ಅಮೆರಿಕ ಅಧ್ಯಕ್ಷ ಟ್ರಂಪ್ ವಿಧಿಸಿದ ಶೇ. 50ರಷ್ಟು ಸುಂಕಕ್ಕೆ ಪ್ರತಿಯಾಗಿ ಭಾರತ, ಅಮೆರಿಕದ ಮೇಲೆ ಶೇ.75ರಷ್ಟು ಸುಂಕ ವಿಧಿಸಲಿ; ಅರವಿಂದ್ ಕೇಜ್ರಿವಾಲ್| Aravind Kejriwal

Aravind Kejrival
Published on

Aravind Kejriwal: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತೀಯ ಸರಕುಗಳ ಮೇಲೆ ವಿಧಿಸಿರುವ ಶೇ.50 ರಷ್ಟು ಸುಂಕಕ್ಕೆ ಪ್ರತಿಯಾಗಿ ಭಾರತ, ಅಮೆರಿಕದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಶೇ. 75ರಷ್ಟು ಸುಂಕ ವಿಧಿಸುವ ಧೈರ್ಯವನ್ನು ಪ್ರಧಾನಿ ಮೋದಿ ಮಾಡಬೇಕು ಎಂದು ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಈ ಕುರಿತು ದೆಹಲಿಯಲ್ಲಿ ಮಾತನಾಡಿರುವ ಕೇಜ್ರಿವಾಲ್, "ಪ್ರಧಾನಿಯವರು ಸ್ವಲ್ಪ ಧೈರ್ಯ ತೋರಿಸಬೇಕೆಂದು ನಾವು ವಿನಂತಿಸುತ್ತೇವೆ. ಇಡೀ ದೇಶ ನಿಮ್ಮ ಬೆಂಬಲಕ್ಕೆ ನಿಂತಿದೆ. ಅಮೆರಿಕ, ಭಾರತೀಯ ರಫ್ತಿನ ಮೇಲೆ ಶೇ. 50 ರಷ್ಟು ಸುಂಕ ವಿಧಿಸಿದೆ. ನೀವು ಅಮೆರಿಕದಿಂದ ಆಮದು ಮಾಡಿಕೊಳ್ಳುವ ಮೇಲೆ ಶೇ. 75 ರಷ್ಟು ಸುಂಕ ವಿಧಿಸಿ. ದೇಶ ಇದಕ್ಕೆ ಸಿದ್ಧವಾಗಿದೆ. ಈ ಬೆದರಿಕೆ ಬಳಿಕವಾದ್ರೂ ಟ್ರಂಪ್ ಕೆಳಗಿಳಿಯುತ್ತಾರೆಯೇ ಎಂದು ನೋಡೋಣ" ಎಂದು ತಿಳಿಸಿದ್ದಾರೆ.

2025 ಡಿಸೆಂಬರ್ 31ರವರೆಗೆ ಅಮೆರಿಕದ ಹತ್ತಿ ಆಮದಿನ ಮೇಲೆ ಶೇ. 11 ರಷ್ಟು ಅಬಕಾರಿ ಸುಂಕವನ್ನು ಮನ್ನಾ ಮಾಡುವ ಮೋದಿ ಸರ್ಕಾರದ ನಿರ್ಧಾರವನ್ನು ಟೀಕಿಸಿದ ಕೇಜ್ರಿವಾಲ್, ಈ ಕ್ರಮದಿಂದ ಸ್ಥಳೀಯ ರೈತರು ಋಣಾತ್ಮಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ, ಅಮೆರಿಕದ ರೈತರು ಶ್ರೀಮಂತರಾಗುತ್ತಾರೆ ಎಂದು ಹೇಳಿದರು.

ಅಮೇರಿಕನ್ ಹತ್ತಿ ಇಲ್ಲಿಗೆ ಬಂದರೆ, ಸ್ಥಳೀಯ ರೈತರು ಮಾರುಕಟ್ಟೆಯಲ್ಲಿ 900 ರೂ.ಗಿಂತ ಕಡಿಮೆ ಪಡೆಯುತ್ತಾರೆ. ಅಮೇರಿಕನ್ ರೈತರು ಶ್ರೀಮಂತರಾಗುತ್ತಾರೆ. ಗುಜರಾತ್ ರೈತರು ಬಡವರಾಗುತ್ತಾರೆ. ಅಕ್ಟೋಬರ್-ನವೆಂಬರ್ ಬೆಳೆ ಋತುವಿನಲ್ಲಿ ರೈತರು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಸರಿಯಾದ ದರದಲ್ಲಿ ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ..ಸಾಲದಿಂದಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳಬಹುದು ಎಂದು ಎಚ್ಚರಿಸಿದರು.

ಹತ್ತಿಯ ಮೇಲೆ ಶೇ.100 ರಷ್ಟು ಸುಂಕ ವಿಧಿಸಬೇಕು. ಟ್ರಂಪ್ ಒಬ್ಬ ಹೇಡಿ, ಎಂದು ಬಣ್ಣಿಸಿದರು. ಅಮೆರಿಕದ ಹತ್ತಿ ಆಮದಿನ ಮೇಲೆ ಶೇ.11 ರಷ್ಟು ಸುಂಕ ವಿಧಿಸಬೇಕೆಂದು. ಇದರ ಜೊತೆಗೆ ನಮ್ಮ ರೈತರಿಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸಬೇಕು. ಮತ್ತು ಆರ್ಥಿಕ ನೆರವು ನೀಡಬೇಕು ಎಂದು ಹೇಳಿದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net