FIR ರದ್ದು ಮಾಡುವಂತೆ ಕೋರಿ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ 'ಬುದ್ಧಿವಂತ'!

Upendra
Published on

ಬೆಂಗಳೂರು: ಕನ್ನಡ ಚಿತ್ರರಂಗದ ರಿಯಲ್​ ಸ್ಟಾರ್​ ಉಪೇಂದ್ರ ವಿರುದ್ಧ ಸಿ.ಕೆ, ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜಾತಿ ನಿಂದನೆ ಆರೋಪದಡಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು. ಆದರೆ ವಿಚಾರಣೆಗೂ ಹಾಜರಾಗದೇ ಉಪೇಂದ್ರ ನೇರವಾಗಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಎಫ್​ಐಆರ್​ಗೆ ಕಾರಣ, ನಟ ಉಪೇಂದ್ರ ಅವರು ಕಾರ್ಯಕ್ರಮವೊಂದರಲ್ಲಿ ನೀಡಿದ್ದ ಹೇಳಿಕೆಯೊಂದು ಸಾಮಾಜಿಕ ಜಾಲಾತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ನಿರ್ದಿಷ್ಟ ಸಮಾಜದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು ಎಂದು ಉಲ್ಲೇಖಿಸಿ ದೂರು ನೀಡಲಾಗಿತ್ತು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಿಂದ ದೂರು ಸ್ವೀಕರಿಸಿದ ಪೊಲೀಸರು, ನಟನ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದರು.

ಇದಾದ ಬಳಿಕ ಇಂದು ವಿಚಾರಣೆಗೆ ಉಪೇಂದ್ರ ಹಾಜರಾಗದ ಹಿನ್ನೆಲೆಯಲ್ಲಿ, ಅವರ ಮನೆಗೇ ಪೊಲೀಸರು ತೆರಳಿದ್ದರು. ಆದರೆ ಅಲ್ಲೂ ಅವರು ಪತ್ತೆ ಆಗಿರಲಿಲ್ಲ. ಇದೀಗ ಉಪೇಂದ್ರ, ಹೈಕೋರ್ಟ್‍ ಮೆಟ್ಟಿಲೇರಿದ್ದು FIRಅನ್ನೇ ರದ್ದು ಮಾಡುವಂತೆ ಕೋರಿದ್ದಾರೆ.

ಉಪೇಂದ್ರ ಹೇಳಿದ್ದೇನು?

“ಇನ್ನೋಸೆಂಟ್‌ ಹೃದಯಗಳಿಂದಲೇ ನಿಜವಾದ ಬದಲಾವಣೆ ಸಾಧ್ಯ. ಇನ್ನೋಸೆಂಟ್‌ ಅಂದರೆ ಮುಗ್ಧತೆ ಇದೆಯಲ್ಲಾ ಅದೇ ಸತ್ಯದ ಮನಸ್ಸು. ಇನ್ನೋಸೆಂಟ್‌ ಮನಸ್ಸುಗಳು ಇಲ್ಲಿ ಜಾಯಿನ್‌ ಆಗಲಿ ಮಾತನಾಡಲಿ, ಹೇಳುವುದಕ್ಕೆ ಇಷ್ಟಪಡ್ತೀನಿ. ಅವರಿಂದ ನಮಗೆ ತುಂಬಾ ಬೆನಿಫಿಟ್‌ ಇದೆ, ಸಜೆಷನ್‌ ಕೂಡ ಉತ್ತಮವಾಗಿರುತ್ತದೆ. ಏನೋ ಒಂದು ಕೇರ್‌ಲೆಸ್‌ ಆಗಿ ಏನೋ ಒಂದು ಸಜೆಸ್ಟ್‌ ಮಾಡೋಣ, ಕೇರ್‌ಲೆಸ್‌ ಆಗಿ ಅವಹೇಳನ ಮಾಡುವುದಾಗಲಿ, ಏನೋ ನಾವು ಮಾತನಾಡಬೇಕು ಟೈಮ್‌ ಇದೆ ಎಂದು ಬಾಯಿಗೆ ಬಂದಂತೆ ಕಮೆಂಟ್‌ ಮಾಡೋಣ ಎನ್ನುವವರೂ ಇದ್ದಾರೆ. ಅಂತಹವರನ್ನ ಬಿಡಿ, ಅವರನ್ನು ಏನೂ ಮಾಡೋಕೆ ಆಗಲ್ಲ. “ಊರು ಎಂದಮೇಲೆ ಹೊಲೆಗೇರಿ ಇರುತ್ತೆ”, ಆ ತರಹ ಇಂಥವರೂ ಇರುತ್ತಾರೆ ಜಗತ್ತಲ್ಲಿ ಏನೂ ಮಾಡೋಕಾಗಲ್ಲ. ಅವರನ್ನೆಲ್ಲಾ ಬಿಟ್ಟಾಕೋಣ ಅದನ್ನು ಓದೋದು ಬೇಡ ನಾವು. ಸ್ವಲ್ಪ ನಾವು ಹೇಳ್ತಿರೋದು ಇಂಥ ಒಂದು ಪ್ಯೂರ್‌ ಜನರನ್ನ ಪ್ರೀತಿಸೋವಂಥದ್ದು, ಜನರನ್ನು ಪ್ರೀತಿಸುವುದೇ ಜನಾರ್ಧನನ ಪೂಜೆ ಎನ್ನುತ್ತಾರೆ. ಜನರನ್ನು ಪ್ರೀತಿಸುವುದೇ ದೇಶಪ್ರೇಮ ಎನ್ನುತ್ತಾರೆ’ ಎಂದು ಹೇಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net