ಪೊಲೀಸ್ ಉದ್ಯೋಗ ಆಕಾಂಕ್ಷಿ ಮಹಿಳೆ ಈಗ ಬಸ್ ಡ್ರೈವರ್; ಪತ್ನಿ ಬಸ್​​ ಚಾಲಕಿ, ಪತಿ ಕಂಡೆಕ್ಟರ್

UP Police
Published on

ಉತ್ತರಪ್ರದೇಶ: ಪೊಲೀಸ್ ಉದ್ಯೋಗದ ಆಕಾಂಕ್ಷಿಯಾಗಿದ್ದ ಬುಲಂದ್‌ಶಹರ್‌ನ ಮಹಿಳೆಯೊಬ್ಬರು ಸದ್ಯಕ್ಕೆ ರಾಜ್ಯ ರಸ್ತೆಮಾರ್ಗದಲ್ಲಿ ಬಸ್ ಚಾಲಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ಬೆನ್ನಿಗೆ ನಿಂತಿರುವ ಪತಿಯು ಕಂಡಕ್ಟರ್ ಆಗಿ ಸಹಾಯ ಮಾಡುತ್ತಿರುವುದು ವಿಶೇಷ.

ಸ್ನಾತಕೋತ್ತರ ಪದವಿ ಪಡೆದಿರುವ ಈ ಮಹಿಳೆ ದೆಹಲಿಯಲ್ಲಿ ಪೋಲೀಸ್‌ ಉದ್ಯೋಗಕ್ಕಾಗಿ ತಯಾರಿ ನಡೆಸುತ್ತಿದ್ದರು. ಈಗ ರಾಜ್ಯದ ರಸ್ತೆಮಾರ್ಗದಲ್ಲಿ ಬಸ್ ಡ್ರೈವರ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದ್ದಾರೆ. ಹೌದು,ವೇದ್ ಕುಮಾರಿ ಎಂಬ ಹೆಸರಿನ ಈಕೆ ತಮ್ಮ ಈ ದಿಟ್ಟ ನಡೆಯಿಂದ ಇತರ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ.

ಸಂಸ್ಕೃತದಲ್ಲಿ ಎಂಎ ಪಡೆದಿರುವ ವೇದ್ ಕುಮಾರಿ ಪೊಲೀಸ್ ಉದ್ಯೋಗದ ತಯಾರಿಯಲ್ಲಿದ್ದಾಗ ಚಾಲಕರ ಉದ್ಯೋಗದ ಜಾಹೀರಾತನ್ನು ನೋಡಿದ್ದಾರೆ. ಕೌಶಲ ಅಭಿವೃದ್ಧಿ ಮಿಷನ್ ಅಡಿಯಲ್ಲಿ ಉತ್ತರ ಪ್ರದೇಶದ ರಸ್ತೆ ಸಾರಿಗೆ ನಿಗಮದ ಬೆಂಬಲದೊಂದಿಗೆ 2021 ರಲ್ಲಿ ಕಾನ್ಪುರದ ಮಾದರಿ ಡ್ರೈವಿಂಗ್ ತರಬೇತಿ, ಸಂಶೋಧನಾ ಸಂಸ್ಥೆಯಿಂದ ವಾಹನ ಚಾಲನಾ ತರಬೇತಿ ಹಾಗೂ 2023ರಲ್ಲಿ 10 ತಿಂಗಳುಗಳ ಕಾಲ ಕೌಶಂಬಿ ಡಿಪೋನಲ್ಲಿ ತರಬೇತಿ ಪಡೆದಿದ್ದಾರೆ. ಕೌಶಂಬಿ-ಘಾಜಿಯಾಬಾದ್‌ನಿಂದ ಬುಡೌನ್ ಮಾರ್ಗದಲ್ಲಿ ಮೊದಲ ಮಹಿಳಾ ಬಸ್ ಚಾಲಕಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ವೇದ್ ಕುಮಾರಿ ಮತ್ತು ಮುಖೇಶ್ ಪ್ರಜಾಪತಿ ದಂಪತಿಗೆ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮಗ ಹಾಗೂ ಪುಟ್ಟ ಮಗಳು ಇದ್ದಾರೆ. ದಂಪತಿ ತಮ್ಮ ಕೆಲಸದಲ್ಲಿ ನಿರತರಾಗಿರುವುದರಿಂದ ಹಿರಿಯ ಮಗನೇ ತನ್ನ ತಂಗಿಯನ್ನು ನೋಡಿಕೊಳ್ಳುತ್ತಾನೆ.

ಸರ್ಕಾರಿ ಹುದ್ದೆಯ ನಿರೀಕ್ಷೆಯಲ್ಲಿ ಮಹಿಳೆ ಗುತ್ತಿಗೆ ಉದ್ಯೋಗಿಯಾಗಿದ್ದಾರೆ. ಆದರೂ ತಾನು ನಿರ್ವಹಿಸುತ್ತಿರುವ ಕೆಲಸದಲ್ಲಿ ಯಾವುದಕ್ಕೂ ಹೆದರುವಂತಹ ಯಾವುದೇ ಕಾರಣವಿಲ್ಲ ಎಂದು ಮುಂದುವರಿದಿದ್ದಾರೆ.

ಈ ಕುರಿತಾಗಿ ಮಾತನಾಡಿದ ವೇದ್​​ ಕುಮಾರಿ, ಪ್ರಸ್ತುತ ಕಾಲಘಟ್ಟದಲ್ಲಿ ಯಾವ ಕೆಲಸವೂ ಕಷ್ಟವಲ್ಲ, ಮಹಿಳೆಯರು ತಮಗೆ ಸರಿ ಎನಿಸಿದ ಕೆಲಸವನ್ನು ಮಾಡಬಹುದಾಗಿದೆ" ಎಂದು ಹೇಳುವ ಮೂಲಕ ಎಲ್ಲಾ ಮಹಿಳೆಯರಿಗೂ ಸ್ಫೂರ್ತಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net