

| ಮಾರುತಿ ಭಜಂತ್ರಿ ಹುಬ್ಬಳ್ಳಿ
ಕರ್ನಾಟಕದ ಕಲಬುರಗಿ, ಬಳ್ಳಾರಿ, ಬಾಗಲಕೋಟೆ, ಭದ್ರಾವತಿ, ಹುಬ್ಬಳ್ಳಿ ಮತ್ತು ಮಂಗಳೂರುಗಳಲ್ಲಿರುವ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆ (ಜ್ಯೂನಿಯರ್ ಟೆಕ್ನಿಕಲ್ ಸ್ಕೂಲ್)ಗಳು ಏಳು ದಶಕಗಳಿಂದ ಪ್ರೌಢಶಾಲಾ ಮಟ್ಟದಲ್ಲಿ ತಾಂತ್ರಿಕ ಶಿಕ್ಷಣವನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಆದಾಗ್ಯೂ ಕರ್ನಾಟಕ ಸರ್ಕಾರದ ತಾಂತ್ರಿಕ ಶಿಕ್ಷಣ ಇಲಾಖೆಯ ಅಧೀನದಲ್ಲಿರುವ ಈ ಶಾಲೆಗಳು ತುಂಬ ಹಳೆಯ ಮೂಲಸೌಕರ್ಯ, ಬಳಕೆಯಲ್ಲಿಲ್ಲದ ಯಂತ್ರೋಪಕರಣಗಳು ಮತ್ತು ಆಧುನಿಕ ಸೌಲಭ್ಯಗಳ ಕೊರತೆಯೊಂದಿಗೆ ಹೋರಾಡುತ್ತಿವೆ ಮತ್ತು ಇಂದಿನ ತಾಂತ್ರಿಕ ಸ್ಪರ್ಧಾತ್ಮಕ ಪರಿಸರದಲ್ಲಿ ಉತ್ತಮ ಸಾಧನೆ ಮಾಡಲು ವಿದ್ಯಾರ್ಥಿಗಳ ಅವಕಾಶಗಳನ್ನು ಸೀಮಿತಗೊಳಿಸುತ್ತಿವೆ.
ಇದಕ್ಕೆ ವ್ಯತಿರಿಕ್ತವಾಗಿ ಶಾಲಾ ಶಿಕ್ಷಣ ಇಲಾಖೆಯ ನೂರಾರು ಶಾಲೆಗಳು ಇತ್ತೀಚೆಗೆ ಆವಿಷ್ಕಾರ ಪ್ರಯೋಗಾಲಯ, ಅಟಲ್ ಟಿಂಕರಿಂಗ್ ಲ್ಯಾಬ್ ಮತ್ತು ಎನ್.ಎಸ್.ಕ್ಯೂ.ಎಫ್ ಸೌಲಭ್ಯಗಳೊಂದಿಗೆ ಅಭಿವೃದ್ಧಿ ಹೊಂದುತ್ತಿವೆ ಹಾಗೂ ಸ್ಟೆಮ್ವಿಜ್ಞಾನ, ತಂತ್ರಜ್ಞಾನ, ಅಭಿಯಾಂತ್ರಿಕ ಮತ್ತು ಗಣಿತ (STEM - Science, Technology, Engineering, Mathematics) ಉಪಕರಣಗಳನ್ನು ಮತ್ತು ಸ್ಮಾರ್ಟ್ ತರಗತಿಗಳನ್ನು ಅಳವಡಿಸಿಕೊಂಡು ಅನ್ವೇಷಣೆ ಮತ್ತು ನಾವೀನ್ಯ ಚಟುವಟಿಕೆಗಳನ್ನು ಪರಿಚಯಿಸುತ್ತಿವೆ.
ಆದ್ದರಿಂದ ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶನಾಲಯವು ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಗಳ ಸೌಲಭ್ಯಗಳನ್ನು ನವೀಕರಿಸಬೇಕು. ಪಠ್ಯಕ್ರಮವನ್ನು ಪರಿಷ್ಕರಿಸಿ, ಸೂಕ್ತ ತರಬೇತಿ ಹೊಂದಿದ ತಾಂತ್ರಿಕ ಪ್ರಶಿಕ್ಷಕರನ್ನು ನೇಮಿಸಬೇಕು. ಮತ್ತು ಸ್ಮಾರ್ಟ್ ತರಗತಿಗಳನ್ನು ಹಾಗೂ ಇನ್ನೋವೇಶನ್ ಲ್ಯಾಬ್ ಚಟುವಟಿಕೆಗಳನ್ನು ಆರಂಭಿಸಬೇಕು.
ಜೆಟಿಎಸ್ ಶಾಲೆಗಳನ್ನು ಮೇಲ್ದರ್ಜೆಗೇರಿಸುವುದರಿಂದ, ತಾಂತ್ರಿಕ-ಉದ್ಯಮ ಸಂಬಂಧಿತ ಮತ್ತು ಅನ್ವೇಷಣೆ ಕೌಶಲಗಳೊಂದಿಗೆ ವಿದ್ಯಾರ್ಥಿಗಳ ಸಬಲೀಕರಣ ಸಾಧ್ಯವಾಗಲಿದೆ. ಜೊತೆಗೆ ಕರ್ನಾಟಕದಲ್ಲಿ ಮೊಟ್ಟಮೊದಲಿಗೆ ಪ್ರೌಢಶಾಲಾ ಮಟ್ಟದಲ್ಲಿ ತಾಂತ್ರಿಕ ಶಿಕ್ಷಣ ನೀಡಿದ ಪ್ರಮುಖ ಶಾಲೆಗಳ ಪರಂಪರೆಯನ್ನು ಸಂರಕ್ಷಿಸಿದಂತಾಗುತ್ತದೆ.