ಕರೊನಾ ಲಸಿಕೆ ಹಾಕಿಸಿಕೊಳ್ಳಲು ಹೋದವರಿಗೆ ಹುಚ್ಚುನಾಯಿ ಕಡಿತದ ಲಸಿಕೆ ಹಾಕಿದ ಆಸ್ಪತ್ರೆ ಸಿಬ್ಬಂದಿ!

Vaccine
Published on

ಲಕ್ನೋ: ಆಸ್ಪತ್ರೆ ಸಿಬ್ಬಂದಿ ಎಡವಟ್ಟಿನಿಂದ ಕರೊನಾ ಲಸಿಕೆ ಪಡೆಯಬೇಕಾಗಿದ್ದ ಮೂವರು ಮಹಿಳೆಯರು ಹುಚ್ಚುನಾಯಿ ಕಡಿತಕ್ಕೆ ನೀಡುವ ರೇಬಿಸ್ ಚುಚ್ಚುಮದ್ದನ್ನು ಪಡೆದು ಫಜೀತಿ ಅನುಭವಿಸಿದ ಘಟನೆ ಉತ್ತರಪ್ರದೇಶದ ಶಾಮಿಲಿ ಜಿಲ್ಲೆಯಲ್ಲಿ ಗುರುವಾರ ನಡೆದಿದೆ.

ಸರೋಜಾ (70), ಅನಾರ್ಕಲಿ (72) ಮತ್ತು ಸತ್ಯವತಿ (60) ಎನ್ನುವ ಮಹಿಳೆಯರು ರೇಬಿಸ್ ಚುಚ್ಚುಮದ್ದನ್ನು ಪಡೆದವರಾಗಿದ್ದಾರೆ.

ಕರೊನಾ ಲಸಿಕೆ ಹಾಕಿಸಿಕೊಳ್ಳಲು ಆಸ್ಪತ್ರೆಗೆ ತೆರಳಿದ್ದ ಈ ಮೂವರು ಮಹಿಳೆಯರು ಎರಡನೇ ಮಹಡಿ ಬದಲು ಒಂದನೇ ಮಹಡಿಗೆ ತೆರಳಿದ್ದಾರೆ. ಅಲ್ಲಿದ್ದ ಸಿಬ್ಬಂದಿಯೊಬ್ಬ ಅಪಾರ್ಥ ಮಾಡಿಕೊಂಡು ಈ ಮಹಿಳೆಯರಿಗೆ ರೇಬಿಸ್ ಲಸಿಕೆ ನೀಡಿದ್ದಾನೆ. ಮನೆಗೆ ಹೋದ ನಂತರ ಮೂವರೂ ಮಹಿಳೆಯರ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದ್ದರಿಂದ ವಾಪಸ್ ಆಸ್ಪತ್ರೆಗೆ ಬಂದು ವಿಚಾರಿಸಿದಾಗ ತಾವು ರೇಬಿಸ್ ಲಸಿಕೆ ತೆಗೆದುಕೊಂಡಿರುವುದು ಆ ಮಹಿಳೆಯರಿಗೆ ಗೊತ್ತಾಗಿದೆ.

ಈ ಕುರಿತು ಶಾಮಿಲಿ ಜಿಲ್ಲಾ ವೈದ್ಯಾಧಿಕಾರಿ ತಪ್ಪು ಲಸಿಕೆ ನೀಡಿದ ಆಸ್ಪತ್ರೆಯ ಔಷಧಾಲಯ ಸಿಬ್ಬಂದಿಯನ್ನು ಕೆಲಸದಿಂದ ಅಮಾನತು ಮಾಡಿದ್ದಾರೆ. ಸದ್ಯ ರೇಬಿಸ್ ಲಸಿಕೆ ತೆಗೆದುಕೊಂಡ ಮಹಿಳೆಯರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net