ಇಂತಹ ಘೋರ ವಿಷದ ಕಪ್ಪೆ ನಮಗೇತಕಪ್ಪ? ಎನ್ನಬೇಡಿ! ಆಧುನಿಕ ವಿಜ್ಞಾನದಲ್ಲಿ ಈ ಕಪ್ಪೆಗಳ ವಿಷದ ಪಾತ್ರ ಬಲು ದೊಡ್ಡದು. ಇವುಗಳ ವಿಷದಿಂದ ಇಂದು ಅದ್ಭುತ ನೋವು ನಿವಾರಕ ಔಷಧಗಳನ್ನು ಕಂಡುಹಿಡಿಯಲಾಗಿದೆ. ಡಾರ್ಟ್ ಕಪ್ಪೆಯ ವಿಷವನ್ನು ಲಕ್ಷಾಂತರ ಪಟ್ಟು ದುರ್ಬಲಗೊಳಿಸಿ ತಯಾರಿಸಿದ ಔಷಧ, ಮಾರ್ಫನ್ ಗಿಂತ ಇನ್ನೂರು ಪಟ್ಟು ಶಕ್ತಿಶಾಲಿ ನೋವು ನಿವಾರಕ! ಈ ವಿಷದಿಂದ ತಯಾರಿಸಿ ಔಷಧವನ್ನು ಮುಖ್ಯವಾಗಿ – ಹಿಡಿದ ಮಾಂಸಖಂಡಗಳನ್ನು ಸಡಿಲಗೊಳಿಸಲು, ಹೃದಯ ಉದ್ದೀಪನಕಾರಿಯಾಗಿ, ಹಸಿವನ್ನು ಕಡಿಮೆಗೊಳಿಸಲು ಬಳಸಲಾಗುತ್ತದೆ. ಇದು ಆಧುನಿಕ ಪ್ರಪಂಚದ ಕತೆಯಾದರೆ, ಅಮೆರಿಕಾದ ಅಮೆಜಾ಼ನಿನ ಕಾಡುಜನರಿಗೆ ಈ ಕಪ್ಪೆಗಳು ಮತ್ತೊಂದು ರೀತಿಯಲ್ಲಿ ವರದಾನವಾಗಿದೆ! ಈ ಕಾಡು ಜನರು ಕಪ್ಪೆಗಳನ್ನು ಕೈಗೆ ತಾಗದಂತೆ ಎಲೆಗಳಲ್ಲಿ ಹಿಡಿದು, ನಂತರ ಬೆಂಕಿಯ ಶಾಖಕ್ಕೆ ಹಿಡಿದು, ಅವುಗಳ ಮೈಯಿಂದ ಒಸರುವ ವಿಷವನ್ನು ಪಾತ್ರೆಯಲ್ಲಿ ಸಂಗ್ರಹಿಸುತ್ತಾರೆ. ಸಂಗ್ರಹಿಸಿದ ಈ ವಿಷವನ್ನು ತಮ್ಮ ಬಾಣಗಳ ತುದಿಗೆ ಹಾಗೂ ಊದುಕೊಳವೆ ಕಡ್ಡಿಗಳಿಗೆ ಸವರುತ್ತಾರೆ. ಈ ಬಾಣ ಹಾಗೂ ಊದು ಕೊಳವೆ ಕಡ್ಡಿಗಳು ಪ್ರಾಣಿಗಳ ಮೈಗೆ ಚುಚ್ಚಿದ ಕ್ಷಣಮಾತ್ರದಲ್ಲಿ ಬಿದ್ದುಬಿಡುತ್ತವೆ. ಗಾಯಗೊಂಡ ಬೇಟೆಯನ್ನು ಹಿಂಬಾಲಿಸುತ್ತಾ ಹೋಗುವ ಪ್ರಮೇಯವೇ ಇರುವುದಿಲ್ಲ. ವಿಷತಗುಲಿದ ಪ್ರಾಣಿಯನ್ನು ಚೆನ್ನಾಗಿ ಬೇಯಿಸುವುದರಿಂದ ಹಾಗು ಸಾವಿರಾರು ವರ್ಷಗಳಿಂದ ಅದನ್ನು ತಿನ್ನುತ್ತಾ ಬಂದಿರುವುದರಿಂದ ಈ ಕಾಡುಜನರಿಗೆ ಯಾವುದೇ ಅಪಾಯವಾಗುವುದಿಲ್ಲ!

    ಎಷ್ಟೇ ಭೀಕರ ವಿಷ ಹೊಂದಿದ್ದರೂ, ಡಾರ್ಟ್ ಕಪ್ಪೆಗಳು ಆಧುನಿಕ ಮನುಷ್ಯನಷ್ಟು ವಿಷಕಾರಿ ಅಲ್ಲ ಬಿಡಿ! ಪ್ರಾಣಿಗಳಿಗೆ ಯಾವುದೋ ಒಂದು ಅಂಗ ಮಾತ್ರ ವಿಷ, ಆದರೆ ಮನುಷ್ಯನಿಗೋ….! ಎದೆ ಝಲ್ ಎನಿಸುತ್ತಿದ್ದ, ಅಮೆಜಾ಼ನಿನಂತಹ ದಟ್ಟ ಕಾಡುಗಳೂ ಮನುಷ್ಯನ ಹಣದ ಲಾಲಸೆಯಿಂದ ಬೋಳಿಸಿಕೊಂಡು ಬೆತ್ತಲಾಗುತ್ತಿವೆ!. ಅರವತ್ತು-ಎಪ್ಪತ್ತು ಮೀಟರ್ ಎತ್ತರದ, ತುದಿಯೇ ಕಾಣದ ನೂರಾರು ವರ್ಷದ ಮರಗಳೂ ಮಾನವನ ಕಬ್ಬಿಣದ ನಾಲಗೆಯ ಗರಗಸಕ್ಕೆ ನೆಲಕ್ಕುರುಳಿ ಮಲಗುತ್ತಿವೆ! ಈ ಕಾಡುಗಳನ್ನು ನಂಬಿ ಬದುಕುತ್ತಿರುವ ಪ್ರಾಣಿಗಳೂ ಒಂದೊಂದಾಗಿ ಕಣ್ಮರೆಯಾಗುತ್ತಿವೆ! ಡಾರ್ಟ್ ಕಪ್ಪೆಗಳು ಕೂಡ ಅವುಗಳ ಪಟ್ಟಿಯಲ್ಲಿ ಸೇರಿದೆ ಎಂದು ಬಹಳ ಬೇಸರದಿಂದ ಹೇಳಬೇಕಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts