

ಫ್ಲೋರಿಡಾ: ಇಲ್ಲಿನ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ನಾಸಾದ ಇಬ್ಬರು ಗಗನಯಾನಿಗಳನ್ನು ಹೊತ್ತ ಸ್ಪೇಸ್ ಎಕ್ಸ್ ಸಂಸ್ಥೆಯ ರಾಕೆಟ್ ಯಶಸ್ವಿಯಾಗಿ ಆಗಸಕ್ಕೆ ಚಿಮ್ಮಿತು.
ಸ್ಪೇಸ್ ಎಕ್ಸ್ ಸಂಸ್ಥೆಯ ಫಾಲ್ಕನ್ ರಾಕೆಟ್ 9ರಲ್ಲಿ ಗಗನಯಾನಿಗಳಾದ ಡಗ್ಲಸ್ ಹರ್ಲಿ, ರಾಬರ್ಟ್ ಬೆಹ್ನಕನ್ ಭೂಮಿಯಿಂದ ಅಂದಾಜು 402 ಕಿ.ಮೀ (250 ಮೈಲು)ಎತ್ತರದಲ್ಲಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಸೇರಿಕೊಂಡರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಉಪಾಧ್ಯಕ್ಷ ಮೈಕ್ ಪೆನ್ಸ್ ಈ ಅಭೂತಪೂರ್ವ ಕ್ಷಣಕ್ಕೆ ಸಾಕ್ಷಿಯಾದರು.
ಈ ಯಾನವು ಹಲವು ಇತಿಹಾಸ ನಿರ್ಮಿಸಿದೆ. ಬಾಹ್ಯಾಕಾಶ ಯಾನದಲ್ಲಿ ಹೊಸ ಯುಗಾರಂಭಕ್ಕೆ ನಾಂದಿ ಹಾಡಿದೆ. ಬರೋಬ್ಬರಿ 11 ವರ್ಷಗಳ ಬಳೀಕ ಅಮೆರಿಕ ತನ್ನದೇ ನೆಲದ ಮೂಲಕ ಗಗನಯಾನಿಗಳನ್ನು ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಿದೆ. ಈವರೆಗೆ ಅಮೆರಿಕ ಈ ಯಾನಕ್ಕಾಗಿ ರಷ್ಯಾವನ್ನು ಅವಲಂಬಿಸಿತ್ತು. ಅಲ್ಲದೇ. 1981ರ ಬಳಿಕ ಮೊದಲ ಬಾರಿಗೆ ಹೊಸ ಗಗನನೌಕೆಯಲ್ಲಿ ಅಮೆರಿಕದ ಗಗನಯಾನಿಗಳು ಪ್ರಯಾಣಿಸಿದಂತಾಗಿದೆ.
ಸ್ಪೇಸ್ ಎಕ್ಸ್ ಸಂಸ್ಥೆ ಗಗನಯಾನಿಗಳ ಪ್ರಯಾಣಕ್ಕೆಂದೇ ಕ್ರ್ಯೂ ಡ್ರ್ಯಾಗನ್ ಸ್ಪೇಸ್ಕ್ರಾಫ್ಟ್ ನಿರ್ಮಿಸಿತ್ತು. ಶನಿವಾರ ಎಲ್ಲವೂ ನಿಗದಿಯಂತೆ ನಡೆಯಲಿದೆ ಎಂದು ಸ್ಪೇಸ್ ಎಕ್ಸ್ ಸಂಸ್ಥೆಯ ಇಂಜಿನಿಯರ್ಗಳು ಗಗನಯಾನಿಗಳಿಗೆ ತಿಳಿಸಿದ್ದರು. ಅದರಂತೆ ಭಾನುವಾರ ಬೆಳಗಿನ ಜಾವ ಗಗನನೌಕೆ ಯಶಸ್ವಿಯಾಗಿ ಉಡ್ಡಯನ ಮಾಡಿತು. ಇದರಲ್ಲಿನ ಗಗನಯಾನಿಗಳು ನಾಲ್ಕು ತಿಂಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಕಾಲ ಕಳೆಯಲಿದ್ದಾರೆ.
ಇದನ್ನೂ ಓದಿ; ಮೊಬೈಲ್ ಸಂಖ್ಯೆಗಿನ್ನು 11 ಅಂಕಿಗಳು, ಟ್ರಾಯ್ ಶಿಫಾರಸು
ಅಲ್ಲದೇ, ಸ್ಪೇಸ್ ಎಕ್ಸ್ ಈ ಕಾರ್ಯದಲ್ಲಿ ಯಶಸ್ವಿಯಾಗುವ ಮೂಲಕ ಇದನ್ನು ಸಾಧಿಸಿದ ಜಗತ್ತಿನ ಮೊದಲ ಖಾಸಗಿ ಸಂಸ್ಥೆ ಎನಿಸಿದೆ. ಇದಾದ ಬಳಿಕ ಸ್ಪೇಸ್ ಎಕ್ಸ್ ಸಂಸ್ಥೆ ನಿಯಮಿತವಾಗಿ ನಾಸಾ ಅಭ್ಯರ್ಥಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಕಾರ್ಯದಲ್ಲಿ ತೊಡಗಲಿದೆ.
ಈ ಯಾತ್ರೆಯ ಇನ್ನೊಂದು ವಿಶೇಷವೆಂದರೆ, ಕರೊನಾ ಸಂಕಷ್ಟದ ನಡುವೆಯೇ ಈ ಬಾಹ್ಯಾಕಾಶ ಉಡ್ಡಯನ ನಡೆಸಲಾಗಿದೆ. ಹೀಗಾಗಿ, ಗಗನಯಾನಿಗಳಿಬ್ಬರನ್ನೂ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇಬ್ಬರ ಫಲಿತಾಂಶವೂ ನೆಗೆಟಿವ್ ಬಂದ ಬಳಿಕವಷ್ಟೇ ಯಾತ್ರೆಗೆ ಅವಕಾಶ ಕಲ್ಪಿಸಲಾಯಿತು.
ಇದಕ್ಕೂಮುನ್ನ, ಎರಡು ಬಾರಿ ಈ ಪರೀಕ್ಷೆ ನಡೆಸಿ ಹಲವು ವಾರಗಳವರೆಗೆ ಇಬ್ಬರನ್ನೂ ಕ್ವಾರಂಟೈನ್ನಲ್ಲಿರಿಸಿ ಯಾತ್ರೆಗೆ ಸಜ್ಜುಗೊಳಿಸಲಾಗಿತ್ತು. ಇದಕ್ಕೂ ಮುನ್ನ ಮೇ 27ರಂದು ನಡೆಯಬೇಕಿದ್ದ ಉಡ್ಡಯನವನ್ನು ತಾಂತ್ರಿಕ ಕಾರಣದಿಂದಾಗಿ ಕೊನೆಯ ಕ್ಷಣದಲ್ಲಿ ರದ್ದುಪಡಿಸಲಾಗಿತ್ತು.
ಗಗನಯಾನಿಗಳನ್ನು ಹೊತ್ತು ಸಾಗಿದ ಬಾಹ್ಯಾಕಾಶ ನೌಕೆಯ ಉಡ್ಡಯನದ ಕ್ಷಣಗಳು ಇಲ್ಲಿವೆ...