ಸಾಮೂಹಿಕ ಪ್ರಾರ್ಥನೆ ಬಂದ್​, ಪಾಲಕರಿಗೂ ನಿರ್ಬಂಧ, ಮನೆಯೂಟ ಕಡ್ಡಾಯ... ಶಾಲಾರಂಭಕ್ಕೆ ಹೀಗಿರಲಿದೆಯೇ ಮಾರ್ಗಸೂಚಿ?

School Fees
Published on

ನವದೆಹಲಿ: ಸದ್ಯ ಲಾಕ್​ಡೌನ್​ ಯುಗ ಮುಗಿದಂತಾಗಿದೆ. ಜನಜೀವನವನ್ನು ಸಹಜ ಸ್ಥಿತಿಗೆ ತರಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದರೆ, ಕರೊನಾ ನಿಯಂತ್ರಣಕ್ಕೆ ಬರುವ ತನಕ ಸಾರ್ವರ್ಜನಿಕ ಸಭೆ ಸಮಾರಂಭ ಸೇರಿ ಹಲವು ಸಂಗತಿಗಳ ಮೇಲೆ ನಿರ್ಬಂಧವಿರಲಿದೆ. ಸದ್ಯ ಎಲ್ಲರ ಗಮನವಿರೋದು ಶಾಲೆಗಳು ಯಾವಾಗ ಆರಂಭವಾಗುತ್ತೆ ಎಂಬುದರ ಮೇಲೆ.

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಈ ಬಗ್ಗೆ ಮಾರ್ಗಸೂಚಿಗಳನ್ನು ಸದ್ಯದಲ್ಲೇ ಬಿಡುಗಡೆ ಮಾಡಲಿದೆ. ಶಾಲೆಯಲ್ಲಿ ನಡೆಸಬೇಕಾದ ಹಾಗೂ ನಡೆಸಬಾರದ ಸಂಗತಿಗಳ ಬಗ್ಗೆ ಹಲವು ಸಲಹೆಗಳನ್ನು ನೀಡಲಿದೆ.

ಮೊದಲನೆಯದಾಗಿ ಶಾಲೆಗಳಲ್ಲಿ ಆರಂಭದ ಕೆಲ ತಿಂಗಳವರೆಗೆ ವಿದ್ಯಾರ್ಥಿಗಳು ಸಾಲಾಗಿ ನಿಂತು ಸಾಮೂಹಿಕ ಪ್ರಾರ್ಥನೆ ನಡೆಸುವುದನ್ನು ನಿಷೇಧಿಸಲಾಗುತ್ತದೆ. ಜತೆಗೆ, ಶಾಲೆಗಳಲ್ಲಿ ಆಗಮನ ಹಾಗೂ ನಿರ್ಗಮನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತದೆ. ವಿದ್ಯಾರ್ಥಿಗಳ ದಟ್ಟಣೆ ಉಂಟಾಗದಂತೆ ಪ್ರತಿ ಹಂತದಲ್ಲೂ ವ್ಯಕ್ತಿಗತ ಅಂತರವನ್ನು ಕಾಪಾಡಿಕೊಳ್ಳುವಂತೆ ನೋಡಿಕೊಳ್ಳಲಾಗುತ್ತದೆ. ಜತೆಗೆ, ಪಾಲಕರು ಶಾಲಾ ಆವರಣವನ್ನು ಪ್ರವೇಶಿಸುವಂತಿಲ್ಲ. ನಿಗದಿತ ಸ್ಥಳದಲ್ಲಿ ಮಕ್ಕಳನ್ನು ಬಿಟ್ಟು ಅಲ್ಲಿಂದಲೇ ತೆರಳಬೇಕು.

ಮಾಸ್ಕ್​ ಧರಿಸುವುದು ಕಡ್ಡಾಯವಾಗಲಿದೆ. ವಿದ್ಯಾರ್ಥಿಗಳಿಗೆ ಅಲ್ಲಲ್ಲಿ ನೀರಿನ ವ್ಯವಸ್ಥೆ ಇದ್ದಂತೆ, ಈಗ ಸ್ಯಾನಿಟೈಜರ್​ ವ್ಯವಸ್ಥೆ ಇರಲಿದೆ. ವಿದ್ಯಾರ್ಥಿಗಳು ಪದೇಪದೆ ಸ್ಪರ್ಶಿಸುವ ಸ್ಥಳವನ್ನು ಆಗಾಗ ಸ್ವಚ್ಛಗೊಳಿಸಲಾಗುತ್ತದೆ.

ಇನ್ನೂ ಶಾಲೆ, ಕಾಲೇಜುಗಳಲ್ಲಿ ಕ್ಯಾಂಟೀನ್​ ಬಂದ್​ ಆಗಲಿದೆ. ವಿದ್ಯಾರ್ಥಿಗಳಿಗೆ ಮನೆಯಿಂದಲೇ ಊಟ ತರುವಂತೆ ತಿಳಿಸಲಾಗುತ್ತದೆ. ಜತೆಗೆ, ತರಗತಿಯಲ್ಲೇ ಊಟ ಮಾಡಬೇಕಾಗುತ್ತದೆ. ಊಟದ ವಿರಾಮದಲ್ಲಿ ಗುಂಪುಗುಂಪಾಗಿ ಸೇರುವುದು ಕೂಡ ನಿಷಿದ್ಧವಾಗಲಿದೆ.

ಸದ್ಯ ಸಾರ್ವಜನಿಕ ಸಾರಿಗೆಯಲ್ಲಿ ವ್ಯಕ್ತಿಗತ ಅಂತರ ಕಾಯ್ದುಕೊಂಡು ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಈಗ ಶಾಲಾ ಬಸ್​ಗಳಲ್ಲೂ ಇದು ಅನಿವಾರ್ಯವಾಗಲಿದೆ. ಹೀಗಾಗಿ ಮಕ್ಕಳ ಸಾರಿಗೆ ವೆಚ್ಚ ದುಪ್ಪಟ್ಟಾದರೂ ಅಚ್ಚರಿ ಇಲ್ಲ.

ಮಕ್ಕಳ ಬಗ್ಗೆ ಇಷ್ಟೆಲ್ಲ ಕಾಳಜಿ ತೆಗೆದುಕೊಳ್ಳುವ ಸಂದರ್ಭದಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ಮಕ್ಕಳಲ್ಲಿ ಕರೊನಾ ಕಂಡು ಬಂದಿರುವ ಪ್ರಮಾಣ ತೀರಾ ಕಡಿಮೆ. ದೊಡ್ಡವರಲ್ಲಿಯೇ ಹೆಚ್ಚು ಎಂಬುದನ್ನು ಅಂಕಿ-ಸಂಖ್ಯೆಗಳನ್ನು ಗಮನಿಸಿದಾಗ ಗೊತ್ತಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net