

ನವದೆಹಲಿ: ರಾಜಕಾರಣದಲ್ಲಿ ಪ್ರಭಾವಿಗಳಾಗಿರುವ ತಾವು ಏನು ಮಾಡಿದರೂ ನಡೆಯುತ್ತದೆ ಎಂಬ ಅಹಂಭಾವ ಕೆಲವರಲ್ಲಿ ಇರುತ್ತದೆ. ಆದರೆ ಕೆಲವೊಮ್ಮೆ ಇದೇ ಅಹಂಭಾವ ಮುಟ್ಟಿ ನೋಡಿಕೊಳ್ಳುವ ರೀತಿಯ ಪೆಟ್ಟು ನೀಡುತ್ತದೆ. ಯುವ ಕಾಂಗ್ರೆಸ್ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮಗುಡ್ಡು ಶ್ರವಣ ರಾವ್ ಮತ್ತು ಇವರ ಸಹಚರ ಬೆಂಗಳೂರು ಮೂಲದ ಮನೀಶ್ ಬಸವರಾಜ ಶಿಲ್ಲೆ ತುಂಬಾ ಕಠಿಣವಾಗಿ ಪಾಠ ಕಲಿತಿದಿದ್ದಾರೆ.
ಪ್ರಭಾವಿ ರಾಜಕಾರಣಿಯಾಗಿರುವ ಹಿನ್ನೆಲೆಯಲ್ಲಿ ಕೋವಿಡ್ ತುರ್ತು ಪಾಸ್ ಪಡೆದುಕೊಂಡಿದ್ದ ರಾಮಗುಡ್ಡು ಶ್ರವಣ ರಾವ್, ಮನೀಶ್ ಬಸವರಾಜ್ ಶಿಲ್ಲೆ ಜತೆಗೂಡಿ ಗುರುಗ್ರಾಮದಿಂದ ಹರಿಯಾಣಕ್ಕೆ ಅಕ್ರಮವಾಗಿ ಮದ್ಯ ಸಾಗಿಸುವಾಗ ಸಿಕ್ಕಿಬಿದ್ದಿದ್ದಾರೆ.
ಕೋವಿಡ್ 19 ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ಡೌನ್ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮದ್ಯ ಮಾರಾಟ ಕೂಡ ನಿಷೇಧಗೊಂಡಿದೆ. ಹೀಗಿದ್ದೂ, ಗುರುಗ್ರಾಮದಲ್ಲಿ ಅಕ್ರಮ ಮಾರಾಟಗಾರನೊಬ್ಬನಿಂದ ಇವರಿಬ್ಬರೂ 12 ಬಾಟಲಿಗಳ ಮದ್ಯದ ಕ್ರೇಟ್ ಖರೀದಿಸಿದ್ದರು. ತೆಲಂಗಾಣದಲ್ಲಿ ನೋಂದಣಿಗೊಂಡಿರುವ ಸ್ಕಾರ್ಪಿಯೋ ವಾಹನದಲ್ಲಿ ಅದನ್ನು ದೆಹಲಿ ಮೂಲಕ ಹರಿಯಾಣಕ್ಕೆ ಸಾಗಿಸುತ್ತಿದ್ದರು. ಆದರೆ ಗುರುಗ್ರಾಮ-ದೆಹಲಿ ಗಡಿಯಲ್ಲಿ ವಾಹನವನ್ನು ಪೊಲೀಸರು ತಡೆದಿದ್ದರು.
ತುರ್ತು ಕಾರ್ಯದ ಮೇಲೆ ತೆರಳುತ್ತಿರುವುದಾಗಿ ಹೇಳಿ ತಪ್ಪಿಸಿಕೊಳ್ಳಲು ಇವರಿಬ್ಬರೂ ಪ್ರಯತ್ನಿಸಿದ್ದರು. ಆದರೆ ಪೊಲೀಸರು ವಾಹನವನ್ನು ಪರಿಶೀಲಿಸಿದಾಗ, ವಾಹನದ ಹಿಂಬದಿಯ ಸೀಟಿನ ಕೆಳಗೆ 12 ಬಾಟಲಿಗಳ ಮದ್ಯದ ಕ್ರೇಟ್ ಇರುವುದು ಕಂಡುಬಂದಿತು. ತನ್ಮೂಲಕ ಇವರ ಅಸಲಿಯತ್ತು ಬಹಿರಂಗಗೊಂಡಿತು.
ಈ ಬಗ್ಗೆ ವಿಚಾರಿಸಿದಾಗ ರಾಮಗುಡ್ಡು ಶ್ರವಣ ರಾವ್ ಗುರುಗ್ರಾಮದಲ್ಲಿ ಅಕ್ರಮ ಮಾರಾಟಗಾರನಿಂದ ಮದ್ಯವನ್ನು ಖರೀದಿಸಿದ್ದಾಗಿಯೂ, ದೆಹಲಿ ಮೂಲಕ ಹರಿಯಾಣಕ್ಕೆ ಸಾಗಿಸುತ್ತಿರುವುದಾಗಿಯೂ ಹೇಳಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಎಕ್ಸೈಜ್ ಕಾಯ್ದೆಯಡಿ ದೂರು ದಾಖಲಿಸಿಕೊಂಡು, ವಾಹನ ಮತ್ತು ಮದ್ಯವನ್ನು ಜಪ್ತಿ ಮಾಡಲಾಗಿದೆ. ಪೂರ್ವಾನುಮತಿ ಇಲ್ಲದೆ ಲಾಕ್ಡೌನ್ ಅವಧಿಯಲ್ಲಿ ತಿರುಗಾಡದಂತೆ ತಾಕೀತು ಮಾಡಿ, ಅವರನ್ನು ಬಿಟ್ಟು ಕಳುಹಿಸಿದ್ದಾಗಿ ಹೇಳಿದ್ದಾರೆ.
ವಾಹನದ ಮಾಲೀಕರ ಮೂಲ ಬೆಂಗಳೂರು: ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿಯ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ, ಪೊಲೀಸರು ಜಪ್ತಿ ಮಾಡಿರುವ ಸ್ಕಾರ್ಪಿಯೋ ವಾಹನ ಯುವ ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಅವರಿಗೆ ಸೇರಿದ್ದಾಗಿದೆ. ಶ್ರೀನಿವಾಸ್ ಬೆಂಗಳೂರಿನ ನಿವಾಸಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಬಡವರಿಗೆ ಆಹಾರ ಸಾಮಗ್ರಿ ಹಂಚುವ ಸಲುವಾಗಿ ಕೋವಿಡ್ ತುರ್ತು ಪಾಸ್ ಪಡೆದು, ಅಕ್ರಮವಾಗಿ ಮದ್ಯ ಸಾಗಾಟ ಮಾಡಲು ವಾಹನ ಬಳಕೆಯಾಗುತ್ತಿತ್ತು ಎಂದು ದೂರಿದ್ದಾರೆ. ಅಲ್ಲದೆ, ತಮ್ಮ ಟ್ವೀಟ್ ಅನ್ನು ರಾಹುಲ್ ಗಾಂಧಿ ಅವರಿಗೆ ಟ್ಯಾಗ್ ಮಾಡಿದ್ದಾರೆ.