ಕಾಂಗ್ರೆಸ್ ಹಿಂದೆ ನಗರ ನಕ್ಸಲರು: ಪ್ರಧಾನಿ ಮೋದಿ ಆರೋಪ

ವಿಜಯವಾಣಿ-10
Published on

ಪ್ರಧಾನಿ ಮೋದಿ ಆರೋಪ | ದೇಶ ವಿಭಜನೆ ಕಾರ್ಯಸೂಚಿ ವಿಫಲಗೊಳಿಸಲು ಕರೆ

ವಾಶಿಮ್ (ಮಹಾರಾಷ್ಟ್ರ): ಕಾಂಗ್ರೆಸ್ ಪಕ್ಷವನ್ನು ನಗರ ನಕ್ಸಲರ ಗುಂಪು ನಡೆಸುತ್ತಿದ್ದು, ಅವರ ಅಪಾಯಕಾರಿ ಅಜೆಂಡಾವನ್ನು ಸೋಲಿಸಲು ಜನರು ಒಗ್ಗಟ್ಟಾಗಬೇಕು ಎಂದು ಶನಿವಾರ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಕಾಂಗ್ರೆಸ್ ತನ್ನ ಸ್ವಾರ್ಥ ರಾಜಕಾರಣಕ್ಕಾಗಿ ಬಡವರನ್ನು ಲೂಟಿ ಮಾಡುತ್ತಿದೆ. ಕರ್ನಾಟಕದಲ್ಲಿ ಬಿಜೆಪಿ ಆರಂಭಿಸಿದ್ದ ನೀರಾವರಿ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಬಂದ್ ಮಾಡಿದೆ ಎಂದೂ ಅವರು ಆರೋಪಿಸಿದ್ದಾರೆ.

ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ನಾವೆಲ್ಲರೂ ಒಗ್ಗೂಡಿದರೆ, ದೇಶವನ್ನು ವಿಭಜಿಸುವ ಕಾಂಗ್ರೆಸ್​ನ ಕಾರ್ಯಸೂಚಿಯನ್ನು ವಿಫಲ ಗೊಳಿಸಬಹುದು. ಕಾಂಗ್ರೆಸ್​ಗೆ ಬಡವರನ್ನು ಲೂಟಿ ಮಾಡುವುದು, ಸಮಾಜವನ್ನು ಒಡೆಯುವುದು ಮಾತ್ರ ಗೊತ್ತು. ನಗರ ನಕ್ಸಲರ ಗ್ಯಾಂಗ್ ವಿರುದ್ಧ ನಾವು ಎಚ್ಚೆತ್ತುಕೊಂಡು ಒಗ್ಗಟ್ಟಿನಿಂದ ಇರಬೇಕು. ಭಾರತ ವಿರೋಧಿ ಉದ್ದೇಶ ಹೊಂದಿರುವ ಜನರೊಂದಿಗೆ ಕಾಂಗ್ರೆಸ್ ನಿಕಟ ಸಂಪರ್ಕ ಹೊಂದಿದೆ ಎಂದರು.

ಇತ್ತೀಚೆಗೆ ದೆಹಲಿಯಲ್ಲಿ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದ್ದು, ಕಾಂಗ್ರೆಸ್ ಮುಖಂಡರೊಬ್ಬರು ಇದರ ಕಿಂಗ್​ಪಿನ್ ಆಗಿರುವ ಶಂಕೆ ವ್ಯಕ್ತವಾಗಿದೆ. ಯುವಕರಿಗೆ ಡ್ರಗ್ಸ್ ವ್ಯಸನ ಹಿಡಿಸಿ, ಇದರಿಂದ ಬರುವ ಹಣದಲ್ಲಿ ಚುನಾವಣೆ ಎದುರಿಸಲು ಕಾಂಗ್ರೆಸ್ ಬಯಸಿದೆ. ಕಾಂಗ್ರೆಸ್​ನವರು ದಲಿತರು, ಹಿಂದುಳಿದವರು ಮತ್ತು ಬುಡಕಟ್ಟು ಜನಾಂಗದವರನ್ನು ತಮಗೆ ಸಮಾನರು ಎಂದು ಪರಿಗಣಿಸುವುದಿಲ್ಲ. ಭಾರತವನ್ನು ಒಂದೇ ಕುಟುಂಬ ಆಳಬೇಕು ಎಂದು ಅವರು ಬಯಸುತ್ತಾರೆ. ಆದ್ದರಿಂದಲೇ ಅವರು ಯಾವಾಗಲೂ ಬಂಜಾರ ಸಮುದಾಯದ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡುತ್ತಾರೆ. ಬಂಜಾರ ಸಮುದಾಯದ ಸಂತರು ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಗೆ ಪ್ರೇರಣೆ ನೀಡಿದ್ದಾರೆ. ಮೊದಲು ಬ್ರಿಟಿಷರು ಈ ಸಮುದಾಯಕ್ಕೆ ಕಿರುಕುಳ ನೀಡಿದ್ದರು. ಅವರು ದೇಶ ತೊರೆದ ನಂತರ ಕಾಂಗ್ರೆಸ್ ಸರ್ಕಾರಗಳು ಈ ಪ್ರವೃತ್ತಿಯನ್ನು ಮುಂದುವರಿಸಿಕೊಂಡು ಬಂದಿವೆ ಎಂದು ಪ್ರಧಾನಿ ಆರೋಪಿಸಿದರು.

ರೈತರ ಬದುಕನ್ನು ಹದಗೆಡಿಸಲು ಕಾಂಗ್ರೆಸ್ ಎಲ್ಲ ಯತ್ನಗಳನ್ನೂ ಮಾಡಿದೆ. ಕಾಂಗ್ರೆಸ್ ಸರ್ಕಾರಗಳು ರೈತರ ನೀರಾವರಿ ಯೋಜನೆಗಳ ಹಣವನ್ನು ಭ್ರಷ್ಟಾಚಾರ ನಡೆಸಿ ಕೊಳ್ಳೆ ಹೊಡೆದಿವೆ. ಕೃಷಿ ಸಾಲ ಮನ್ನಾ ಮಾಡುವುದಾಗಿ ಕಾಂಗ್ರೆಸ್ ಸುಳ್ಳು ಆಶ್ವಾಸನೆ ನೀಡುತ್ತಿದೆ. ತೆಲಂಗಾಣದಲ್ಲಿ ಜನರು ಇನ್ನೂ ಸಾಲ ಮನ್ನಾಕ್ಕಾಗಿ ಕಾಯುತ್ತಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಆರಂಭಿಸಿದ್ದ ನೀರಾವರಿ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ನಿಲ್ಲಿಸಿದೆ. ನಮ್ಮ ಸರ್ಕಾರದ ಪ್ರತಿಯೊಂದು ನಿರ್ಧಾರ ವಿಕಸಿತ ಭಾರತಕ್ಕೆ ಬದ್ಧವಾಗಿದೆ. ನಮ್ಮ ರೈತರು ಯೋಜನೆಯ ಪ್ರಮುಖ ಅಡಿಪಾಯ ಎಂದು ಅವರು ಬಣ್ಣಿಸಿದರು.

ಪೊಹರಾದೇವಿ ದೇಗುಲದಲ್ಲಿ ಪ್ರಾರ್ಥನೆ

ವಾಶಿಮ್ ಜಿಲ್ಲೆಯ ಪೊಹರಾದೇವಿ ಜಗದಂಬಾ ಮಾತಾ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಧಾನಿ ಮೋದಿ ಪ್ರಾರ್ಥನೆ ಸಲ್ಲಿಸಿದರು. ಸಂತ ಸೇವಾಲಾಲ್ ಮಹಾರಾಜ್ ಮತ್ತು ಸಂತ ರಾಮರಾವ್ ಮಹಾರಾಜ್ ಅವರ ಸಮಾಧಿಗೆ ಗೌರವ ಸಲ್ಲಿಸಿದರು.

ಹಲವು ಯೋಜನೆ ಉದ್ಘಾಟನೆ

ಕೃಷಿ, ಪಶುಸಂಗೋಪನೆ ಕ್ಷೇತ್ರಗಳಿಗೆ ಸಂಬಂಧಿಸಿದ 23,300 ಕೋಟಿ ರೂ. ಮೊತ್ತದ ಯೋಜನೆಗಳಿಗೆ ಪ್ರಧಾನಿ ಚಾಲನೆ ನೀಡಿದರು. ಬಂಜಾರ ವಿರಾಸತ್ ಮ್ಯೂಸಿಯಂ ಉದ್ಘಾಟಿಸಿದರು. ಕೃಷಿ ಮೂಲಸೌಕರ್ಯ ನಿಧಿ (ಎಐಎಫ್) ಅಡಿಯಲ್ಲಿ 1,920 ಕೋಟಿ ರೂ.ಗಳ ಯೋಜನೆಗಳನ್ನು ಅವರು ಉದ್ಘಾಟಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net