ಗಡಿ ಸಂಘರ್ಷದಲ್ಲಿ ಮೃತಪಟ್ಟ ಚೀನಾ ಯೋಧರೆಷ್ಟು? ಪತ್ತೆ ಹಚ್ಚಿದೆ ಅಮೆರಿಕ ಗುಪ್ತಚರ ಸಂಸ್ಥೆ

india-china-faceoff
Published on

ವಾಷಿಂಗ್ಟನ್​: ಲಡಾಖ್​ ಗಡಿಯಲ್ಲಿ ಸೋಮವಾರ ಭಾರತ ಹಾಗೂ ಚೀನಿಯರ ನಡುವೆ ನಡೆದ ಸಂಘರ್ಷ ಕಳೆದ ಐದು ದಶಕಗಳಲ್ಲಿಯೇ ಅತಿ ದೊಡ್ಡ ಹಾಗೂ ಅತ್ಯಂತ ಹಿಂಸಾತ್ಮಕ ಎಂದು ಬಿಂಬಿಸಲಾಗಿದೆ.

ಘರ್ಷಣೆಯಲ್ಲಿ ಕರ್ನಲ್​ ಸೇರಿ ಭಾರತದ 20 ಯೋಧರು ಮೃತಪಟ್ಟಿದ್ದಾರೆ ಎಂದು ಭಾರತೀಯ ಸೇನೆ ಈಗಾಗಲೇ ಘೋಷಿಸಿದೆ. ಆದರೆ, ತನ್ನ ಕಡೆಯಲ್ಲೂ ಪ್ರಾಣ ಹಾನಿ ಸಂಭವಿಸಿದೆ ಎಂದು ಚೀನಾ ಘೋಷಿಸಿದ್ದರೂ ಸತ್ತವರ ಸಂಖ್ಯೆ ಎಷ್ಟು ಎಂದು ಎಲ್ಲಿಯೂ ಘೋಷಿಸಿರಲಿಲ್ಲ.

ಚೀನಾದ ಅರವತ್ತಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿತ್ತಾದರೂ, ಕೊನೆಗೆ 40ಕ್ಕೂ ಜನರು ಬಲಿಯಾಗಿದ್ದಾರೆ ಎಂದು ಅಂದಾಜಿಸಲಾಗಿದೆ. ಇದೀಗ ಅಮೆರಿಕ ಗುಪ್ತಚರ ಅಧಿಕಾರಿಗಳು ಮತ್ತೊಂದು ಸಂಖ್ಯೆಯನ್ನು ಮುಂದಿಟ್ಟಿದ್ದಾರೆ.

ಚೀನಾದ ಪೀಪಲ್ಸ್​ ಲಿಬರೇಷನ್​ ಆರ್ಮಿಯ 35 ಜನರು ಮೃತಪಟ್ಟಿದ್ದಾರೆ ಹಾಗೂ ಗಾಯಗೊಂಡವರು ಕೂಡ ಈ ಸಂಖ್ಯೆಯಲ್ಲಿ ಸೇರಿದ್ದಾರೆ ಎಂದು ಅಮೆರಿಕದ ಗುಪ್ತಚರ ಅಧಿಕಾರಿಗಳು ವರದಿ ನೀಡಿದ್ದಾರೆ.

ಘಟನಾ ಸ್ಥಳದಲ್ಲಿ ಹೆಲಿಕಾಪ್ಟರ್​ಗಳು ಪದೇಪದೆ ಹಾರಅಟ ನಡೆಸಿದ್ದವು. ಇದನ್ನು ಗಮನಿಸಿದರೆ, ಸಾವು-ನೋವಿನ ಸಂಖ್ಯೆ ಹೆಚ್ಚಾಗಿದೆ ಎಂದೇ ಅಂದಾಜಿಸಲಾಗಿತ್ತು. ಹೀಗಿದ್ದರೂ, ಚೀನಾ ತನಗಾದ ಪ್ರಾಣಹಾನಿಯ ಬಗ್ಗೆ ಅಧಿಕೃತ ಮಾಹಿತಿ ಹೊರ ಹಾಕಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net