More

    ಬುಕ್​ ಅಲ್ಲ, ಟ್ಯಾಬ್​ ಹಿಡಿದು ಹೋಗಬೇಕಿಗ ಶಾಲೆಗೆ; ಆನ್​ಲೈನ್​ ಮೋಡ್​ಗೆ ಶಿಫ್ಟ್​ ಆದ ಶಿಕ್ಷಣ

    ಬೆಂಗಳೂರು: ನಿಮ್ಮ ಬಳಿ ಕಂಪ್ಯೂಟರ್​, ಲ್ಯಾಪ್​ಟಾಪ್​, ಟ್ಯಾಬ್ಲೆಟ್​ ಇದೆಯೇ….? ಮಕ್ಕಳನ್ನು ಶಾಲೆಗೆ ಸೇರಿಸಲೆಂದು ಕರೆದೊಯ್ದರೆ ಅಥವಾ ಮುಂದಿನ ತರಗತಿಗೆ ದಾಖಲಿಸುವುದಾದರೆ ಎಲ್ಲ ಶಾಲೆಗಳಲ್ಲೂ ಕೇಳಲಾಗುತ್ತಿರುವ ಪ್ರಶ್ನೆಯಿದು.

    ಉಳ್ಳವರ ಮಕ್ಕಳ ಅಗತ್ಯವಾಗಿದ್ದ ಕಂಪ್ಯೂಟರ್​, ಲ್ಯಾಪ್​ಟಾಪ್​, ಟ್ಯಾಬ್​ಗಳೀಗ ಎಲ್ಲರಿಗೂ ಅನಿವಾರ್ಯವಾಗಿವೆ. ಕನಿಷ್ಠ ಪಕ್ಷ ಉತ್ತಮ ಸ್ಮಾರ್ಟ್​ಫೋನ್ ಹೊಂದಿರುವುದಂತೂ ಕಡ್ಡಾಯವಾಗಲಿದೆ. ಏಕೆಂದರೆ ಬಹುತೇಕ ಖಾಸಗಿ ಶಾಲೆಗಳು ಈಗಾಗಲೇ ಆನ್​ಲೈನ್​ ಮೋಡ್​ಗೆ ಶಿಫ್ಟ್​ ಆಗಿವೆ. ಪಾಠಗಳಿಗಾಗಿ ಆ್ಯಪ್​, ಯೂಟ್ಯೂಬ್​ ಚಾನೆಲ್​ಗಳನ್ನು ರೂಪಿಸುತ್ತಿವೆ.

    ಲಾಕ್​ಡೌನ್​​ ಸಂದರ್ಭದಲ್ಲಿ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಎರಡನೇ ಹಂತದಲ್ಲೂ ಲಾಕ್​ಡೌನ್​ ವಿಸ್ತರಣೆಗೊಂಡ ಬಳಿಕ ಖಾಸಗಿ ಶಾಲೆಗಳು ಆನ್​ಲೈನ್​ ಮೋಡ್​ಗೆ ಶಿಫ್ಟ್​ ಆಗುವುದು ಅನಿವಾರ್ಯವೆನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು.

    ಇದನ್ನೂ ಓದಿ; ಸಾಮೂಹಿಕ ಪ್ರಾರ್ಥನೆ ಬಂದ್​, ಪಾಲಕರಿಗೂ ನಿರ್ಬಂಧ, ಮನೆಯೂಟ ಕಡ್ಡಾಯ… ಶಾಲಾರಂಭಕ್ಕೆ ಹೀಗಿರಲಿದೆಯೇ ಮಾರ್ಗಸೂಚಿ?

    ಬೆಂಗಳೂರಿನ ಮತ್ತಿಕೆರೆಯಲ್ಲಿರುವ ವಿದ್ಯಾವೈಭವ ಶಿಕ್ಷಣ ಸಂಸ್ಥೆ ಕಳೆದೊಂದು ತಿಂಗಳಿನಿಂದಲೇ ಆನ್​ಲೈನ್​ ಬೋಧನೆ ಆರಂಭಿಸಿದೆ. ವಿದ್ಯಾರ್ಥಿಗಳಿಗೆ ತರಗತಿಗಳಿಗೆ ಅನುಗುಣವಾಗಿ ವರ್ಕ್​ಶೀಟ್​, ಯೂಟ್ಯೂಬ್​ನಲ್ಲಿ ಪಾಠಗಳು, ಮಕ್ಕಳಿಗಾಗಿ ಹಾಡು, ಮನರಂಜನೆಯೊಂದಿಗೆ ಕಲಿಕೆಯ ಉತ್ಸಾಹ ಹೆಚ್ಚಿಸುವ ವಿಡಿಯೋಗಳನ್ನು ತನ್ನ ಯೂಟ್ಯೂಬ್​ ಚಾನೆಲ್​ನಲ್ಲಿ ಬಿತ್ತರಿಸುತ್ತಿದೆ. ಶಿಕ್ಷಕರು ನೀಡುವ ವರ್ಕ್​ಶೀಟ್​ ಹಾಗೂ ಆನ್​ಲೈನ್​ ಪಾಠಗಳು ಶಾಲೆಯ ವಿದ್ಯಾರ್ಥಿಗಳಿಗೆ ಸೀಮಿತವಾಗಿವೆ. ಆದರೆ, ಯೂಟ್ಯೂಬ್​ನಲ್ಲಿರುವ ಪಾಠಗಳನ್ನು ಬೇರೆ ವಿದ್ಯಾರ್ಥಿಗಳು ಬಳಸಿಕೊಳ್ಳುತ್ತಿರುವುದು ಶಿಕ್ಷಕರ ಪರಿಶ್ರಮಕ್ಕೆ ಸಂದ ಫಲವಾಗಿದೆ ಎನ್ನುತ್ತಾರೆ ಶಾಲೆ ಮುಖ್ಯಸ್ಥ ಕಿರಣ್​ಪ್ರಸಾದ್.

    ಬೇರೆ ಶಾಲೆಗಳಲ್ಲಿ ಆನ್​ಲೈನ್​ ಪಾಠಕ್ಕೆಂದೇ ಶುಲ್ಕ ವಿಧಿಸಲಾಗುತ್ತಿದೆ. ಆದರೆ, ಕಳೆದೆರಡು ತಿಂಗಳಿನಿಂದ ಸಂಬಳಕ್ಕೆ ತೊಂದರೆಯಾಗಿದ್ದರೂ ಶಿಕ್ಷಕರು ಉತ್ಸಾಹದಿಂದ ಮನೆಯಿಂದಲೇ ಈ ಕಾರ್ಯದಲ್ಲಿ ಭಾಗಿಯಾಗುತ್ತಿದ್ದಾರೆ. ಬೇರೆ ಶಾಲೆ ಮಕ್ಕಳು ಕೂಡ ನಮ್ಮ ಉಚಿತ ಆನ್​ಲೈನ್​ ಪಾಠಗಳಿಂದ ಕಲಿಕೆಗೆ ಮುಂದಾಗಿರುವುದು ಸಂತಸದ ಸಂಗತಿ ಎನ್ನುತ್ತಾರೆ.

    ಇದನ್ನೂ ಓದಿ; ಚಿಕ್ಕವರಿಗಿಲ್ಲ ಇನ್ನೂ ಮೂರು ತಿಂಗಳು ಶಾಲೆ, ದೊಡ್ಡವರಿಗೆ ಪಾಳಿ ಪದ್ಧತಿ; ಕೇಂದ್ರ ಸಿದ್ಧಪಡಿಸುತ್ತಿದೆ ಪುನರಾರಂಭದ ಮಾರ್ಗಸೂಚಿ

    ಕೇಂದ್ರ ಸರ್ಕಾರವೂ ಕೂಡ ಆನ್​ಲೈನ್​ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದೆ. ಸದ್ಯ 220 ದಿನ ಶಾಲೆ ನಡೆಯುತ್ತಿದ್ದು, ಒಟ್ಟು 1,320 ತಾಸು ಬೋಧನಾ ಅವಧಿ ಇದೆ. ಇದನ್ನು 100 ದಿನಗಳಿಗೆ ಇಳಿಸುವ ಚಿಂತನೆ ನಡೆಸಿದೆ. ಅಲ್ಲಿಗೆ 100 ದಿನಗಳ 600 ತಾಸು ಬೋಧನೆಯನ್ನು ಮನೆಯಲ್ಲೇ ನಡೆಸಲು ತಜ್ಞರ ಸಮಿತಿ ಶಿಫಾರಸು ಮಾಡಿದೆ. ಇದು ಕೇಂದ್ರದ ಪರಿಶೀಲನೆಯಲ್ಲಿದೆ. ಇನ್ನು, ರಾಜ್ಯ ಸರ್ಕಾರ ಕೂಡ ದೂರದರ್ಶನದಲ್ಲಿ ಪ್ರಾಥಮಿಕ, ಪ್ರೌಢ ಹಾಗೂ ಪಿಯು ತರಗತಿಗಳಿಗೆ ಪ್ರತ್ಯೇಕ ಚಾನೆಲ್​ ಆರಂಭಿಸುವ ಸಿದ್ಧತೆಯಲ್ಲಿದೆ. ಮೂರು ಚಾನೆಲ್​ಗಳ ಆರಂಭಕ್ಕೆ ಅವಕಾಶ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ.

    ಇನ್ನು ಮುಂದೆ ಶಾಲೆ ಎಲ್ಲೇ ಇರಲಿ, ಹೇಗೆ ಇರಲಿ, ಆನ್​ಲೈನ್​ ಮೂಲಕ ಪಾಠಗಳನ್ನು ನಡೆಸಲು ಎಷ್ಟು ಸಾಮರ್ಥ್ಯ ಹೊಂದಿದೆ ಎನ್ನುವುದು ಪ್ರವೇಶಕ್ಕೆ ಪರಿಗಣಿಸಲಾಗುವ ಅಥವಾ ಪಾಲಕರನ್ನು ಸೆಳೆಯಲು ಹೊಸ ಮಾನದಂಡವಾಗಲಿದೆ ಎನ್ನುವುದಂತೂ ಸತ್ಯ. ಮಕ್ಕಳಿನ್ನು ಶಾಲೆಗಳಿಗೆ ಬುಕ್​ ಅಲ್ಲ, ಟ್ಯಾಬ್​ ಹಿಡಿದು ಹೋಗಬೇಕಾಗಿದೆ.

    ಗುಡ್​ ಟಚ್​.. ಬ್ಯಾಡ್​ ಟಚ್​ ಮುಗೀತು…, ಶಾಲೆಗಳಲ್ಲಿನ್ನು ‘ನೋ ಟಚ್​’ ಮಂತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts