ನಗರೋತ್ಥಾನ ಕಾಮಗಾರಿ ಶೀಘ್ರ ಆರಂಭ

sgr mla
ಸಾಗರ ನಗರದಲ್ಲಿ ವಿವಿಧ ಕಾಮಗಾರಿಗಳ ಕುರಿತು ಅಧಿಕಾರಿಗಳಿಂದ ಶಾಸಕ ಗೋಪಾಲಕೃಷ್ಣ ಬೇಳೂರು ಮಾಹಿತಿ ಪಡೆದರು. ಕಲಸೆ ಚಂದ್ರಪ್ಪ, ಪೌರಾಯುಕ್ತ ಎಚ್.ಕೆ.ನಾಗಪ್ಪ ಇತರರಿದ್ದರು.
Published on

ಸಾಗರ: ನಿರಂತರ ಮಳೆ ಬರುತ್ತಿರುವುದರಿಂದ ನಗರೋತ್ಥಾನ, ಒಳಚರಂಡಿ ಕಾಮಗಾರಿಗಳನ್ನು ಕೈಗೊಳ್ಳಲು ತೊಂದರೆಯಾಗಿದೆ. ಮುಂದಿನ ತಿಂಗಳು ಪುನಾರಂಭವಾಗಲಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಸಾಗರ ನಗರ ವ್ಯಾಪ್ತಿಯಲ್ಲಿ ಸೋಮವಾರ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೀದಿ ಬದಿ ವ್ಯಾಪಾರಿಗಳಿಗಾಗಿ ಫುಡ್‌ಕೋರ್ಟ್ ನಿರ್ಮಿಸಲಾಗುವುದು. ಎಲ್ಲೆಂದರಲ್ಲಿ ಅಂಗಡಿಗಳನ್ನು ಹಾಕಿದರೆ ನೋಟಿಸ್ ನೀಡಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಸರ್ಕಾರಿ ಆಸ್ಪತ್ರೆ ಹಿಂಭಾಗದ ಪಿಡಬ್ಲುೃಡಿ ವಸತಿ ಗೃಹಗಳನ್ನು ನೆಲಸಮಗೊಳಿಸಿ, ಅಲ್ಲಿ ಆಸ್ಪತ್ರೆಯ ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸಲು ಚಿಂತಿಸಲಾಗಿದೆ. ಈ ಬಗ್ಗೆ ಪಿಡಬ್ಲುೃಡಿ ಸಚಿವರಿಗೂ ಮನವಿ ಮಾಡಲಾಗುವುದು. ನಗರವ್ಯಾಪ್ತಿಯ ಉದ್ಯಾನಗಳ ಅಭಿವೃದ್ಧಿ ಮಾಡಲಾಗುವುದು. ಚಾಮರಾಜಪೇಟೆಯ ಪೊಲೀಸ್ ಸ್ಟೇಷನ್ ಎದುರಿನ ರಸ್ತೆಯನ್ನು ಕಾಂಕ್ರಿಟೀಕರಣ ಮಾಡಲಾಗುವುದು ಎಂದರು.
ಸತೀಶ್ ಜಾರಕಿಹೊಳಿ ಮುಂದಿನ ಮುಖ್ಯಮಂತ್ರಿ ಎಂದು ಅಭಿಮಾನಿಗಳು ಫ್ಲೆಕ್ಸ್ ಅಳವಡಿಸಿದ್ದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಸಾಗರ ಕ್ಷೇತ್ರದಲ್ಲಿ ನನ್ನ ಅಭಿಮಾನಿಗಳು ಗೋಪಾಲಕೃಷ್ಣ ಬೇಳೂರು ಮುಂದಿನ ಮುಖ್ಯಮಂತ್ರಿ ಎಂದು ಫ್ಲೆಕ್ಸ್ ಹಾಕಬಹುದಲ್ಲ. ಫ್ಲೆಕ್ಸ್ ಹಾಕದ ತಕ್ಷಣ ಮುಖ್ಯಮಂತ್ರಿ ಆಗಿ ಬಿಡುವುದಿಲ್ಲ. ಪಕ್ಷದ ಹೈಕಮಾಂಡ್ ಇದನ್ನು ಒಪ್ಪಬೇಕು ಎಂದು ತಿಳಿಸಿದರು.
ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಗಳ ಕುರಿತು ಅ.21ರಂದು ರೈತರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಆದರೆ ಸಂತ್ರಸ್ತರಿಗೆ ಸಂಬಂಧಿಸಿ ಅರಣ್ಯ ಸಚಿವರು ಖುದ್ದಾಗಿ ಶಿವಮೊಗ್ಗದಲ್ಲಿ ಅಧಿಕಾರಿಗಳ ಜತೆ ಸಭೆ ನಡೆಸಿದ್ದಾರೆ. ಬೆಂಗಳೂರಿನಲ್ಲಿಯೂ ಜಿಲ್ಲಾ ಉಸ್ತುವಾರಿ ಸಚಿವರನ್ನು ಒಳಗೊಂಡಂತೆ ಮೂರ್ನಾಲ್ಕು ಸಭೆಗಳು ನಡೆದಿದೆ. ಈ ವಿಚಾರದಲ್ಲಿ ತಕ್ಷಣಕ್ಕೆ ನಿರ್ಣಯ ಕೈಗೊಳ್ಳಲು ಸಾಧ್ಯವಿಲ್ಲ. ಸಮಸ್ಯೆ ತಾರ್ಕಿಕ ಅಂತ್ಯ ಕಾಣಲು ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಹೇಳಿದರು.
ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯೆ ಲಲಿತಮ್ಮ ಅವರನ್ನು ಸಭೆಯಿಂದ ಹೊರಗೆ ಕಳಿಸಿ ಎಂದು ಬಿಜೆಪಿ ಸದಸ್ಯರು ಹೇಳಿರುವುದು ಖಂಡನೀಯ. ಮೀಸಲಾತಿ ವಿರುದ್ಧ ನ್ಯಾಯಾಲಯಕ್ಕೆ ಹೋಗುವುದು ಅವರ ಹಕ್ಕು. ನ್ಯಾಯಾಲಯಕ್ಕೆ ಹೋಗಿದ್ದಾರೆ ಎನ್ನುವ ಕಾರಣಕ್ಕೆ ಸಭೆಯಿಂದ ಹೊರಗೆ ಕಳಿಸಿ ಎನ್ನುವುದು ಬಿಜೆಪಿಯವರ ಕೆಟ್ಟಮನಸ್ಥಿತಿ ತೋರಿಸುತ್ತದೆ ಎಂದರು.
ಕಾಂಗ್ರೆಸ್ ಮುಖಂಡರಾದ ಚಂದ್ರಪ್ಪ ಕಲಸೆ, ಗಣಪತಿ ಮಂಡಗಳಲೆ, ಸೈಯದ್ ಜಾಕೀರ್, ರವಿಕುಮಾರ್, ತಾರಾಮೂರ್ತಿ, ಅಶೋಕ್, ಗಿರೀಶ್ ಕೋವಿ, ಪೌರಾಯುಕ್ತ ಎಚ್.ಕೆ.ನಾಗಪ್ಪ, ಶಾಸಕರ ವಿಶೇಷ ಕರ್ತವ್ಯಾಧಿಕಾರಿ ಟಿ.ಪಿ.ರಮೇಶ್, ಪಿಡಬ್ಲುೃಡಿ ಕಾರ್ಯಪಾಲಕ ಅಭಿಯಂತ ಅನಿಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net