ಕೋವಿಡ್​ನಿಂದ ಬೇಡಿಕೆ ಕಳೆದುಕೊಂಡು ಶೂನ್ಯಕ್ಕಿಂತ ಕಡಿಮೆ ದರಕ್ಕೆ ಕುಸಿದ ತೈಲ ಬೆಲೆ; ಭಾರತೀಯರಿಗೆ ಸಿಗಲ್ಲ ಇದರ ಲಾಭ

oil
Published on

ನವದೆಹಲಿ: ಇಡೀ ವಿಶ್ವವೇ ಕೋವಿಡ್​ 19 ಸೋಂಕಿನಿಂದ ನಲಗುತ್ತಿದೆ. ಅದರಲ್ಲೂ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ ವಿಶ್ವದಲೇ ಅತಿಹೆಚ್ಚಾಗಿದ್ದು, ದಿನವೂ ದಾಖಲೆ ಪ್ರಮಾಣದಲ್ಲಿ ಸೋಂಕಿತರು ಸಾಯುತ್ತಿದ್ದಾರೆ. ಈ ಸೋಂಕು ಹರಡದಂತೆ ತಡೆಯಲು ಇಡೀ ವಿಶ್ವವೇ ಲಾಕ್​ಡೌನ್​ಗೆ ಒಳಗಾಗಿ ಸ್ತಬ್ಧಗೊಂಡಿದೆ. ವಾಹನ, ರೈಲು, ವಿಮಾನ ಸಂಚಾರಗಳು ರದ್ದಾಗಿರುವುದರಿಂದ ಸಹಜವಾಗಿ ತೈಲದ ಬೇಡಿಕೆ ಕೂಡ ಕುಸಿದಿದೆ.

ಈ ಹಿನ್ನೆಲೆಯಲ್ಲಿ ಬೇಡಿಕೆಗಿಂತಲೂ ಪೂರೈಕೆಗೆ ತೈಲ ದಾಸ್ತಾನು ಯಥೇಚ್ಚವಾಗಿ ಲಭ್ಯ ಇರುವುದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಕುಸಿದಿದೆ. ಅಮೆರಿಕದ ವೆಸ್ಟ್​ ಟೆಕ್ಸಾಸ್​ ಇಂಟರ್​ಮೀಡಿಯೇಟ್​ ಕ್ರೂಡ್​ (ಡಬ್ಲ್ಯುಟಿಐ) ದರ ಶೂನ್ಯಕ್ಕಿಂತ ಕೆಳಗೆ ಕುಸಿದು, ಮೈನಸ್​ 37.69 ಡಾಲರ್​ಗೆ ಒಂದು ಬ್ಯಾರಲ್​ನಂತೆ ಮಾರಾಟವಾಗುತ್ತಿದೆ.

ತುಂಬಿತುಳುಕುತ್ತಿರುವ ಸಂಗ್ರಹಗಾರ: ಅಮೆರಿಕದಲ್ಲಿ ತೈಲ ಉತ್ಪಾದನೆ ಹೆಚ್ಚಾಗಿದೆ. ಬೇಡಿಕೆ ಇಲ್ಲದ ಕಾರಣ ಅಮೆರಿಕದ ಕಸ್ಸಿಂಗ್​ನಲ್ಲಿರುವ 76 ದಶಲಕ್ಷ ಬ್ಯಾರಲ್​ ಸಂಗ್ರಹಗಾರ ಮತ್ತು ಓಕ್ಲಹಾಮಾದಲ್ಲಿರುವ ತೈಲ ಸಂಗ್ರಹಗಾರಗಳು ಶೇ.72 ಭರ್ತಿಯಾಗಿವೆ. ಸದ್ಯದಲ್ಲೇ ಸಂಪೂರ್ಣ ಭರ್ತಿಯಾಗುವ ಸಾಧ್ಯತೆಗಳೂ ಇವೆ.

ಹೆಚ್ಚುವರಿ ಸಂಗ್ರಹಕ್ಕೆ ಸ್ಥಳಾವಕಾಶ ಇಲ್ಲದ ಕಾರಣ ಅಮೆರಿಕದ ತೈಲ ಉತ್ಪಾದಕರು ಪರದಾಡುವಂತಾಗಿದೆ. ಹೀಗಾಗಿ ಅಮೆರಿಕ ಕೋವಿಡ್​ 19 ಸೋಂಕಿನ ಜತೆಗೆ ತೈಲ ಸಮಸ್ಯೆ ಪರಿಹರಿಸುವ ಸಂಕಷ್ಟಕ್ಕೂ ಸಿಲುಕಿಕೊಂಡಿದೆ.

ತಕ್ಷಣವೇ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳಿಲ್ಲ: ಕೋವಿಡ್​ 19 ಸೋಂಕು ಹರಡುವಿಕೆ ನಿಂತು, ವಿಶ್ವ ಮತ್ತೊಮ್ಮೆ ಕ್ರಿಯಾಶೀಲವಾದರೂ ತೈಲಕ್ಕೆ ತಕ್ಷಣವೇ ಹೆಚ್ಚಿನ ಬೇಡಿಕೆ ಬರುವ ನಿರೀಕ್ಷೆಗಳಿಲ್ಲ. ಏಕೆಂದರೆ ಸ್ಥಗಿತಗೊಳಿಸಿರುವ ವಿಮಾನ ಹಾರಾಟವನ್ನು ವೈಮಾನಿಕ ಸಂಸ್ಥೆಗಳು ಸಂಪೂರ್ಣವಾಗಿ ಆರಂಭಿಸುವ ಸಾಧ್ಯತೆಗಳು ಕಡಿಮೆ ಇವೆ. ಅಲ್ಲದೆ, ತೈಲ ಆಧಾರಿತವಾದ ರೈಲು ಸಂಚಾರ ಬೆರಳೆಣಿಕೆಯಷ್ಟು ರಾಷ್ಟ್ರಗಳಲ್ಲಿ ಮಾತ್ರವೇ ಇರುವುದರಿಂದ, ರೈಲು ಸಂಚಾರ ಪರಿಪೂರ್ಣವಾಗಿ ಆರಂಭವಾಗದ ಹೊರತು ತೈಲಕ್ಕೆ ಹೆಚ್ಚಿನ ಬೇಡಿಕೆ ಬರುವ ಸಾಧ್ಯತೆ

ಭಾರತಕ್ಕೆ ಹೆಚ್ಚಿನ ಲಾಭವಿಲ್ಲ: ಅಮೆರಿಕದಲ್ಲಿ ತೈಲ ಬೆಲೆ ಬ್ಯಾರಲ್​ಗೆ ಮೈನಸ್​ ಡಾಲರ್​ಗೆ ಇಳಿದಿದ್ದರೂ ಭಾರತಕ್ಕೆ ಹೆಚ್ಚಿನ ಲಾಭವೇನೂ ಆಗುವುದಿಲ್ಲ. ಏಕೆಂದರೆ, ತೈಲಕ್ಕಾಗಿ ಭಾರತ ಮಧ್ಯಪ್ರಾಚ್ಯ ಸೇರಿ ಒಪೆಕ್​ ರಾಷ್ಟ್ರಗಳನ್ನೇ ಹೆಚ್ಚಾಗಿ ಅವಲಂಬಿಸಿದೆ. ಈ ಭಾಗದಲ್ಲಿ ಇಂದಿಗೂ ಪ್ರತಿ ಬ್ಯಾರಲ್​ಗೆ 20 ಡಾಲರ್​ನಂತೆ ಕಚ್ಚಾ ತೈಲ ಮಾರಾಟವಾಗುತ್ತಿದೆ. ಹಾಗಾಗಿ ಭಾರತದಲ್ಲಿ ಬೆಲೆ ಇಳಿಕೆ ಸಾಧ್ಯತೆ ತುಂಬಾ ಕಡಿಮೆ ಎನ್ನಲಾಗುತ್ತಿದೆ.

ವಾಹನಸ್ಫೋಟದ ಭೀತಿ: ಸದ್ಯ ಭಾರತದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ 73ರಿಂದ 74 ರೂ.ನಂತೆ ಮಾರಾಟವಾಗುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಯಿತು ಎಂದು ಪೆಟ್ರೋಲ್​ ದರವನ್ನು ಲೀಟರ್​ಗೆ 50ರಿಂದ 60 ರೂ.ಗೆ ಇಳಿಸಿದರೆ ಭಾರತದಾದ್ಯಂತ ವಾಹನಗಳನ್ನು ಖರೀದಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ತನ್ಮೂಲಕ ಈಗಾಗಲೆ ವಾಹನಗಳ ದಟ್ಟಣೆ ಹಾಗೂ ಒತ್ತಡದಿಂದ ನಲುಗುತ್ತಿರುವ ಭಾರತೀಯ ನಗರಗಳು ವಾಹನಗಳ ಸಂಖ್ಯಾಸ್ಫೋಟವನ್ನು ತಡೆಯಲಾಗದೆ ಅಕ್ಷರಶಃ ನಲುಗುವ ಅಪಾಯ ಇದೆ.

ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಆದಾಯ ಕ್ರೋಢಿಕರಣಕ್ಕಾಗಿ ಸರ್ಕಾರ ಪೆಟ್ರೋಲ್​ ಮತ್ತು ಡೀಸೆಲ್​ ಮೇಲೆ ವಿಧಿಸುವ ಅಬಕಾರಿ ಸುಂಕ ಸೇರಿ ಮತ್ತಿತರ ಸುಂಕಗಳನ್ನು ಹೆಚ್ಚಿಸಿ, ಲೀಟರ್​ ಪೆಟ್ರೋಲ್​ಗೆ 75 ರೂ. ಆಸುಪಾಸಿನಲ್ಲೇ ಇರುವಂತೆ ನೋಡಿಕೊಳ್ಳುತ್ತದೆ. ತನ್ಮೂಲಕ ವಾಹನಸ್ಫೋಟ ತಡೆಯಲು ಕ್ರಮ ಕೈಗೊಳ್ಳುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net