

ನವದೆಹಲಿ: ಮಾಸ್ಕೋದಲ್ಲಿ ನಿರಾಶ್ರಿತರಾಗಿರುವ ಭಾರತೀಯರನ್ನು ಕರೆತರಲು ದೆಹಲಿಯಿಂದ ಹೊರಟಿದ್ದ ಏರ್ ಇಂಡಿಯಾದ ಏರಬಸ್-320 ವಿಮಾನವನ್ನು ಮಾರ್ಗ ಮಧ್ಯವೇ ದೆಹಲಿಗೆ ವಾಪಸ್ ಕರೆಯಿಸಿಕೊಳ್ಳಲಾಗಿದೆ.
ದೆಹಲಿಯಿಂದ ಯಾವುದೇ ಪ್ರಯಾಣಿಕರಿಲ್ಲದೇ, ಕೇವಲ ಸಿಬ್ಬಂದಿಯೊಂದಿಗೆ ಹೊರಟಿದ್ದ ಏರ್ ಇಂಡಿಯಾ ವಾಪಸ್ ಕರೆಯಿಸಿಕೊಳ್ಳುವ ವೇಳೆಗಾಗಲೇ ಉಜ್ಬೆಕಿಸ್ತಾನದ ವಾಯುಪ್ರದೇಶವನ್ನು ಪ್ರವೇಶಿಸಿತ್ತು. ಶನಿವಾರ ಮಧ್ಯಾಹ್ನ 12.30ರಲ್ಲಿ ದೆಹಲಿಗೆ ಮರಳಿದೆ.
ಇಷ್ಟಕ್ಕೂ ವಿಮಾನ ವಾಪಸ್ ಕರೆಯಿಸಿಕೊಳ್ಳಲು ಕಾರಣವೇನೆಂದರೆ, ಪೈಲಟ್ ಕೋವಿಡ್19 ಕಾಯಿಲೆಗೀಡಾಗಿದ್ದ. ಆತನಿಗೆ ಕರೊನಾ ಸೋಂಕು ಅಂಟಿರುವುದು ಪರೀಕ್ಷೆಯಲ್ಲಿ ಖಚಿತವಾಗಿತ್ತು. ಇದು ಗೊತ್ತಾಗುತ್ತಿದ್ದಂತೆ ಏರ್ ಇಂಡಿಯಾ ಅಧಿಕಾರಿಗಳು ಕೂಡಲೇ ವಿಮಾನವನ್ನು ದೆಹಲಿಯಲ್ಲಿ ಲ್ಯಾಂಡ್ ಮಾಡುವಂತೆ ಸೂಚಿಸಿದ್ದಾರೆ.
ಪೈಲಟ್ ಹಾರಾಟಕ್ಕೂ ತೆರಳುವ ಮುನ್ನ ನಡೆಸಿದ ಪರೀಕ್ಷೆಯಲ್ಲಿ ಲೋಪ ಉಂಟಾಗಿತ್ತು. ಬಳಿಕ ತಪಾಸಣೆ ಮಾಡಿದಾಗ ಕರೊನಾ ಪಾಸಿಟಿವ್ ಎಂದು ಫಲಿತಾಂಶ ಬಂದಿತ್ತು. ವಿಮಾನದ ಸಿಬ್ಬಂದಿಯನ್ನೆಲ್ಲ ಕ್ವಾರಂಟೈನ್ಗೆ ಒಳಪಡಿಸಲಾಗಿದೆ. ಮಿಷನ್ ವಂದೇ ಭಾರತ ಕಾರ್ಯಾಚರಣೆಯಡಿ ಮಾಸ್ಕೋದಲ್ಲಿರುವ ಭಾರತೀಯರನ್ನು ಕರೆತರಲು ಮತ್ತೊಂದು ವಿಮಾನ ಕಳುಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟಿನಲ್ಲಿ ಏರ್ ಇಂಡಿಯಾ ಸಿಬ್ಬಮದಿ ತೋರಿದ ಸಮಯ ಪ್ರಜ್ಞೆ ನೂರಾರು ಭಾರತೀಯರನ್ನು ಕರೊನಾದಿಂದ ಕಾಪಾಡಿದೆ.