ಅರ್ಟಿಕೇರಿಯಾ ಎಂಬ ಪಿತ್ತದ ಗಂಧೆಯ ಹಿಂದೆ ಮುಂದೆ

Urticaria
Published on
ಧನ್ವಂತರಿ
ಪ್ರತಿಯೊಬ್ಬ ವ್ಯಕ್ತಿಯ ಜೀವಿತಾವಧಿಯಲ್ಲಿ ಅವರವರ ಕಾರ್ಯಚಟುವಟಿಕೆ ಹಾಗೂ ವೃತ್ತಿ ಪ್ರವೃತ್ತಿಗಳನ್ನು ಅವಲಂಬಿಸಿ ತಮ್ಮದೇ ಆದ ಆದ್ಯತೆಗಳಿರುತ್ತವೆ. ಮರ್ಯಾದಸ್ಥರೆಲ್ಲರೂ ಸಭ್ಯತೆಗೆ ಬಹಳ ಪ್ರಾಮುಖ್ಯತೆಗೆ ಕೊಟ್ಟೇ ಕೊಡುತ್ತಾರೆ. ಅನೇಕ ಕಾಯಿಲೆಗಳು ರೋಗಿಗೆ ಬಹುವಿಧವಾದ ಉಪಟಳಗಳನ್ನು ಕೊಡುವುದಿದೆ. ಹಾಗೆಂದು ಉಳಿದವರಿಗೆ ಆ ಬಾಧೆಯ ತೀವ್ರತೆ ಬರಿಗಣ್ಣಿಗೆ ಕಾಣಿಸುವುದೇ ಇಲ್ಲ. ಕೆಲವೊಂದು ರೋಗಗಳು ವ್ಯಕ್ತಿಗೆ ತೀರಾ ಇರಿಸು ಮುರಿಸು ಉಂಟುಮಾಡುತ್ತದೆ. ಅವುಗಳಲ್ಲಿ ರೋಗಿಯ ನಿದ್ದೆಗೆಡಿಸುವ, ಕುಳಿತಲ್ಲಿ ನಿಂತಲ್ಲಿ ತಡೆಯಲು ಅಸಾಧ್ಯವಾದಂತಹ ನವೆ/ತುರಿಕೆ ಉಂಟುಮಾಡುವ ಶೀತಪಿತ್ತವೆಂಬ ಕಾಯಿಲೆ ಮೊದಲ ಸಾಲಿನಲ್ಲಿ ನಿಲ್ಲುತ್ತದೆ.

ಕನ್ನಡದಲ್ಲಿ ಪಿತ್ತದಗಂಧೆ, ಆಧುನಿಕವಾಗಿ ಅರ್ಟಿಕೇರಿಯಾ ಎಂಬ ಹೆಸರುಳ್ಳ ರೋಗವಿದು. ತನಗೆ ಹಿತವಲ್ಲದ ವಾತಾವರಣ ಅಥವಾ ಆಹಾರ ವಿಹಾರಗಳಿಂದ ಕ್ಷಿಪ್ರವಾಗಿ ಹುಟ್ಟಿಕೊಳ್ಳುವ ವ್ಯಾಧಿಯಿದು. ಕಾಯಿಲೆ ಪೂರ್ಣಪ್ರಮಾಣದಲ್ಲಿ ಕಾಣಿಸಿಕೊಳ್ಳುವ ಮೊದಲು ಬಾಯಾರಿಕೆ, ಬಾಯಿರುಚಿ ಇಲ್ಲದಿರುವುದು, ವಾಕರಿಕೆಯ ಅನುಭವ, ಕೈಕಾಲು ಸೋಲು, ಶರೀರಭಾರ, ಕಣ್ಣುಗಳು ಕೆಂಪಾಗುವುದು ಇಂತಹ ಚಿಹ್ನೆಗಳು ಕಾಣಿಸಿಕೊಳ್ಳಬಹುದು ಎಂದಿದೆ ಆಯುರ್ವೆದ. ಸೊಳ್ಳೆ ಕೀಟಗಳು ಕಚ್ಚಿದರೆ ಚರ್ಮವು ಕೆಂಪಾಗಿ ಉಬ್ಬಿಕೊಳ್ಳುವಂತೆ ಚರ್ಮದಲ್ಲಿ ದದ್ದುಗಳು ದೇಹದ ಅನೇಕ ಭಾಗಗಳಲ್ಲಿ ಉಂಟಾಗುತ್ತವೆ. ಅತಿಯಾದ ತುರಿಕೆ, ಏನೋ ಚುಚ್ಚಿದಂತಹ ಅನುಭವ, ವಾಂತಿ, ಜ್ವರ, ದೇಹದಲ್ಲಿ ಉರಿ ಇವುಗಳೆಲ್ಲಾ ಶೀತಪಿತ್ತದ ಲಕ್ಷಣಗಳು.

ಹೆಚ್ಚಾಗಿ ಲಕ್ಷಣಗಳು ಉತ್ಪತ್ತಿಯಾಗಿ ಕೆಲವೇ ಘಂಟೆಗಳಲ್ಲಿ ಯಾವುದೇ ಚಿಕಿತ್ಸೆಯಿಲ್ಲದೆ ಹಾಗೆಯೇ ಮಂಗಮಾಯ ವಾಗುತ್ತದೆ. ಕೆಲವೊಮ್ಮೆ ಒಂದೆರಡು ದಿನ ಬಾಧಿಸುವುದೂ ಇದೆ. ದೇಹದ ಹೆಚ್ಚು ಸೂಕ್ಷ್ಮ ಅವಯವಗಳಲ್ಲಿ ಉದಾಹರಣೆಗೆ ಕಣ್ಣಿನ ರೆಪ್ಪೆ, ತುಟಿಗಳು ಇಂತಹ ಪ್ರದೇಶದಲ್ಲಿ ಮುಖದ ಸ್ವರೂಪವೇ ಸ್ವಲ್ಪವೇ ಹೊತ್ತಿನಲ್ಲಿ ಬದಲಾಗಿ ಊದಿ ಸೊಟ್ಟಗೆ ಕಾಣುವಂತೆ ಮಾಡಿಬಿಡುತ್ತದೆ. ಯಾವುದೋ ಶುಭಸಮಾರಂಭದಲ್ಲಿ ಮೃಷ್ಟಾನ್ನ ಭೋಜನ ಮಾಡುತ್ತೀರಿ. ಹೊರಗೆ ಬಂದು ಕೈ ತೊಳೆಯುವಷ್ಟರಲ್ಲಿ ಮುಖ ಊದಿರುತ್ತದೆ! ಬಂಧುಗಳು ಯಾಕೆ ಏನಾಗಿದೆ ಎಂದು ಪ್ರಶ್ನಿಸುತ್ತಾರೆ. ಊಟದ ಆರಂಭದಲ್ಲಿ ಇಲ್ಲದ್ದು ಒಂದೇ ಘಂಟೆಯ ಅವಧಿಯಲ್ಲಿ ಮುಖವನ್ನೇ ಕುರೂಪ ಮಾಡಿರುತ್ತದೆ. ಬೇಸಿಗೆಯಲ್ಲಿ ತಣ್ಣಗೆ ನೀರಿನಿಂದ ಸ್ನಾನ ಮಾಡಿ ಹೊರಬರುತ್ತಿದ್ದಂತೆ ದೇಹದಲ್ಲಿಡೀ ಕೆಂಪು ದದ್ದುಗಳು ಕಣ್ಣುಕುಕ್ಕುತ್ತವೆ. ಸಂಜೆಯ ವೇಳೆಗೆ ಹಾಗೆಯೇ ಹರಟುತ್ತಾ ಶೇಂಗಕಡಲೆಯ ರುಚಿ ನೋಡಿ ಮನೆಗೆ ತೆರಳಿದಾಗ ತಡೆಯಲಾಗದ ನವೆ. ಬಸ್ಸಿನಲ್ಲಿ ಕಿಟಕಿ ಬಳಿ ಕುಳಿತು ಶೀತಲ ಗಾಳಿಗೆ

ಮೈಯೊಡ್ಡಿ ಪಯಣಿಸಿ ಬಸ್ಸಿನಿಂದ ಕೆಳಗಿಳಿದಾಗ ದೇಹದ ಆ ಬದಿಯ ಭಾಗದಲ್ಲೆಲ್ಲಾ ಕೆಂಪಗಿನ ದದ್ದುಗಳು ಪ್ರತ್ಯಕ್ಷವಾಗಿರುತ್ತದೆ. ಇದೆಲ್ಲಾ ಶೀತಪಿತ್ತದ ಮಹಿಮೆಯೇ. ಸೂಕ್ತ ಗುಣಕಾರೀ ಆಯುರ್ವೆದ ಚಿಕಿತ್ಸೆ ಪಡೆಯದಿದ್ದರೆ ಆಗಾಗ ಮರುಕಳಿಸುತ್ತಾ ತೀವ್ರತೆ ಹೆಚ್ಚಾಗುತ್ತಾ ಜೀವನ ಪರ್ಯಂತ ಕಾಡುವುದಿದೆ. ಲಾಕ್ಷಣಿಕ ಚಿಕಿತ್ಸೆಯಿಂದ ಮೇಲಿಂದ ಮೇಲೆ ಕಾಣಿಸಿಕೊಳ್ಳುವುದನ್ನು ತಡೆಯಲು ಸಾಧ್ಯವೇ ಆಗುವುದಿಲ್ಲ.

ಪಿತ್ತದ ಸಹಕಾರದೊಡನೆ ವಾತಕಫಗಳು ಶರೀರದಲ್ಲಿ ಹೆಚ್ಚಾಗಿ ಪರಿಣಮಿಸುವ ಕಾಯಿಲೆಯಿದು. ಇದರಲ್ಲಿ ಕೆಲವೊಂದು ಭೇದಗಳಿವೆ. ಪಿತ್ತದೊಂದಿಗೆ ವಾತದ ಪ್ರಾಧಾನ್ಯತೆಯಿಂದ ಬಂದರೆ ಅದು ಶೀತಪಿತ್ತ. ಕಫ ಅಧಿಕವಾಗಿ ರೋಗಬಂದರೆ ಅದು ಉದರ್ದ. ಚಳಿಗಾಲದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಉದರ್ದದಲ್ಲಿ ದದ್ದುಗಳು ವೃತ್ತಾಕಾರವಾಗಿದ್ದು ಮಧ್ಯೆ ಸ್ವಲ್ಪ ತಗ್ಗಿರುತ್ತದೆ. ಕೆಂಪಗೆಯಾಗಿ ಚರ್ಮದಿಂದ ಊದಿದ್ದು ಅತಿಯಾದ ನವೆ ಇರುತ್ತದೆ. ಸೇವಿಸಿದ ಅಹಾರ ದೇಹಕ್ಕೆ ಒಗ್ಗಿಕೊಳ್ಳದೆ ವಾಕರಿಕೆ ಆದಾಗ ವಾಂತಿಯನ್ನು ತಡೆದರೂ ಇಂತಹ ದದ್ದುಗಳು ಉಂಟಾಗುತ್ತವೆ. ಅನೇಕ ಜಾಗದಲ್ಲಿದ್ದು ಸ್ವಲ್ಪವೇ ಹೊತ್ತು ಮಾತ್ರ ಇದ್ದರೆ ಅದಕ್ಕೆ ಕೋಠವೆಂದು ಹೆಸರು. ಪುನರಪಿ ಉದ್ಭವವಾಗುತ್ತಾ ಆಗಾಗ್ಯೆ ಬಂದರೆ ಅದನ್ನು ಉತ್ಕೋಠ ಎನ್ನುತ್ತೇವೆ. ಇವೆಲ್ಲದಕ್ಕೂ ದೇಹದೊಂದಿಗೆ ವಿಷಯ ವಸ್ತುಗಳು ಸಹಜವಾಗಿ ಹೊಂದಿಕೊಳ್ಳದಿರುವುದೆ ಈ ರೋಗದ ಬಂಡವಾಳ. ಆಹಾರದಲ್ಲಾಗುವ ವ್ಯತ್ಯಾಸ, ನೀರಿನ ತೊಂದರೆಗಳು, ಅಭ್ಯಾಸ- ವಿಹಾರದಲ್ಲಾಗುವ ಬದಲಾವಣೆಗಳು, ಮಾನಸಿಕ ಸ್ಥಿತಿಯಲ್ಲಿ ಏರುಪೇರುಗಳು, ಒಗ್ಗದಿರುವ ಔಷಧಗಳು, ಕಾಲದಿಂದಾಗುವ ಪರಿಸರದ ವೈಪರೀತ್ಯಗಳು ಇವುಗಳೆಲ್ಲಾ ಪಿತ್ತದ ಗಂಧೆಯ ಆವಿರ್ಭಾವಕ್ಕೆ ಕಾರಣವಾಗುತ್ತವೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಫುಡ್ ಅಲರ್ಜಿ, ಡ್ರಗ್ ಅಲರ್ಜಿ ಸೇರಿದಂತೆ ಹಲವರು ವಿಧದ ಅಲರ್ಜಿಗಳೆಲ್ಲ ಈ ಪಿತ್ತದ ಗಂಧೆಗೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತವೆ. ಹಾಗೆಂದು ಇದರ ಚಿಕಿತ್ಸೆ ಆಯುರ್ವೆದದಲ್ಲಿ ಆತಂಕಕಾರಿಯಾಗಿಲ್ಲ. ಪರಿಣಾಮಕಾರಿ ಹಾಗೂ ಗುಣಕಾರಿ ಚಿಕಿತ್ಸೆಯಿದ್ದು ಅದನ್ನು ತಿಳಿದುಕೊಳ್ಳುವುದೇ ನೆಮ್ಮದಿ ನೀಡುವ ಸರಳ ದಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net