

Tulsi Gabbard: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿರುವ ಉಗ್ರರನ್ನು ಬೇಟೆಯಾಡುವಲ್ಲಿ, ಪ್ರಧಾನಿ ಮೋದಿಗೆ ಬೆಂಬಲ ನೀಡುವುದಾಗಿ ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್ ಹೇಳಿದ್ದಾರೆ.
"ಪಹಲ್ಗಾಮ್‌ನಲ್ಲಿ 26 ಹಿಂದೂಗಳನ್ನು ಗುರಿಯಾಗಿಸಿಕೊಂಡು ನಡೆದ ಭಯಾನಕ ಇಸ್ಲಾಮಿಕ್ ಭಯೋತ್ಪಾದಕ ದಾಳಿಯ ನಂತರ ನಾವು ಭಾರತದೊಂದಿಗೆ ಒಗ್ಗಟ್ಟಿನಿಂದ ನಿಲ್ಲುತ್ತೇವೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕಾಶ್ಮೀರ ದಾಳಿಯಲ್ಲಿ ಮಡಿದವರಿಗೆ ಎಬಿವಿಪಿ ಶ್ರದ್ದಾಂಜಲಿ
"ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ, ಪ್ರಧಾನಿ ನರೇಂದ್ರ ಮೋದಿಗೆ ಮತ್ತು ಭಾರತದ ಎಲ್ಲಾ ಜನರಿಗೆ ನನ್ನ ಪ್ರಾರ್ಥನೆ ಮತ್ತು ಆಳವಾದ ಸಹಾನುಭೂತಿ ಇದೆ. ಈ ಘೋರ ದಾಳಿಗೆ ಕಾರಣರಾದವರನ್ನು ನೀವು ಹತ್ತಿಕ್ಕುವಾಗ ನಾವು ನಿಮ್ಮೊಂದಿಗಿದ್ದೇವೆ ಮತ್ತು ನಿಮ್ಮನ್ನು ಬೆಂಬಲಿಸುತ್ತೇವೆ" ಎಂದು ಅವರು ತಿಳಿಸಿದ್ದಾರೆ.
ಇದಕ್ಕೂ ಮುಂಚೆ ಅಮೆರಿಕವು ಭಾರತದ ಪರವಾಗಿ ನಿಲ್ಲುತ್ತದೆ ಮತ್ತು ಎಲ್ಲಾ ರೀತಿಯ ಭಯೋತ್ಪಾದನಾ ಕೃತ್ಯಗಳನ್ನು ಬಲವಾಗಿ ಖಂಡಿಸುತ್ತದೆ ಎಂದು ಹೇಳಿತ್ತು, ಈಗ ಘೋರ ಪಹಲ್ಗಾಮ್ ಉಗ್ರರ ದಾಳಿಯ ಅಪರಾಧಿಗಳಿಗೆ ಸರಿಯಾದ ಶಿಕ್ಷೆಯಾಗಬೇಕೆಂದು ಕರೆ ನೀಡಿದೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಕಾರ್ಯದರ್ಶಿ ಮಾರ್ಕೊ ರುಬಿಯೊ ಸ್ಪಷ್ಟಪಡಿಸಿದಂತೆ, ಅಮೆರಿಕವು ಭಾರತದ ಪರವಾಗಿ ನಿಂತಿದೆ, ಎಲ್ಲಾ ಭಯೋತ್ಪಾದನಾ ಕೃತ್ಯಗಳನ್ನು ಬಲವಾಗಿ ಖಂಡಿಸುತ್ತದೆ ಎಂದು ವಿದೇಶಾಂಗ ಇಲಾಖೆಯ ವಕ್ತಾರೆ ಟ್ಯಾಮಿ ಬ್ರೂಸ್ ಗುರುವಾರ(ಏ.24) ತಿಳಿಸಿದ್ದಾರೆ.
"ನಾವು ಸಾವನ್ನಪ್ಪಿದವರ ಜೀವಕ್ಕೆ ಶಾಂತಿ ಸಿಗಲಿ, ಗಾಯಗೊಂಡವರ ಚೇತರಿಕೆಗಾಗಿ ಪ್ರಾರ್ಥಿಸುತ್ತೇವೆ ಮತ್ತು ಈ ಘೋರ ಕೃತ್ಯದ ಅಪರಾಧಿಗಳನ್ನು ನ್ಯಾಯದ ಕಟಕಟೆಗೆ ತರಬೇಕೆಂದು ಕರೆ ನೀಡುತ್ತೇವೆ" ಎಂದು ಅವರು ಹೇಳಿದ್ದಾರೆ. (ಏಜೆನ್ಸೀಸ್)