

ಬೆಂಗಳೂರು: ಕನ್ನಡ ಚಿತ್ರರಂಗದ ಬುದ್ದಿವಂತ ನಿರ್ದೇಶಕ, ರಿಯಲ್ ಸ್ಟಾರ್ ಉಪೇಂದ್ರ ಇದೀಗ ತಮ್ಮ ಬಹುನಿರೀಕ್ಷಿತ 'ಯುಐ' ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದು, ಎಂದಿನಂತೆ ತಮ್ಮದೇ ವಿಭಿನ್ನ ಶೈಲಿಯಲ್ಲಿ ಚಿತ್ರದ ಒಂದೊಂದೇ ಹಂತವನ್ನು ಸಿನಿಪ್ರಿಯರಿಗೆ ಪರಿಚಯಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಒಂದು ಹಾಡಿನ ಪ್ರೋಮೋ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದ ಉಪ್ಪಿಗೆ ನೆಟ್ಟಿಗರಿಂದ ವ್ಯಾಪಕ ಪ್ರತಿಕ್ರಿಯೆಗಳು ಲಭಿಸಿತ್ತು. ಈ ಕುರಿತಂತೆ ಅಭಿಮಾನಿಗಳಲ್ಲಿಯೂ ಸಹ ಸಾಕಷ್ಟು ಗೊಂದಲ ಹುಟ್ಟಿಕೊಂಡಿತ್ತು. ಇದೇ ಬಗೆಹರಿದಿಲ್ಲ ಆಗಲೇ ಮತ್ತೊಂದು ಅನಿವಾರ್ಯ ಕಾರಣ ಹೊರಬಿದ್ದಿದೆ.
ಅಸಲಿಗೆ ಏನಿದು ಅನಿವಾರ್ಯ ಕಾರಣಗಳಿಂದ ಎಂಬುದು ಸದ್ಯ ಎಲ್ಲರ ಪ್ರಶ್ನೆಯಾಗಿದೆ. ಸದಾ ಡಿಫರೆಂಟ್ ಆಗಿ ತೋರಿಸುವುದು, ಚಿತ್ರರಸಿಕರ ತಲೆಗೆ ಹುಳಬಿಡುವುದು ಉಪೇಂದ್ರ ಅವರ ರಿಯಲ್ ಸ್ಟೈಲ್. ಇದೀಗ ಅದೇ ರೀತಿಯಲ್ಲಿ ವಿಭಿನ್ನವಾಗಿ ತಮ್ಮ ಸಿನಿಮಾದ 'ಚೀಪ್ ಚೀಪ್' ಲಿರಿಕಲ್ ವಿಡಿಯೋ ಶೀಘ್ರವೇ ನಿಮ್ಮ ಮುಂದೆ ಬರಲಿದೆ ಎಂದು ನಟ ಸ್ಪಷ್ಟಪಡಿಸಿದ್ದಾರೆ. ಅದರ ದಿನಾಂಕ ಮತ್ತು ವೇಳೆಯನ್ನು ಕೂಡ ಅಧಿಕೃತವಾಗಿ ಪೋಸ್ಟರ್ ಮುಖೇನ ತಿಳಿಸಿದ್ದಾರೆ.
“ಚೀಪ್ ಚೀಪ್" ಏನದು? ದೊಡ್ಡದು...ಚಿಕ್ಕದು...ಯಾರದ್ದು? ಇದು ಬಹಳ ಸೂಕ್ಷ್ಮವಾದ ವಿಷಯ. ಯಾರದ್ದು ಚಿಕ್ಕದು, ಯಾರದ್ದು ದೊಡ್ಡದು? ಎಂಬ ವಿಷಯ ಬಹಿರಂಗವಾದರೆ ಅದಾಗಿಹೋಗುತ್ತದೆ. ಅದಾಗಿಹೋಗುತ್ತದೆ ಎಂದರೆ ಏನು? “ಅದು” ಏನಾಗುತ್ತದೆ? ಎಂದು ಮಾರ್ಚ್ 4ನೇ ತಾರೀಕು ಇನ್ನೊಂದು ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾದಾಗ ನಿಮಗೆ ಗೊತ್ತಾಗುತ್ತದೆ ಎಂದು ಪೋಸ್ಟರ್ ಹಾಗೂ ಕಿರು ವಿಡಿಯೋ ಮೂಲಕ ನಟ ಅಪ್ಡೇಟ್ ಕೊಟ್ಟಿದ್ದಾರೆ.