

ಬೆಂಗಳೂರು: ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತ ವಸತಿ ಶಾಲೆಗಳ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಉದ್ದೇಶದಿಂದ ಉನ್ನತೀಕರಣಕ್ಕೆ ವಿಶೇಷ ಕಾರ್ಯಕ್ರಮ ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು. ತುಳಿತಕ್ಕೆ ಒಳಗಾದ ಸಮುದಾಯಗಳ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಹಾಗೂ ಜಾಗತಿಕ ಮಟ್ಟದ ಶಿಕ್ಷಣ, ತರಬೇತಿ ಹಾಗೂ ಕೌಶಲ ಪಡೆಯುವುದಕ್ಕೆ ಈ ಕಾರ್ಯಕ್ರಮ ನೆರವಾಗಲಿದೆ ಎಂದರು.
ಅವರು ವಿಧಾನಸೌಧ ಬ್ಯಾಂಕ್ವೆಟ್ ಹಾಲ್ನಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಮಾಜಿಕ ನ್ಯಾಯದ ನೇತಾರ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 106ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಇದಕ್ಕೂ ಮುನ್ನ ಬೊಮ್ಮಾಯಿ ಅವರು ವಿಧಾನಸೌಧದ ಆವರಣದಲ್ಲಿರುವ ಅರಸು ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಅರಸು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಧೀಮಂತ ನಾಯಕ: ತಮ್ಮ ಅಧಿಕಾರದ ಅವಧಿಯುದ್ದಕ್ಕೂ ಕ್ಲಿಷ್ಟಕರ ನಿರ್ಣಯಗಳನ್ನು ತೆಗೆದುಕೊಂಡ ಧೀಮಂತ ನಾಯಕ ದೇವರಾಜ ಅರಸು ಅವರು. ಸಾಮಾಜಿಕ ನ್ಯಾಯ, ಭೂಸುಧಾರಣಾ ಕಾಯ್ದೆ ಜಾರಿ, ಆಡಳಿತದಲ್ಲಿ ಕನ್ನಡ ಭಾಷೆ, ಕರ್ನಾಟಕವೆಂಬ ಹೆಸರು ನಾಮಕರಣ - ಹೀಗೆ ಹತ್ತು-ಹಲವು ಆದರ್ಶಪ್ರಾಯ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ ಎಂದು ಕೊಂಡಾಡಿದರು.
ನಿರ್ಲಕ್ಷಿತ ಸಣ್ಣ ಸಮುದಾಯಗಳಲ್ಲಿ ರಾಜಕೀಯ ಪ್ರಜ್ಞೆ ಮೂಡಿಸಿ, ರಾಜಕೀಯ ಅಧಿಕಾರದ ಭಾಗಸ್ಥರಾಗುವಂತೆ ಅರಸು ನೋಡಿಕೊಂಡರು. ಪ್ರಸ್ತುತ ರಾಜಕೀಯದಲ್ಲಿ ಇರುವವರು ಹಲವು ಅರಸು ಪ್ರಾಡಕ್ಟ್ಗಳು ಎಂದ ಅವರು, ಜಟ್ಟಿಯಾಗಿದ್ದ ಅರಸು ಗಟ್ಟಿ ವ್ಯಕ್ತಿತ್ವದವರಾಗಿದ್ದರು. ಜನರ ಭಾವನೆ ಗಮನಿಸಿದ ವಿರೋಧಿಗಳು ತಣ್ಣಗಾಗಿದ್ದರು. ಆದರೆ ಅರಸು ತಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗಲಿದೆ ಎಂದಾಗ ಅಧಿಕಾರವನ್ನು ತ್ಯಜಿಸಿದರು ಎಂದು ಬೊಮ್ಮಾಯಿ ಸ್ಮರಿಸಿದರು.
ಪ್ರಶಸ್ತಿ ಪ್ರದಾನ: ಇದೇ ಸಂದರ್ಭದಲ್ಲಿ ಮೂರು ವರ್ಷಗಳಿಂದ ಬಾಕಿಯಿದ್ದ ಅರಸು ಹೆಸರಿನ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಅಬಲೆಯರಿಗಾಗಿ ಶ್ರಮಿಸುತ್ತಿರುವ ಸುಮಂಗಲಿ ಸೇವಾ ಟ್ರಸ್ಟ್ ನ ಸುಶೀಲಮ್ಮ, ಅಲೆಮಾರಿಗಳ ಏಳಿಗೆಗೆ ಸೇವೆ ಸಲ್ಲಿಸುತ್ತಿರುವ ಕೆ.ಭಾಸ್ಕರದಾಸ್ ಎಕ್ಕಾರು, ದೇವದಾಸಿಯರು ಮತ್ತು ಬಡವರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಬಿ.ಎಲ್.ಪಾಟೀಲ್ ಅವರಿಗೆ ಡಿ.ದೇವರಾಜ ಅರಸು ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು.
ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ಪಿ.ಸಿ.ಮೋಹನ್, ಶಾಸಕ ರಿಜ್ವಾನ್ ಅರ್ಷದ್, ಸಾಹಿತಿ ಪ್ರೊ.ದೊಡ್ಡ ರಂಗೇಗೌಡ, ವಿವಿಧ ನಿಗಮ-ಮಂಡಳಿಗಳ ಅಧ್ಯಕ್ಷರು, ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.