ಪಂಜಾಬ್​ನಲ್ಲಿ ಭೀಕರ ಪ್ರವಾಹ; ಸೆ. 9ರಂದು ಪ್ರಧಾನಿ ಮೋದಿ ಪ್ರವಾಹ ಹಾನಿ ಪ್ರದೇಶಕ್ಕೆ ಭೇಟಿ ನೀಡುವ ಸಾಧ್ಯತೆ| PM Modi

Punjab flood
Published on

PM Modi: ಭೀಕರ ಪ್ರವಾಹದಿಂದ ಅನೇಕ ಮಂದಿಯ ಸಾವು ನೋವು ಮತ್ತು ಆಸ್ತಿ ನಷ್ಟದಿಂದ ಕಂಗೆಟ್ಟಿರುವ ಪಂಜಾಬ್​ ರಾಜ್ಯಕ್ಕೆ ಸೆ. 09ರಂದು ಪ್ರಧಾನಿ ಮೋದಿ ಭೇಟಿ ನೀಡುವ ಸಾಧ್ಯತೆ ಇದ್ದು, ಪ್ರವಾಹ ಹಾನಿ ಪರಿಸ್ಥಿತಿಯನ್ನು ಅವಲೋಕಿಸಲಿದ್ದಾರೆ. ಎಂದು ಭಾನುವಾರ (ಸೆ. 09) ವರದಿಯಾಗಿದೆ.

ಗಡಿ ಜಿಲ್ಲೆಗಳು ಸೇರಿದಂತೆ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆಯನ್ನು ಪ್ರಧಾನಿ ಮೋದಿ ನಡೆಸುವ ನಿರೀಕ್ಷೆಯಿದೆ ಎನ್ನಲಾಗಿದೆ. ಆದಾಗ್ಯೂ, ಅವರ ಅಧಿಕೃತ ವೇಳಾಪಟ್ಟಿಯನ್ನು ಇನ್ನೂ ಘೋಷಿಸಲಾಗಿಲ್ಲ. ಈ ಮಧ್ಯೆ, ಪ್ರವಾಹದಿಂದ 13,289 ಕೋಟಿ ರೂ.ಗಳ ನಷ್ಟ ಆಗಿದೆ ಎಂದು ಪಂಜಾಬ್ ಸರ್ಕಾರ ಅಂದಾಜಿಸಿದೆ.

ಮಂಗಳವಾರ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸಿದ ಬಳಿಕ ಪ್ರಧಾನಿ ವಿಶೇಷ ವಿಮಾನದಲ್ಲಿ ಅಮೃತಸರಕ್ಕೆ ಬರುವ ಸಾಧ್ಯತೆ ಇದೆ. ಮೊದಲಿಗೆ ರಾಜ್ಯ ಸರ್ಕಾರದ ಉನ್ನತ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಲಿದ್ದಾರೆ. ಬಳಿಕ ಗುರುದಾಸ್ಪುರಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ.

ಈಗಾಗಲೇ  ಗೃಹ ಸಚಿವಾಲಯದ ರಾಜೇಶ್ ಗುಪ್ತಾ ನೇತೃತ್ವದ ಎರಡು ಕೇಂದ್ರ ಅಂತರ-ಸಚಿವಾಲಯ ತಂಡಗಳು, ಗ್ರಾಮೀಣಾಭಿವೃದ್ಧಿ ಸಚಿವಾಲಯದ ಸಂತೋಷ್ ಕುಮಾರ್ ತಿವಾರಿ ನೇತೃತ್ವದ ತಂಡ ರಾಜ್ಯದ ಪ್ರವಾಹ ಪರಿಸ್ಥಿತಿಯನ್ನು ಅವಕೋಕಿಸಲು ಬಂದಿವೆ. ಪ್ರವಾಹದಿಂದ ಅಂದಾಜು ಒಟ್ಟು 13,289 ಕೋಟಿ ರೂ. ನಷ್ಟವಾಗಿದೆ ಎಂದು ರಾಜ್ಯ ಅಧಿಕಾರಿಗಳು ಕೇಂದ್ರ ತಂಡಗಳಿಗೆ ವರದಿ ಮಾಡಿದ್ದಾರೆ.

ರಾಜ್ಯ ಸರ್ಕಾರವು ಕೇಂದ್ರ ತಂಡಗಳಿಗೆ ನೀಡಿದ ವರದಿಯ ಪ್ರಕಾರ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆಗೆ ಸಂಬಂಧಿಸಿದ ಮೂಲಸೌಕರ್ಯ ಮತ್ತು ಪ್ರದೇಶಗಳಿಗೆ ಅತಿ ಹೆಚ್ಚು 5,043 ಕೋಟಿ ರೂ. ನಷ್ಟವಾಗದೆ. ಬೆಳೆ ಹಾನಿ 1,858 ಕೋಟಿ ರೂ. ಮತ್ತು ನೀರು ಸರಬರಾಜು ಹಾನಿ 1,520 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಪಂಜಾಬ್ ಮಂಡಿಗೆ ಸುಮಾರು 1,022 ಕೋಟಿ ರೂ. ನಷ್ಟವಾಗಿದ್ದು, ಆರೋಗ್ಯ ಇಲಾಖೆಗೆ ಸುಮಾರು 780 ಕೋಟಿ ರೂ. ನಷ್ಟ ಎಂದು ಅಂದಾಜಿಸಲಾಗಿದೆ. ಗ್ರಾಮೀಣ ಮೂಲಸೌಕರ್ಯವು ತೀವ್ರವಾಗಿ ಹಾನಿಗೊಳಗಾಗಿದೆ. ಇದರಲ್ಲಿ ಗ್ರಾಮೀಣ ರಸ್ತೆಗಳು, ಮೂಲಸೌಕರ್ಯಗಳು, ಆಸ್ಪತ್ರೆಗಳು ಮತ್ತು ಶಾಲಾ ಕಟ್ಟಡಗಳು ಸೇರಿವೆ.

ಕೃಷಿ ಇಲಾಖೆಗೆ 317 ಕೋಟಿ ರೂ. ನಷ್ಟವಾಗಿದ್ದು,  ಶಿಕ್ಷಣ ಇಲಾಖೆಗೆ 542 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ವಿದ್ಯುತ್ ಇಲಾಖೆಯಲ್ಲಿ ಸುಮಾರು 103 ಕೋಟಿ ರೂ., ಉನ್ನತ ಶಿಕ್ಷಣ ಇಲಾಖೆಯಲ್ಲಿ 8 ಕೋಟಿ ರೂ., ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ನೀರು ಸರಬರಾಜು ಇಲಾಖೆಗಳಲ್ಲಿ ತಲಾ 6 ಕೋಟಿ ರೂ. ಮತ್ತು ಪಶುಸಂಗೋಪನಾ ಇಲಾಖೆಯಲ್ಲಿ 7 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಕೇಂದ್ರ ತಂಡಗಳು ಶೀಘ್ರದಲ್ಲೇ ತಮ್ಮ ವರದಿಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net