ಕಂಡು ಕೇಳರಿಯದ ಬಿಕ್ಕಟ್ಟಿಗೆ ತತ್ತರಿಸಿದ ದೊಡ್ಡಣ್ಣ; ಅಮೆರಿಕದಲ್ಲಿ ಕರೊನಾ ಸಾವಿನ ಸಂಖ್ಯೆ 1 ಲಕ್ಷ ಸನಿಹದಲ್ಲಿ, ಸರಿಯಾದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದ್ದೇ ಕಾರಣ

nation 1
Published on

ನವದೆಹಲಿ: ಇಡೀ ಜಗತ್ತು ಕಂಡು ಕೇಳರಿಯದ ಆರೋಗ್ಯ ತುರ್ತು ಪರಿಸ್ಥಿತಿ ಎದುರಿಸುತ್ತಿದ್ದರೆ, ವಿಶ್ವದ ದೊಡ್ಡಣ್ಣ ಎಂದೆನಿಸಿಕೊಂಡಿದ್ದ ಅಮೆರಿಕದ್ದಂತೂ ದುರಂತ ಕಥೆ. ಆಧುನಿಕ ತಂತ್ರಜ್ಞಾನಗಳ ಮೂಲಕ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ಈ ದೇಶ ಕಾಣದ ವೈರಾಣುವಿಗೆ ತತ್ತರಿಸಿದೆ. ಇನ್ನು ಒಂದು-ಎರಡು ದಿನದಲ್ಲಿ ಅಮೆರಿಕದಲ್ಲಿ ಕರೊನಾ ಸಾವಿನ ಸಂಖ್ಯೆ 1 ಲಕ್ಷ ದಾಟಲಿದೆ!

ಇಡೀ ವಿಶ್ವದಲ್ಲಿ ಕರೊನಾ ಸೋಂಕಿತರ ಸಂಖ್ಯೆ 54 ಲಕ್ಷ ದಾಟಿದೆ. ಅದರಲ್ಲಿ ಅಮೆರಿಕದ ಪಾಲು 16.6 ಲಕ್ಷ. ನಿತ್ಯವೂ ಸಾವಿರಾರು ಕೇಸುಗಳು ಬೆಳಕಿಗೆ ಬರುತ್ತಿವೆ. ಆಸ್ಪತ್ರೆಗಳು ಸೋಂಕಿತರಿಂದ ತುಂಬಿ ಹೋಗಿವೆ. ಹೊಸ ರೋಗಿಗಳನ್ನು ದಾಖಲಿಸಲು ಆಸ್ಪತ್ರೆಗಳ ಸಾಮರ್ಥ್ಯ ಸಾಕಾಗುತ್ತಿಲ್ಲ. ಈವರೆಗೆ 98,705 ಮಂದಿ ಸೋಂಕಿಗೆ ಬಲಿಯಾಗಿದ್ದು, 17,133 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ. ಈ ಮಧ್ಯೆ, 446,927 ಮಂದಿ ಗುಣಮುಖರಾಗಿದ್ದಾರೆ.

ಅಮೆರಿಕದಲ್ಲಿ ಮೊದಲ ಕೇಸು ಬೆಳಕಿಗೆ ಬಂದಿದ್ದು ಜನವರಿ 19ರಂದು. ಹಾಗಿದ್ದರೂ, ಡೊನಾಲ್ಡ್ ಟ್ರಂಪ್ ಆಡಳಿತ ಆರಂಭದಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದು ಸಾಮಾನ್ಯ ವೈರಸ್ ಎಂದೇ ಲೆಕ್ಕ ಹಾಕಿದ್ದರು. ಆದರೆ, ಕಳೆದ ಮೂರುವರೆ ತಿಂಗಳಲ್ಲಿ ಅಮೆರಿಕವನ್ನು ಈ ವೈರಾಣು ಕಾಡಿದಷ್ಟು ಜಗತ್ತಿನ ಬೇರಾವ ರಾಷ್ಟ್ರವನ್ನೂ ಕಾಡಿಲ್ಲ. ಕರೊನಾ ಮೊದಲ ಸಾವು ಸಂಭವಿಸಿದ್ದು ಫೆಬ್ರವರಿಯಲ್ಲಿ. ಮಾರ್ಚ್ ಅಂತ್ಯದ ವೇಳೆಗೆ, ಡಿಸ್ಟ್ರಿಕ್ಟ್ ಆಫ್ ಕೊಲಂಬಿಯಾ ಮತ್ತು ಅಮೆರಿಕನ್ ಸಮೋವಾ ಹೊರತುಪಡಿಸಿ ಅಮೆರಿಕದ ಎಲ್ಲ 50 ರಾಜ್ಯಗಳಲ್ಲಿ ಕರೊನಾ ಪ್ರಕರಣಗಳು ದಾಖಲಾಗಿದ್ದವು. ರಕ್ಷಣಾ ಮತ್ತು ಆರ್ಥಿಕ ಸಾಮರ್ಥ್ಯದಲ್ಲಿ ಜಗತ್ತಿನ ನಂ.1 ದೇಶ ಈಗ ಅತಿ ಹೆಚ್ಚು ಕರೊನಾ ಕೇಸುಗಳುಳ್ಳ ನಂ.1 ದೇಶ ಎಂಬ ಕುಖ್ಯಾತಿಗೆ ಗುರಿಯಾಗಿದೆ.

ಟ್ರಂಪ್ ನಿರ್ಲಕ್ಷ್ಯ?: ಟ್ರಂಪ್ ಆಡಳಿತ ಜನವರಿ 31ರಂದು ಸಾರ್ವಜನಿಕ ಆರೋಗ್ಯ ತುರ್ತಸ್ಥಿತಿ ಘೊಷಿಸಿತು. ಬಳಿಕ ಚೀನಾಕ್ಕೆ ಪ್ರಯಾಣ ಬೆಳೆಸಿದ ವಿದೇಶಿ ಪ್ರಜೆಗಳ ಪ್ರವೇಶ ತಡೆಯಲು ಪ್ರಾರಂಭಿಸಿತು. ಆದರೆ ಅಲ್ಲಿದ್ದ ಅಮೆರಿಕನ್ ನಿವಾಸಿಗಳ ಅಮೆರಿಕ ಪ್ರವೇಶವನ್ನು ನಿಷೇಧಿಸಲಿಲ್ಲ. ಅವರನ್ನು ವೈರಾಣು ಪರೀಕ್ಷೆಗೂ ಒಳಪಡಿಸಲಿಲ್ಲ. ಕರೊನಾ ವಿರುದ್ಧದ ಹೋರಾಟಕ್ಕೆ ಆರೋಗ್ಯ ವ್ಯವಸ್ಥೆಯನ್ನು ಸಜ್ಜುಗೊಳಿಸುವುದು, ಪ್ರಯಾಣ ನಿಷೇಧಿಸುವುದು, ತ್ವರಿತಗತಿಯಲ್ಲಿ ಪರೀಕ್ಷೆಗಳನ್ನು ನಡೆಸುವುದು...ಈ ಎಲ್ಲ ವಿಷಯಗಳಲ್ಲೂ ಅಮೆರಿಕ ಸರ್ಕಾರ ವಿಳಂಬ ಧೋರಣೆ ತಾಳಿತು. ಕರೊನಾ ನಮ್ಮನ್ನೇನೂ ಮಾಡಲಾರದು ಎಂಬ ಉದ್ಧಟತನ ಪ್ರದರ್ಶಿಸಿರು ಎಂದರೂ ತಪ್ಪಲ್ಲ. ಸಾಮೂಹಿಕ ಪರೀಕ್ಷೆಯ ಕೊರತೆಯಿಂದಾಗಿ ವೈರಸ್ ವ್ಯಾಪ್ತಿಯನ್ನೇ ಅರ್ಥಮಾಡಿಕೊಳ್ಳಲಾಗದ ಸ್ಥಿತಿ ನಿರ್ವಣವಾಗಿತ್ತು. ಫೆಬ್ರವರಿ ತಿಂಗಳಲ್ಲಿ, ಸರ್ಕಾರ ಸಿದ್ಧಪಡಿಸಿದ್ದ ಪರೀಕ್ಷಾ ಕಿಟ್​ಗಳಲ್ಲಿ ಉತ್ಪಾದನಾ ದೋಷಗಳಿಂದಾಗಿ ಫೆಬ್ರವರಿ ತಿಂಗಳಲ್ಲಿ ಕೈಗೊಂಡ ಪರೀಕ್ಷೆಗಳೆಲ್ಲವೂ ನಿಷ್ಪ್ರಯೋಜಕ ಎನಿಸಿಕೊಂಡವು. ಮಾರ್ಚ್ 10ರ ಹೊತ್ತಿಗೆ ಅಮೆರಿಕ 10,000ಕ್ಕಿಂತ ಕಡಿಮೆ ಜನರನ್ನು ಪರೀಕ್ಷಿಸಿತ್ತು. ಈ ಸಾಂಕ್ರಾಮಿಕ ರೋಗ ಅಮೆರಿಕದಲ್ಲಿ ವಿಪರೀತವಾಗಿ ಹಬ್ಬುತ್ತಿದ್ದರೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತ್ರ ಭಾರೀ ಆಶಾವಾದ ಹೊರಹಾಕುತ್ತಿದ್ದರು.

ಫೆಬ್ರವರಿ 25 ರಂದು, ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ (ಸಿಡಿಸಿ) ಕರೊನಾ ಬಗ್ಗೆ ಎಚ್ಚರ ವಹಿಸಬೇಕು ಮತ್ತು ಎದುರಿಸಲು ಸಿದ್ಧತೆ ನಡೆಸಬೇಕು ಎಂದು ಸಲಹೆ ನೀಡಿತ್ತು. ಆದರೆ, ಗುಣಮಟ್ಟದ ಆರೋಗ್ಯ ಸಲಕರಣೆಗಳನ್ನು ಖರೀದಿಸಲು ಟ್ರಂಪ್ ಆಡಳಿತ ಶುರುಮಾಡಿದ್ದು ಮಾರ್ಚ್ ಮಧ್ಯಾವಧಿ ನಂತರ. ಏತನ್ಮಧ್ಯೆ, ಆರ್ಥಿಕತೆಗೆ ಒತ್ತು ನೀಡಿದ ಟ್ರಂಪ್, ಕಠಿಣ ಲಾಕ್​ಡೌನ್ ನಿಯಮಗಳನ್ನು ಜಾರಿಗೆ ತರದಿದ್ದದ್ದೂ ವೈರಾಣುವಿನ ವ್ಯಾಪಕ ಹರಡುವಿಕೆಗೆ ಕಾರಣವಾಯಿತು ಎಂದು ಅನೇಕರು ದೂರುತ್ತಾರೆ.

ನ್ಯೂಯಾರ್ಕ್ ಟೈಮ್್ಸ ಕಂಬನಿ: ಕರೊನಾ ಸಾವಿನ ಪ್ರಕರಣ ಲಕ್ಷ ದಾಟುತ್ತಿರುವ ಹಿನ್ನೆಲೆಯಲ್ಲಿ ಭಾನುವಾರದ ನ್ಯೂಯಾರ್ಕ್ ಟೈಮ್್ಸ ಪತ್ರಿಕೆ ತನ್ನ ಮೊದಲ ಪುಟದಲ್ಲಿ ಸತ್ತ ಎಲ್ಲ ರೋಗಿಗಳ ಹೆಸರನ್ನು ಪ್ರಕಟಿಸಿದ್ದು, ಇವರೆಲ್ಲರೂ ನಮ್ಮವರೇ ಎಂದು ಕಂಬನಿ ಮಿಡಿದಿದೆ. ಭಾನುವಾರದ ಪತ್ರಿಕೆಯನ್ನು ಅವರಿಗೆಂದೇ ಮೀಸಲಿಟ್ಟಿದೆ. ಮೃತ ವ್ಯಕ್ತಿಯ ವಿಶಿಷ್ಟತೆಯನ್ನು ಒಂದು ವಾಕ್ಯದಲ್ಲಿ ವಿವರಿಸಲು ಸಂಪಾದಕೀಯ ತಂಡ ಯತ್ನಿಸಿದೆ. ಭಾರತದಲ್ಲಿ ಕರೊನಾ ವೈರಾಣುವಿನಿಂದ ಮೃತ ವ್ಯಕ್ತಿಯ ಗುರುತು ಬಹಿರಂಗಪಡಿಸಬಾರದು ಎಂಬ ನಿಯಮ ಜಾರಿಯಲ್ಲಿದೆ.

ಭಾರತೀಯರ ಸಾವು, ಹೋರಾಟ: ಅಮೆರಿಕದಲ್ಲಿ ಕರೊನಾ ಸೋಂಕಿಗೆ ಹಲವು ಭಾರತೀಯರೂ ಮೃತಪಟ್ಟಿದ್ದಾರೆ. ಆದರೆ, ಅನೇಕರ ಮಾಹಿತಿಯನ್ನೂ ಬಹಿರಂಗಪಡಿಸಲಾಗಿಲ್ಲ. ಈ ಬಗೆಗಿನ ಅಧಿಕೃತ ಅಂಕಿ-ಅಂಶಗಳೂ ಲಭ್ಯವಾಗಿಲ್ಲ. ಇತ್ತೀಚೆಗೆ ಭಾರತೀಯ ಮೂಲದ ವೈದ್ಯ ಡಾ. ಸುಧೀರ್ ಎಸ್. ಚೌಹಾನ್ ಅವರು ಕರೊನಾದಿಂದ ಮೃತಪಟ್ಟಿದ್ದರು. ನ್ಯೂಯಾರ್ಕ್​ನ ಜಮೈಕಾ ಆಸ್ಪತ್ರೆಯಲ್ಲಿ ಮೆಡಿಸಿನ್ ಫಿಸಿಷಿಯನ್ ಮತ್ತು ಅಸೋಸಿಯೇಟ್ ಪೋ›ಗ್ರಾಂ ಡೈರೆಕ್ಟರ್ ಐಎಂ ರೆಸಿಡೆನ್ಸಿ ಪೋ›ಗ್ರಾಂ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ನ್ಯೂಜೆರ್ಸಿಯಲ್ಲಿ ಭಾರತ ಮೂಲದ ವೈದ್ಯ ದಂಪತಿ ಸಾವಿಗೀಡಾದ ಸುದ್ದಿ ವರದಿಯಾಗಿತ್ತು. ಅಮೆರಿಕದಲ್ಲಿ ಕರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಭಾರತೀಯ ಮೂಲದ ಅಮೆರಿಕದ ವೈದ್ಯಕೀಯ ತಂಡ ಮುಂಚೂಣಿಯಲ್ಲಿದೆ. ಭಾರತೀಯ-ಅಮೆರಿಕನ್ನರ ಸಂಖ್ಯೆ ತೀರಾ ಕಡಿಮೆ. ವೈದ್ಯಕೀಯ ಕ್ಷೇತ್ರದಲ್ಲಿ ಇಂಡೋ-ಅಮೆರಿಕನ್ನರ ಸಂಖ್ಯೆ ಶೇ.9ರಷ್ಟಿದೆ. ಅಮೆರಿಕದಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರತಿ ಏಳು ವೈದ್ಯರಲ್ಲಿ ಒಬ್ಬರು ಭಾರತೀಯ ಮೂಲದವರಾಗಿದ್ದು, 40 ಮಿಲಿಯನ್ ಜನರಿಗೆ ವೈದ್ಯಕೀಯ ಆರೈಕೆ ಒದಗಿಸುತ್ತಿದ್ದಾರೆ. ಸುಮಾರು 40,000 ವೈದ್ಯಕೀಯ ವಿದ್ಯಾರ್ಥಿಗಳು, ನಿವಾಸಿಗಳು ಮತ್ತು ಭಾರತೀಯ ಮೂಲದ ಜನರು ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ಅನೇಕ ಆಸ್ಪತ್ರೆಗಳಲ್ಲಿ ಹೋರಾಟಕ್ಕೆ ಸಾಥ್ ನೀಡಿದ್ದಾರೆ.

ಒಬಾಮ ಟೀಕೆ: ಟ್ರಂಪ್ ಆಡಳಿತ ಈ ವಿಪತ್ತನ್ನು ಅತ್ಯಂತ ಕೆಟ್ಟದಾಗಿ ನಿರ್ವಹಿಸಿದೆ ಮತ್ತು ಇಡೀ ದೇಶ ಅಸ್ತವ್ಯಸ್ತಗೊಂಡಿದೆ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಟೀಕಿಸಿದ್ದಾರೆ. ನವೆಂಬರ್ ನಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲೂ ಈ ಟೀಕೆ ಮಹತ್ವ ಪಡೆದುಕೊಂಡಿದೆ. ಜಾಗತಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ದೇಶಕ್ಕೆ ಬಲವಾದ ನಾಯಕತ್ವ ಏಕೆ ಬೇಕು ಎಂಬುದಕ್ಕೆ ಅಮೆರಿಕದ ಈಗಿನ ಸ್ಥಿತಿಯೇ ಸಾಕ್ಷಿ ಎಂದಿರುವ ಒಬಾಮ, ಇದು ಕೇವಲ ಒಬ್ಬ ವ್ಯಕ್ತಿ ಅಥವಾ ಪಕ್ಷದ ಪ್ರಶ್ನೆಯಲ್ಲ. ಸ್ವಾರ್ಥತೆ, ವಿಭಜನೆ ಮತ್ತು ಎಲ್ಲ ಕಾಲದಲ್ಲೂ ಇತರರನ್ನು ಶತ್ರುಗಳಾಗಿ ನೋಡುವುದರ ವಿರುದ್ಧ ನಾವು ಸಮರ ಸಾರಬೇಕಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net