ಅಯ್ಯೋ ದುರ್ವಿಧಿಯೇ! ಅಗ್ನಿ ದುರಂತದಿಂದ 7 ಶಿಶುಗಳನ್ನು ರಕ್ಷಿಸಿ, ತನ್ನ ಅವಳಿ ಮಕ್ಕಳನ್ನು ಕಳ್ಕೊಂಡ ತಂದೆ! UP hero

UP hero
Published on

UP hero : ಬೆಂಕಿಯ ಕೆನ್ನಾಲಿಗೆಯಿಂದ 7 ನವಜಾತ ಶಿಶುಗಳ ಜೀವ ಉಳಿಸಿದ ವ್ಯಕ್ತಿಯೊಬ್ಬ ಅದೇ ಅಗ್ನಿ ಅವಘಡದಲ್ಲಿ ತನ್ನ ಅವಳಿ ಹೆಣ್ಣು ಮಕ್ಕಳನ್ನು ಕಡೆದುಕೊಂಡ ಕರುಣಾಜನಕ ಘಟನೆ ಉತ್ತರ ಪ್ರದೇಶದ ಝಾನ್ಸಿ ಆಸ್ಪತ್ರೆಯಲ್ಲಿ ನಡೆದಿದೆ.

ಯಾಕೂಬ್​ ಮನ್ಸೂರಿ, ಮಕ್ಕಳ ಜೀವ ಉಳಿಸಿದ ಯುವ ತಂದೆ. ಝಾನ್ಸಿ ಆಸ್ಪತ್ರೆಯ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಈ ಘಟನೆ ನಡೆದಿದೆ. ಬೆಂಕಿ ಹೊತ್ತಿಕೊಂಡು ಇಡೀ ವಾರ್ಡ್​ ತುಂಬಾ ಜ್ವಾಲೆ ಹರಡಿದಾಗ, ತನ್ನ ಪ್ರಾಣವನ್ನು ಲೆಕ್ಕಿಸದೇ ಧೈರ್ಯದಿಂದ ವಾರ್ಡ್​ ಒಳಗೆ ನುಗ್ಗಿದ ಯಾಕೂಬ್​, 7 ಮಕ್ಕಳನ್ನು ರಕ್ಷಿಸಿದರು. ಸಾಕಷ್ಟು ಪ್ರಯತ್ನದ ನಡುವೆಯೂ ಯಾಕೂಬ್​ಗೆ ತನ್ನ ಅವಳಿ ಹೆಣ್ಣು ಮಕ್ಕಳ ಜೀವವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಬೆಂಕಿಯ ಜ್ವಾಲೆ ಭಯಾನಕವಾಗಿತ್ತು. ಆ ದಟ್ಟವಾದ ಹೊಗೆ ಮತ್ತು ಜ್ವಾಲೆಗಳು ರಕ್ಷಣಾ ಪ್ರಯತ್ನಕ್ಕೆ ಬಹಳ ಸವಾಲಿನದ್ದಾಗಿತ್ತು ಎಂದು ಯಾಕೂಬ್​ ಹೇಳಿದ್ದಾರೆ. ಕಿಟಕಿಯನ್ನು ಒಡೆದು ಒಳ ನುಗ್ಗಿದ ಯಾಕೂಬ್​, ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. ಆದರೆ, ತನ್ನಿಬ್ಬರು ಮಕ್ಕಳು ದಾಖಲಾಗಿದ್ದ ವಾರ್ಡ್​ನಲ್ಲಿ ಬೆಂಕಿಯ ಜ್ವಾಲೆ ತೀವ್ರ ಪ್ರಮಾಣದಲ್ಲಿ ಇದ್ದುದ್ದರಿಂದ ಅಲ್ಲಿಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಬೇರೆ ಪಾಲಕರು ಕೂಡ ಪ್ರಯತ್ನಿಸಿದರು ಆದರೆ, ಅವರು ವಿಫಲರಾದರು. ನಾವು ಇತರೆ ವಾರ್ಡ್​ನ ಮಕ್ಕಳ ಜೀವ ಉಳಿಸಲು ಪ್ರಯತ್ನಿಸಿದೆವು. ನಾನು 7 ಮಕ್ಕಳನ್ನು ಹೊರಗೆ ತಂದೆ ಎಂದು ಯಾಕೂಬ್​ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ನನ್ನ ಇಬ್ಬರು ಹೆಣ್ಣು ಮಕ್ಕಳು ಸಹ ಅಲ್ಲಿಯೇ ಇದ್ದರು. ಆದರೆ, ನಾನು ಅವರನ್ನು ಕಳೆದುಕೊಂಡೆ. ನನ್ನಿಂದ ಅವರನ್ನು ಕಾಪಾಡಲು ಸಾಧ್ಯವಾಗಲಿಲ್ಲ ಎನ್ನುತ್ತಾ ಯಾಕೂಬ್​ ಕಣ್ಣೀರಿಟ್ಟರು. ಮಕ್ಕಳ ಮೃತದೇಹದ ಗುರುತನ್ನು ತಡವಾಗಿ ಪತ್ತೆಹಚ್ಚಲಾಯಿತು ಎಂದರು. ಅಲ್ಲದೆ, ಝಾನ್ಸಿಯ ಮಹಾರಾಣಿ ಲಕ್ಷ್ಮೀ ಬಾಯಿ ಆಸ್ಪತ್ರೆಯಲ್ಲಿ ಶುಕ್ರವಾರ (ನ.15) ಸಂಭವಿಸಿದ ಭಾರಿ ಅಗ್ನಿ ದುರಂತದಲ್ಲಿ ತನ್ನಿಬ್ಬರು ಮಕ್ಕಳು ಸೇರಿದಂತೆ ಒಟ್ಟು 11 ಮಕ್ಕಳ ಸಾವಿಗೆ ನ್ಯಾಯ ಸಿಗಬೇಕೆಂದು ಆಗ್ರಹಿಸಿದ್ದಾರೆ.

ಶುಕ್ರವಾರ ರಾತ್ರಿ 10 ಶಿಶುಗಳು ಸಾವಿಗೀಡಾಗಿದ್ದು, ಇನ್ನೊಂದು ಶಿಶು ಭಾನುವಾರ ಮೃತಪಟ್ಟಿದೆ. ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಈ ಅವಘಡ ಸಂಭವಿಸಿದೆ ಎಂದು ಆರಂಭಿಕ ತನಿಖೆಯಲ್ಲಿ ತಿಳಿದುಬಂದಿದೆ. ಘಟನಾ ಸ್ಥಳದಲ್ಲಿ ಆಮ್ಲಜನಕ ಸಿಲಿಂಡರ್‌ಗಳು ಹೆಚ್ಚಾಗಿದ್ದ ಕಾರಣ ಬೆಂಕಿಯ ಜ್ವಾಲೆ ಇನ್ನಷ್ಟು ಉಲ್ಬಣಗೊಂಡಿದೆ. ಇನ್ನು ಐಸಿಯುನಲ್ಲಿದ್ದ ಅಗ್ನಿಶಾಮಕ ಸಾಧನಗಳ ಅವಧಿ ನಾಲ್ಕು ವರ್ಷಗಳ ಹಿಂದೆಯೇ ಮುಗಿದಿದ್ದು, ಅದನ್ನು ಬದಲಾಯಸಿಲ್ಲ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಈ ಬೆಂಕಿ ಅವಘಡಕ್ಕೆ ಕಾರಣವೇನು? ಮತ್ತು ಇದರ ಹಿಂದೆ ನಿರ್ಲಕ್ಷ್ಯವಿದೆಯೇ ಎಂಬುದನ್ನು ಪತ್ತೆಹಚ್ಚಲು ಉತ್ತರ ಪ್ರದೇಶದ ಸರ್ಕಾರ, ನಾಲ್ಕು ಸದಸ್ಯರ ಸಮಿತಿಯನ್ನು ರಚಿಸಿದೆ. ಏಳು ದಿನಗಳೊಳಗೆ ವರದಿ ನೀಡುವಂತೆ ತನಿಖಾ ತಂಡಕ್ಕೆ ಸರ್ಕಾರ ಸೂಚನೆ ನೀಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net