

ನವದೆಹಲಿ: ಬಾಳೆ ಬೆಳೆ ಪಾಲಿಗೆ ಇದು ಅಕ್ಷರಶಃ ಕರೊನಾ...! ಜಗತ್ತಿನ ಹಲವು ರಾಷ್ಟ್ರಗಳನ್ನು ದಾಟಿ ಈಗ ಭಾರತಕ್ಕೂ ಕಾಲಿಟ್ಟಿದೆ. ಅಲ್ಲದೇ, ಈ ಕಾಯಿಲೆಗೆ ಇನ್ನೂ ಔಷಧವನ್ನೇ ಕಂಡುಹಿಡಿಯಲಾಗಿಲ್ಲ. ಹೀಗಾಗಿ ಇದನ್ನು ಬಾಳೆ ಬೆಳೆಯ ಕೋವಿಡ್ ಕಾಯಿಲೆ ಎಂದೇ ಕರೆಯಲಾಗುತ್ತಿದೆ.
ಟ್ರಾಪಿಕಲ್ ರೇಸ್ 4 (ಟಿಆರ್4) ಎಂದು ಗುರುತಿಸಲಾಗಿರುವ ಈ ಫಂಗಸ್ ಮೊದಲು ತೈವಾನ್ನಲ್ಲಿ ಕಂಡುಬಂತು. ಬಳಿಕ ಏಷ್ಯಾ, ಮಧ್ಯಪ್ರಾಚ್ಯ ರಾಷ್ಟ್ರಗಳು, ಆಫ್ರಿಕಾ ನಂತರ ಲ್ಯಾಟಿನ್ ಅಮೆರಿಕಾ ಬಾಳೆ ತೋಟಗಳಿಗೂ ದಾಂಗುಡಿ ಇಟ್ಟಿದೆ.
ಬಾಳೆ ಬೆಳೆ ಮೇಲೆ ದಾಳಿ ನಡೆಸುವ ಈ ಫಂಗಸ್ ಮೊದಲು ಎಲೆಗಳನ್ನು ಆಕ್ರಮಿಸುತ್ತದೆ. ಅವುಗಳ ಅಂಚನ್ನು ಹಳದಿಯಾಗಿಸಿ ಒಣಗಿಸುತ್ತದೆ. ನಂತರ ಇಡೀ ಗಿಡವನ್ನೇ ಮುದುಡುವಂತೆ ಮಾಡುತ್ತದೆ. ಈವರೆಗೆ ಇದಕ್ಕೆ ಸೂಕ್ತ ಔಷಧ ಕಂಡುಹಿಡಿಯಲಾಗಿಲ್ಲ.
ಅತಿ ಹೆಚ್ಚು ಬಾಳೆ ಬೆಳೆಯುವ ದೇಶವಾದ ಭಾರತದಲ್ಲಿ 8-9 ತಿಂಗಳ ಹಿಂದೆಯೇ ಕಾಣಿಸಿಕೊಂಡಿದ್ದು, ವೇಗವಾಗಿ ಹರಡುತ್ತಿದೆ ಎಂದು ಹೇಳಲಾಗುತ್ತಿದೆ. ಸದ್ಯ ಬಿಹಾರ್ ಹಾಗೂ ಉತ್ತರಪ್ರದೇಶ ಇದರ ಹಾಟ್ಸ್ಪಾಟ್ಗಳು ಎಂದು ಗುರುತಿಸಲಾಗಿದೆ. ಇದರ ನಿಯಂತ್ರಣಕ್ಕೆ ಶ್ರಮಿಸುತ್ತಿದ್ದೇವೆ ಎಂದು ಬಾಳೆ ಬೆಳೆಯ ರಾಷ್ಟ್ರೀಯ ಸಂಶೋಧನಾ ಸಂಸ್ಥೆಯ ನಿರ್ದೇಶಕಿ ಎಸ್. ಉಮಾ ಹೇಳಿದ್ದಾರೆ.
ತೋಟಗಾರಿಕೆ ಬೆಳೆಯ ಅತ್ಯಂತ ವಿನಾಶಕಾರಿ ಕಾಯಿಲೆ ಇದಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಇದಕ್ಕೆ ಔಷಧ ಇನ್ನೂ ಕಂಡುಹಿಡಿಯದ ಕಾರಣ "ಫಾರಂ ಕ್ವಾರಂಟೈನ್" ಮೊದಲಾದ ಜೈವಿಕ ವಿಧಾನಗಳ ಮೂಲಕವೇ ಇದನ್ನು ನಿಯಂತ್ರಿಸಬೇಕಾಗಿದೆ ಎಂದು ತಿಳಿಸಿದೆ. ಇಂಥದ್ದೇ ಕಾಯಿಲೆ 1950ರ ದಶಕದಲ್ಲಿ ಒಂದಿಡೀ ತಳಿಯನ್ನೇ ನಾಮಾವಶೇಷಗೊಳಿಸಿತ್ತು ಎಂದು ತಜ್ಞರು ಹೇಳುತ್ತಾರೆ. ಸದ್ಯ ಇದರ ತಡೆಗೆ ನಿರಂತರ ಪ್ರಯತ್ನಗಳು ನಡೆದಿವೆ. ಬಾಳೆ ಬೆಳೆಯನ್ನು ಕತ್ತರಿಸಿ ಆ ಪ್ರದೇಶದಲ್ಲಿ ಒಂದೆರಡು ವರ್ಷ ಭತ್ತ ಅಥವಾ ಬೇರೆ ಬೆಳೆಯನ್ನು ಬೆಳೆಯುವುದೇ ಇದಕ್ಕೆ ಸದ್ಯಕ್ಕಿರುವ ಪರಿಹಾರ ಎಂದು ಕೃಷಿ ಪಂಡಿತರು ಹೇಳುತ್ತಿದ್ದಾರೆ.
ಬಾಳೆಹಣ್ಣನ್ನು ಜಾಗತಿಕವಾಗಿ ಅತಿ ಹೆಚ್ಚು ರಫ್ತು ಮಾಡಲಾಗುತ್ತದೆ. ಈ ಕಾಯಿಲೆಯನ್ನು ತಡೆಗಟ್ಟದಿದ್ದರೆ ಬಾಳೆಯ 1.96 ಲಕ್ಷ ಕೋಟಿ ರೂ.ಗಳ ಅಂತಾರಾಷ್ಟ್ರೀಯ ವಹಿವಾಟು ಧ್ವಂಸವಾಗಲಿದೆ ಎಂದು ಎಚ್ಚರಿಸಿದೆ. ಭಾರತ ಪ್ರತಿ ವರ್ಷ 270 ಲಕ್ಷ ಟನ್ ಬಾಳೆ ಬೆಳೆಯನ್ನು ಉತ್ಪಾದಿಸುತ್ತದೆ. ಅಂದಾಜು ನೂರು ವಿಧದ ತಳಿಗಳು ಇಲ್ಲಿವೆ. ದೇಶದಲ್ಲಿ ಹೆಚ್ಚಾಗಿ ಬಳಕೆಯಲ್ಲಿರುವ ತಳಿಗೆ ಟಿಆರ್4 ಅಂಟಿಕೊಂಡಿದೆ. ಭಾರತದಲ್ಲಿ ಬಾಳೆ ಬೆಳೆ ಹೆಚ್ಚಾಗಿ ದೇಶಿಯವಾಗಿಯೇ ಬಳಕೆಯಾಗುತ್ತದೆ.