

ಬೆಂಗಳೂರು: ಪ್ರತಿಷ್ಠಿತ ಕೈಗಾರಿಕೆ, ಕಂಪನಿಗಳಲ್ಲಿ ಸಾವಿರಾರು ಯುವ ಅಭ್ಯರ್ಥಿಗಳಿಗೆ ಉದ್ಯೋಗ ಸಿಗುವಂತೆ ಹಾಗೂ ಸ್ವಂತ ಉದ್ದಿಮೆ ಆರಂಭಿಸುವಂತೆ ಅಣಿಗೊಳಿಸುವ ಉದ್ದೇಶದಿಂದ ರಾಜ್ಯ ಸರ್ಕಾರ, ಕೈಗಾರಿಕೆ 4.0 ಯೋಜನೆ ಜಾರಿಗೆ ತಂದಿದೆ. 4,636 ಕೋಟಿ ರೂ. ವೆಚ್ಚದ ಯೋಜನೆಯಡಿ ರಾಜ್ಯ ಸರ್ಕಾರ, ಟಾಟಾ ಟೆಕ್ನಾಲಜೀಸ್ ಸೇರಿ 20 ಉದ್ಯಮ ಪಾಲುದಾರರ ಸಹಯೋಗದಲ್ಲಿ 150 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು (ಐಟಿಐ) ಉನ್ನತೀಕರಿಸಿ ತಾಂತ್ರಿಕ ಚಟುವಟಿಕಾ ಕೇಂದ್ರಗಳನ್ನಾಗಿ ಪರಿವರ್ತಿಸುವ ಗುರಿ ಹೊಂದಿದೆ. ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ಕೌಶಲಪೂರ್ಣ ಕಾರ್ವಿುಕದಳವನ್ನು ನಿರ್ವಿುಸುವ ಈ ಮಹತ್ವಾಕಾಂಕ್ಷಿ ಯೋಜನೆಗೆ ಟಾಟಾ ಟೆಕ್ನಾಲಜೀಸ್ 4,080 ಕೋಟಿ ರೂ. ಬಂಡವಾಳ ಹೂಡಿದರೆ, ರಾಜ್ಯ ಸರ್ಕಾರ 657 ಕೋಟಿ ರೂ. ಅನುದಾನ ಕೊಟ್ಟಿದೆ. ಐಟಿಐ ಕಾಲೇಜುಗಳ ಕಟ್ಟಡ ನಿರ್ಮಾಣ ಸೇರಿ ಮೂಲಸೌಕರ್ಯ ಸುಧಾರಣೆಗಾಗಿ ಸರ್ಕಾರ, 220 ಕೋಟಿ ರೂ.ಅನುದಾನ ಒದಗಿಸಿದೆ. ವಿವಿಧ ತಂತ್ರಜ್ಞಾನ ವಲಯಗಳಲ್ಲಿ ದೀರ್ಘಾವಧಿಯ ಶಿಕ್ಷಣ ತರಬೇತಿಯಿಂದ ವಾರ್ಷಿಕ 20 ಸಾವಿರ ಹಾಗೂ ಅಲ್ಪಾವಧಿ ಶಿಕ್ಷಣ ಕ್ರಮಗಳಿಂದ 1 ಲಕ್ಷ ಕಾರ್ವಿುಕರನ್ನು ಸೃಷ್ಟಿಸಲಾಗುತ್ತಿದೆ.
ಯೋಜನೆಯ ಮುಖ್ಯಾಂಶಗಳು: ಐಟಿಐ ಕಾಲೇಜುಗಳ ಕಟ್ಟಡಗಳಲ್ಲಿ ಮೂಲಸೌಕರ್ಯ, 150 ನವೀನ ಕಾರ್ಯಾಗಾರ, 72 ತಂತ್ರಜ್ಞಾನ ಪ್ರಯೋಗಶಾಲೆಗಳು, 78 ಪ್ರಯೋಗಶಾಲೆಗಳ ಉನ್ನತೀಕರಣ, ವಿದ್ಯಾರ್ಥಿಗಳಿಗೆ ಅತ್ಯಾಧುನಿಕ ತಂತ್ರಜ್ಞಾನ ವಲಯ ತರಬೇತಿ ಮತ್ತು ಉದ್ಯಮ ಕೇಂದ್ರೀತ ಪಠ್ಯಕ್ರಮ, ವಿದ್ಯಾರ್ಥಿಗಳನ್ನು ಉದ್ಯೋಗ ಕ್ಷೇತ್ರಗಳಿಗೆ ಅಣಿಗೊಳಿಸಲು ಅವರ ಸಂವಹನದ ಕೌಶಲಕ್ಕೆ ಆದ್ಯತೆ, ಜಾಗತಿಕ ಮೂಲ ಉಪಕರಣ ನಿರ್ವತೃಗಳು ಒದಗಿಸಿದ ತಂತ್ರಾಂಶಗಳ ಬಳಕೆ, ಉತ್ಕೃಷ್ಠ ತರಬೇತಿ ಖಚಿತಪಡಿಸುವ ಸಲುವಾಗಿ 3 ವರ್ಷವರೆಗೆ ಐಟಿಐ ತರಬೇತುದಾರರಿಗೆ ಉದ್ಯಮಗಳ ವಿಷಯ ತಜ್ಞರಿಂದ ತರಬೇತಿ, ಪ್ರತಿಷ್ಠಿತ ಕಂಪನಿಗಳ ಜತೆ ಒಡಂಬಡಿಕೆ, ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳು ಹಾಗೂ ಬೃಹತ್ ಕೈಗಾರಿಕೆಗಳೊಂದಿಗೆ ಆವಿಷ್ಕಾರ, ಅಭಿವೃದ್ಧಿ ಕಾರ್ಯಗಳಲ್ಲಿ ಪ್ರವೃತ್ತರಾಗಲು ತಂತ್ರಜ್ಞಾನ ಚಟುವಟಿಕಾ ಕೇಂದ್ರಗಳ ಪ್ರಾರಂಭ, ಉದ್ಯೋಗವಕಾಶಗಳ ಲಭ್ಯತೆ ಸಾಧಿಸಲು ಶಿಕ್ಷಣ ಕ್ರಮ ಹಾಗೂ ಕೈಗಾರಿಕೆಗಳ ಸಂಪರ್ಕ ಸಾಧನೆ, ಐಟಿಐ, ಪಾಲಿಟೆಕ್ನಿಕ್ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ 5 ವರ್ಷವರೆಗೆ ವಿಸ್ಯಾಟ್ ತಂತ್ರಜ್ಞಾನದ ಮೂಲಕ ವಿದ್ಯುನ್ಮಾನ ಕಲಿಕಾ ವೇದಿಕೆ.
ವಿದ್ಯಾರ್ಥಿಗಳಿಗೆ ಅನುಕೂಲ: ಯೋಜನೆಯಡಿ ವಿದ್ಯಾರ್ಥಿಗಳಿಗೆ 11 ವಿವಿಧ ವಲಯಗಳಲ್ಲಿ ಕೈಗಾರಿಕೆಗಳಲ್ಲಿ ತರಬೇತಿ ಸಿಗಲಿದೆ. ಕೌಶಲಾಭಿವೃದ್ಧಿ ಅಪೇಕ್ಷೆಯಲ್ಲಿ ಇರುವ ವಿದ್ಯಾರ್ಥಿಗಳಿಗೆ ತಜ್ಞರಿಂದ ಶಿಕ್ಷಣ, ಆಧುನಿಕ ಉಪಕರಣಗಳ ಬಳಸಿ ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ. ಅಲ್ಲದೆ, ವೈಮಾನಿಕ ಹಾಗೂ ರಕ್ಷಣಾ ವಲಯ, ಕೃಷಿ, ವಾಹನೋದ್ಯಮ, ಗೃಹ ಬಳಕೆಯ ವಿದ್ಯುನ್ಮಾನ ಉಪಕರಣಗಳು, ವಿದ್ಯುತ್ಚಾಲಿತ ವಾಹನಗಳು, ಆಹಾರ ಮತ್ತು ಪಾನೀಯ, ಮರಗೆಲಸ ಮತ್ತು ಸೈನ್ ಬೋರ್ಡ್, ಮೂಲಸೌಕರ್ಯ, ಲೋಹ ಮತ್ತು ಗಣಿಗಾರಿಕೆ, ಇಂಧನ, ಪ್ಯಾಕೇಜಿಂಗ್ ಉದ್ಯಮ, ಔಷಧೀಯ ಉದ್ಯಮ, ರೈಲ್ವೇ, ಹಡಗು ನಿರ್ವಣ, ಸ್ಮಾರ್ಟ್ ಸಿಟಿ ಹಾಗೂ ಕರಕುಶಲ ವಸ್ತುಗಳ ಆಟಿಕೆಗಳ ಉದ್ಯಮಗಳಲ್ಲಿ ಉದ್ಯೋಗ ಪಡೆಯಲು ತಯಾರಿ.
ಜೂ.25ಕ್ಕೆ ಪ್ರವೇಶ ವಿಸ್ತರಣೆ: ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಮತ್ತು ಕೈಗಾರಿಕೆಗಳನ್ನು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ಮಾಸಿಕ 1,500 ರೂ. ಜತೆಗೆ ರಾಜ್ಯ ಸರ್ಕಾರ 1,500 ರೂ. ಶಿಶಿಕ್ಷು ವೇತನ ನೀಡುತ್ತಿದೆ. ಸರ್ಕಾರಿ ಐಟಿಐಗಳಲ್ಲಿ ಕೈಗಾರಿಕೆ 4.0 ಯೋಜನೆ ಸಂಬಂಧಿಸಿದ ಕೋರ್ಸ್ಗಳನ್ನು ಮುಖ್ಯಮಂತ್ರಿಗಳ ಕೌಶಲ ಕರ್ನಾಟಕ ಯೋಜನೆಯಡಿ ನೀಡಲಾಗುತ್ತದೆ. ಎಸ್ಸೆಸ್ಸೆಲ್ಸಿ ಪಾಸಾದ ಬಳಿಕ ಆಸಕ್ತ ವಿದ್ಯಾರ್ಥಿಗಳು ಐಟಿಐಗೆ ಸೇರಿಕೊಳ್ಳಬಹುದು. ಪ್ರವೇಶಾತಿಯನ್ನು ಜೂ.25ರವರೆಗೆ ವಿಸ್ತರಿಸಲಾಗಿದೆ. ಆ.1ರಿಂದ ಶೈಕ್ಷಣಿಕ ಕೋರ್ಸ್ಗಳು ಆರಂಭವಾಗಲಿವೆ. ರಾಜ್ಯಾದ್ಯಂತ ಇದುವರೆಗೆ 6 ಸಾವಿರ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಪ್ರಸಕ್ತ ವರ್ಷದಿಂದ ರೋಬೊಟಿಕ್ಸ್, ಎಲೆಕ್ಟ್ರಿಕಲ್ ವೆಹಿಕಲ್ ಕೋರ್ಸ್ ಲಭ್ಯವಿದೆ. ಐಟಿಐ ಪಾಸಾದ ವಿದ್ಯಾರ್ಥಿಗಳಿಗೆ ಡಿಪ್ಲೊಮಾ ಕೋರ್ಸ್ಗಳಿಗೆ ಲ್ಯಾಟರಲ್ ಪ್ರವೇಶಕ್ಕೆ ಅವಕಾಶವೂ ಇದೆ. ವಿವರಕ್ಕಾಗಿ 155267 ಸಹಾಯವಾಣಿಗೆ ಕರೆ ಮಾಡಿ.