ದೆಹಲೀಲಿ ಮೇಲ್ಮನೆ ಟಿಕೆಟ್ ಕ್ಲೈಮ್ಯಾಕ್ಸ್!; ಅಭ್ಯರ್ಥಿ ಆಯ್ಕೆಗೆ ಕೈ, ಕಮಲ ಕಸರತ್ತು

BJP
Published on

ಬೆಂಗಳೂರು: ರಾಜ್ಯಸಭೆಯ ನಾಲ್ಕು ಹಾಗೂ ವಿಧಾನ ಪರಿಷತ್​ನ ಏಳು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಮಂಗಳವಾರ ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿರುವಂತೆಯೇ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಭಾನುವಾರ ದೆಹಲಿಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳ ನಾಯಕರು ಕಸರತ್ತು ನಡೆಸಿದರು.

ಅಭ್ಯರ್ಥಿ ಆಯ್ಕೆ ಸಂಬಂಧ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಕಸರತ್ತು ಅಂತಿಮ ಘಟ್ಟ ತಲುಪಿದ್ದರೂ ಒಮ್ಮತಾಭಿಪ್ರಾಯಕ್ಕೆ ಬರಲು ಸಾಧ್ಯವಾಗಿಲ್ಲ. ಟಿಕೆಟ್ ಮೇಲೆ ಕಣ್ಣಿಟ್ಟಿರುವ ಅಭ್ಯರ್ಥಿಗಳು ನಾನಾ ರೀತಿಯಲ್ಲಿ ಒತ್ತಡ ತಂತ್ರ ಅನುಸರಿಸುತ್ತಿರುವುದು ಆಯಾ ಪಕ್ಷದ ಮುಖಂಡರನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದೆ. ಹೀಗಾಗಿಯೇ ಅಧಿಕೃತ ಪಟ್ಟಿ ಪ್ರಕಟಣೆ ತಡವಾಗಿದೆ. ಇನ್ನೊಂದೆಡೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ವರಿಷ್ಠರ ಖುದ್ದು ಭೇಟಿ ಬಯಸಿ, ಅಭ್ಯರ್ಥಿಗಳನ್ನು ಅಂತಿಮಗೊಳಿಸಿಯೇ ಬರುತ್ತೇವೆಂದು ತೆರಳಿದ್ದ ಎರಡೂ ರಾಷ್ಟ್ರೀಯ ಪಕ್ಷದ ನಾಯಕರು ಬರಿಗೈಲಿ ವಾಪಸಾಗಿದ್ದಾರೆ. ನಾಯಕರ ಭೇಟಿಗೂ ಅವಕಾಶ ದೊರೆತಿಲ್ಲದಿರುವುದು ಬಿಸಿಬಿಸಿ ಚರ್ಚೆಗೆ ಸರಕಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಭೇಟಿ ಬಯಸಿದ್ದ ಸಿಎಂಗೆ ಅವಕಾಶ ದೊರೆಯಲಿಲ್ಲ, ಅದೇ ರೀತಿ ಸಿದ್ದರಾಮಯ್ಯಗೆ ಸೋನಿಯಾ ಗಾಂಧಿ ದರ್ಶನ ಕೊಡಲಿಲ್ಲ.

ಜೆಡಿಎಸ್ ಬೆಳವಣಿಗೆ: ಜಾತಿ, ಪ್ರದೇಶ, ಸಾಮರ್ಥ್ಯಗಳನ್ನು ಅಳೆದೂ ತೂಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮುಂದಾಗಿರುವ ಜೆಡಿಎಸ್, ಲಿಂಗಾಯತ ಕೋಮಿಗೆ ಟಿಕೆಟ್ ನೀಡುವ ಮೂಲಕ ಮುಂದಿನ ಚುನಾವಣೆಯಲ್ಲಿ ಮತ ಸೆಳೆಯುವ ಲೆಕ್ಕಾಚಾರದಲ್ಲಿದೆ.

ಪರಿಷತ್ ಸಭಾಪತಿಯಾಗಿದ್ದ ಬಸವರಾಜ ಹೊರಟ್ಟಿ ಪಕ್ಷ ತೊರೆದ ಮೇಲೆ ಲಿಂಗಾಯತ ಸಮುದಾಯಕ್ಕೆ ಪ್ರಾಶಸ್ತ್ಯ ಕೊಡಬೇಕೆಂಬುದು ಜೆಡಿಎಸ್ ನಾಯಕರ ನಿಲುವು. 2023ರ ವಿಧಾನಸಭೆ ಚುನಾವಣೆಗೆ 123 ಟಾರ್ಗೆಟ್ ಇಟ್ಟುಕೊಂಡಿರುವ ಜೆಡಿಎಸ್ ಮೇಲ್ಮನೆಗೆ ಲಿಂಗಾಯತ ಯುವಕರೊಬ್ಬರಿಗೆ ಸ್ಥಾನ ಕಲ್ಪಿಸುವ ಮೂಲಕ ಲಿಂಗಾಯತ ಮತಗಳನ್ನು ಸೆಳೆಯಬಹುದು ಎಂಬ ಲೆಕ್ಕಾಚಾರದಲ್ಲಿದೆ. ವೀರೇಂದ್ರ ಅವರನ್ನು ಕಣಕ್ಕಿಳಿಸುವುದರಿಂದ ಮಧ್ಯ ಕರ್ನಾಟಕದ 3-4 ಜಿಲ್ಲೆಗಳಲ್ಲಿ ಪಕ್ಷ ಸಂಘಟನೆ ಬಲಪಡಿಸಬಹುದೆಂದು ಹೇಳಲಾಗುತ್ತಿದೆ.

2006 ರಲ್ಲಿ ಬಳ್ಳಾರಿ ಜಿಲ್ಲೆಯಿಂದ ತಿಪ್ಪಣ್ಣ ಅವರನ್ನು ಜೆಡಿಎಸ್ ಮೇಲ್ಮನೆಗೆ ಆಯ್ಕೆ ಮಾಡಿತ್ತು. ಅದನ್ನು ಬಿಟ್ಟರೆ ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆದ ಯಾವುದೇ ಚುನಾವಣೆಯಲ್ಲಿ ಜೆಡಿಎಸ್ ಲಿಂಗಾಯತ ಕೋಮಿಗೆ ಅವಕಾಶ ನೀಡಿರಲಿಲ್ಲ.

2018ರ ವಿಧಾನಸಭೆ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ಕೆ.ಸಿ. ವೀರೇಂದ್ರ (ಪಪ್ಪಿ) ಮತ್ತು ಮಾಜಿ ವಿಧಾನ ಪರಿಷತ್ ಸದಸ್ಯರಾದ ಶರವಣ ಪ್ರಯತ್ನದಲ್ಲಿದ್ದಾರೆ.

ಹೊರಟ್ಟಿ ಹೊರಗೆ ಹೋದ ಮೇಲೆ ಲಿಂಗಾಯತ ಪ್ರಾತಿನಿಧ್ಯದ ಕೊರತೆ ಎದ್ದು ಕಾಣುತ್ತಿತ್ತು. ವೀರೇಂದ್ರ ಅವರನ್ನು ವಿಧಾನ ಪರಿಷತ್ತಿಗೆ ಆಯ್ಕೆ ಮಾಡುವ ಮೂಲಕ ಆ ಕೊರತೆ ನೀಗಿಸಿ ಮುಖಚರ್ಯು ಬದಲಿಸಿಕೊಳ್ಳುವ ಆಲೋಚನೆಯೂ ಜೆಡಿಎಸ್ ಮುಖಂಡರದ್ದಾಗಿದೆ ಎಂದು ಹೇಳಲಾಗುತ್ತಿದೆ.

ಪೈಪೋಟಿಯಲ್ಲಿ ಅಚ್ಚರಿ ಪ್ರವೇಶ

  • ಕಾಂಗ್ರೆಸ್: ಪರಿಷತ್​ಗೆ ಸೀತಾರಾಮ್ ನಿವೇದಿತ್ ಆಳ್ವ, ರಾಜ್ಯಸಭೆಗೆ ರಾಜೀವ್ ಗೌಡ
  • ಬಿಜೆಪಿ: ಪರಿಷತ್​ಗೆ ಕೇಶವ ಪ್ರಸಾದ್, ಜಗದೀಶ್ ಹಿರೇಮನಿ, ಲಿಂಗರಾಜ್ ಪಾಟೀಲ್, ರಾಜ್ಯಸಭೆಗೆ ಗೀತಾ ವಿವೇಕಾನಂದ, ನಿರ್ಮಲ ಕುಮಾರ್ ಸುರಾನ

ಎಸ್.ಆರ್.ಪಾಟೀಲರಿಂದ ಸಿದ್ದರಾಮಯ್ಯ ಭೇಟಿ

ಬೆಂಗಳೂರು: ವಿಧಾನ ಪರಿಷತ್​ಗೆ ಟಿಕೆಟ್​ಗಾಗಿ ಪ್ರಯತ್ನ ನಡೆಸುತ್ತಿರುವ ಕಾಂಗ್ರೆಸ್ ಹಿರಿಯ ನಾಯಕ ಎಸ್.ಆರ್.ಪಾಟೀಲ್ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭಾನುವಾರ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ತಮಗೆ ಪರಿಷತ್ ಟಿಕೆಟ್ ಸಿಗಲು ಸಿದ್ದರಾಮಯ್ಯ ಅಡ್ಡಿಯಾಗಿದ್ದಾರೆಂಬ ಸುದ್ದಿಹರಿದಾಡಿದ ಬೆನ್ನಲ್ಲೇ ಎಸ್.ಆರ್.ಪಾಟೀಲ್ ಭೇಟಿ ಕುತೂಹಲಕ್ಕೆ ಕಾರಣವಾಗಿತ್ತು. ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಪಾಟೀಲ್, ‘ನನಗೆ ಟಿಕೆಟ್ ನೀಡುವ ಬಗ್ಗೆ ಗೊತ್ತಿಲ್ಲ. ಸೋನಿಯಾ ಗಾಂಧಿ ನಿರ್ಣಯ ತೆಗೆದುಕೊಳ್ಳುತ್ತಾರೆ.

ಪಕ್ಷ ನನಗೆ ಸಾಕಷ್ಟು ಅವಕಾಶ ನೀಡಿದೆ. ಎರಡು ಬಾರಿ ವಿರೋಧ ಪಕ್ಷದ ನಾಯಕನಾಗಿ, ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಇಪ್ಪತ್ನಾಲ್ಕು ವರ್ಷಗಳ ಕಾಲ ಮೇಲ್ಮನೆ ಸದಸ್ಯನಾಗಿದ್ದೆ. ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು, ಹಾಗಾಗಿ ಭೇಟಿ ಆಗುತ್ತಿರುತ್ತೇನೆ. ಟಿಕೆಟ್ ಬಗ್ಗೆ ಸಿದ್ದರಾಮಯ್ಯ ಜತೆ ರ್ಚಚಿಸಿಲ್ಲ. ನಾನು ಯಾವುದೇ ಲಾಬಿ ಮಾಡುವುದಿಲ್ಲ. ಅವಕಾಶ ನೀಡೋದು ಬಿಡೋದು ಪಕ್ಷಕ್ಕೆ ಬಿಟ್ಟ ವಿಚಾರ’ ಎಂದು ಹೇಳಿದರು.

ಬಿಜೆಪಿ ಬೆಳವಣಿಗೆ: ಬಿಜೆಪಿ ಕೋರ್ ಕಮಿಟಿಯಲ್ಲಿ ತೀರ್ವನವಾಗಿರುವಂತೆ ಯಾವ್ಯಾವ ವರ್ಗಕ್ಕೆ ಆದ್ಯತೆ ನೀಡಬೇಕು ಎನ್ನುವುದನ್ನು ಪಟ್ಟಿ ಮಾಡಿ ಅಭ್ಯರ್ಥಿಗಳ ಹೆಸರುಗಳನ್ನು ಕಳುಹಿಸಿಕೊಡಲಾಗಿದೆ. ಲಿಂಗಾಯಿತ, ಒಕ್ಕಲಿಗರು, ಬ್ರಾಹ್ಮಣ, ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ಪಂಗಡ ವಿಭಾಗದಲ್ಲಿ ಟಿಕೆಟ್ ನೀಡುವುದಾದರೆ ಯಾರಿಗೆ ಆದ್ಯತೆ ನೀಡಬೇಕು ಎನ್ನುವ ಮಾಹಿತಿಯನ್ನು ಹೈಕಮಾಂಡ್​ಗೆ ರವಾನಿಸಲಾಗಿದೆ. ಬಿ.ವೈ.ವಿಜಯೇಂದ್ರ, ಲಕ್ಷ್ಮಣ ಸವದಿ, ನೆ.ಲ.ನರೇಂದ್ರಬಾಬು, ನಿರ್ಮಲಕುಮಾರ ಸುರಾನ, ಭಾನುಪ್ರಕಾಶ್, ಕೇಶವಪ್ರಸಾದ್, ಜಗದೀಶ್ ಹಿರೇಮನಿ, ಛಲವಾದಿ ನಾರಾಯಣಸ್ವಾಮಿ ಅವರ ಹೆಸರುಗಳು ಹೈಕಮಾಂಡ್ ಪರಿಶೀಲನೆಯಲ್ಲಿವೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖುದ್ದು ದೆಹಲಿ ಯಾತ್ರೆ ಮಾಡಿ ಬಂದರೂ, ಹೈಕಮಾಂಡ್ ಇನ್ನೂ ಪಟ್ಟಿಗೆ ಗ್ರೀನ್ ಸಿಗ್ನಲ್ ತೋರಿಸಿಲ್ಲ. ಯಾರಿಗೆ ಟಿಕೆಟ್ ಕೊಡಬೇಕು ಎನ್ನುವುದಕ್ಕಿಂತ ಪಟ್ಟಿಯಲ್ಲಿರುವ ಕೆಲವರಿಗೆ ಹೇಗೆ ಟಿಕೆಟ್ ತಪ್ಪಿಸಬೇಕು ಎನ್ನುವ ಕಸರತ್ತು ಪಕ್ಷದೊಳಗೆ ತೀವ್ರತೆ ಪಡೆದುಕೊಂಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

ರಾಜ್ಯ ಕಾಂಗ್ರೆಸ್​ನಲ್ಲೂ ಸರ್ಕಸ್: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಡುವಿನ ಮುಸುಕಿನ ಗುದ್ದಾಟಗಳು ಟಿಕೆಟ್ ಹಂಚಿಕೆಯನ್ನು ಕಗ್ಗಂಟಾಗಿಸಿವೆ. ಕಾಂಗ್ರೆಸ್​ನ ಹಿರಿಯ ಮುಖಂಡ ಎಸ್.ಆರ್.ಪಾಟೀಲ್ ಟಿಕೆಟ್ ವಿಷಯದಲ್ಲಿ ಸಿದ್ದರಾಮಯ್ಯ ಅಡ್ಡಿಯಾಗಿದ್ದಾರೆ ಎನ್ನುವುದು ಚರ್ಚೆಗೆ ಗ್ರಾಸವಾಗಿದೆ. ಪಾಟೀಲ್ ಪರವಾಗಿ ಡಿಕೆಶಿ ಬ್ಯಾಟಿಂಗ್ ಮಾಡುತ್ತಿರುವುದು ಹೈಕಮಾಂಡ್​ಗೆ ನುಂಗಲಾರದ ತುತ್ತಾಗಿದೆ. ಸಿದ್ದರಾಮಯ್ಯ ವಿಶ್ವಾಸವನ್ನು ಉಳಿಸಿಕೊಂಡು, ಡಿಕೆಶಿ ಅವರನ್ನು ಸಂಭಾಳಿಸಿಕೊಂಡು ಟಿಕೆಟ್ ಘೋಷಣೆ ಮಾಡುವ ಟಾಸ್ಕ್ ಎಐಸಿಸಿ ಮೇಲಿದೆ. ಎಸ್.ಆರ್.ಪಾಟೀಲ್, ಬಿ.ಎಲ್.ಶಂಕರ್, ಸುದರ್ಶನ್, ವಿ.ಎಸ್.ಉಗ್ರಪ್ಪ, ಆರ್.ಬಿ.ತಿಮ್ಮಾಪುರ, ಪುಷ್ಪಾ ಅಮರನಾಥ್, ಮನ್ಸೂರ್ ಅವರ ಹೆಸರುಗಳು ಹೈಕಮಾಂಡ್​ಗೆ ಕಳುಹಿಸಿರುವ ಪಟ್ಟಿಯಲ್ಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net