16ನೇ ತಾರೀಕಿನೊಳಗೆ ಲಸಿಕೆ ಹಾಕಿಸಿಕೊಳ್ಳದಿದ್ದರೆ ಕಚೇರಿಗೇ ಬರಬೇಡಿ; ನೌಕರರಿಗೆ ಸರ್ಕಾರದ ಕಟ್ಟುನಿಟ್ಟಿನ ಆದೇಶ

vaccine
Published on

ದೆಹಲಿ: ಕರೊನಾ ನಿಯಂತ್ರಣ ಹಾಗೂ ತಡೆ ನಿಟ್ಟಿನಲ್ಲಿ ಇದೀಗ ದೆಹಲಿ ಸರ್ಕಾರ ಕಟ್ಟುನಿಟ್ಟಿನ ಆದೇಶವೊಂದನ್ನು ಹೊರಡಿಸಿದ್ದು, ಕಡೇಪಕ್ಷ ಮೊದಲ ಡೋಸ್ ಲಸಿಕೆ ಹಾಕಿಸಿಕೊಳ್ಳದಿದ್ದರೆ ಕಚೇರಿಗೇ ಬರಬೇಡಿ ಎಂದು ತಾಕೀತು ಕೂಡ ಮಾಡಿದೆ.

ಸರ್ಕಾರದ ಎಲ್ಲ ಉದ್ಯೋಗಿಗಳು ಅ. 16ರ ಒಳಗೆ ಕಡೇಪಕ್ಷ ಮೊದಲ ಡೋಸ್ ಲಸಿಕೆ ಹಾಕಿಸಿಕೊಂಡಿರಬೇಕು ಎಂಬುದಾಗಿ ದೆಹಲಿ ಸರ್ಕಾರ ಆದೇಶ ಮಾಡಿದೆ. ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ಈ ಆದೇಶವನ್ನು ಹೊರಡಿಸಿದೆ.

ಒಂದೇ ಒಂದು ಡೋಸ್ ಲಸಿಕೆ ಹಾಕಿಸಿಕೊಂಡಿರದ ಸರ್ಕಾರದ ಎಲ್ಲ ನೌಕರರನ್ನು ರಜೆ ಎಂದೇ ಪರಿಗಣಿಸಲಾಗುವುದು. ಶಿಕ್ಷಕರು ಹಾಗೂ ಕರೊನಾ ಕಾರ್ಯನಿರ್ವಹಣೆಯಲ್ಲಿ ಇರುವ ಎಲ್ಲರಿಗೂ ಇದು ಅನ್ವಯಿಸಲಿದ್ದು, ಅವರು ಮೊದಲ ಡೋಸ್ ಲಸಿಕೆ ಪಡೆದುಕೊಳ್ಳುವವರೆಗೂ ರಜೆ ಎಂದೇ ಪರಿಗಣಿಸಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದೆ.

ಅ.15ರ ಬಳಿಕವೂ ಒಂದೇ ಒಂದು ಡೋಸ್ ಕೂಡ ಲಸಿಕೆ ಹಾಕಿಸಿಕೊಂಡಿರದಿದ್ದರೆ ಅಂಥವರನ್ನು ಅವರ ಕಚೇರಿಗೆ ಪ್ರವೇಶಿಸದಂತೆ ನಿರ್ಬಂಧಿಸಲಾಗುವುದು. ಸಂಬಂಧಪಟ್ಟ ಅಧಿಕಾರಿಗಳು ಆರೋಗ್ಯ ಸೇತು ಆ್ಯಪ್​ ಮೂಲಕ ಲಸಿಕೆ ಹಾಕಿಸಿಕೊಂಡಿರುವ ಕುರಿತು ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಬೇಕು ಎಂಬುದಾಗಿಯೂ ಆದೇಶದಲ್ಲಿ ತಿಳಿಸಲಾಗಿದೆ. ಈ ಆದೇಶಕ್ಕೆ ದೆಹಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸಹಿ ಮಾಡಿದ್ದು, ಕೇಂದ್ರ ಸರ್ಕಾರದ ನೌಕರರನ್ನು ಕೂಡ ನಿರ್ಬಂಧಿಸಬಹುದು ಎಂದು ಆದೇಶಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net