

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿನಿಲಯಗಳಲ್ಲಿ ಅನಧಿಕೃತವಾಗಿ ತಂಗಿರುವ ವಿದ್ಯಾರ್ಥಿಗಳು ಮತ್ತು ವ್ಯಕ್ತಿಗಳನ್ನು ಕೂಡಲೇ ತೆರವುಗೊಳಿಸಬೇಕು ಹಾಗೂ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ವಿದ್ಯಾರ್ಥಿನಿಲಯದ ಕ್ಷೇಮಪಾಲಕರಿಗೆ ವಿವಿ ಕುಲಸಚಿವರು ಸುತ್ತೋಲೆ ಹೊರಡಿಸಿದ್ದಾರೆ.
ಬೆಂಗಳೂರು ವಿವಿಯ ಎಲ್ಲ ಹಾಸ್ಟೆಲ್ಗಳಲ್ಲಿ ಕೆಲವರು ಅನಧಿಕೃತವಾಗಿ ಉಳಿದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಪರಿಣಾಮ ವಿದ್ಯಾರ್ಥಿನಿಲಯಗಳಲ್ಲಿ ವಿದ್ಯಾರ್ಥಿಗಳ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತಿರುವ ಬಗ್ಗೆ ದೂರುಗಳು ಬಂದಿವೆ. ಕೆಲವು ವಿದ್ಯಾರ್ಥಿಗಳು ತಮಗೆ ಸೂಕ್ತ ರಕ್ಷಣೆ ಕೊಡಬೇಕೆಂದು ವಿಶ್ವವಿದ್ಯಾಲಯಕ್ಕೆ ಹಾಗೂ ಜ್ಞಾನಭಾರತಿ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದ್ದಾರೆ.
ಇಂತಹ ಘಟನೆಗಳಿಂದ ವಿಶ್ವವಿದ್ಯಾಲಯದ ಶೋಭೆಗೆ ಧಕ್ಕೆ ತರವ ಜತೆಗೆ ಶೈಕ್ಷಣಿಕ ಚಟುವಟಿಕೆಗೂ ಅಡ್ಡಿಯುಂಟಾಗುತ್ತಿದೆ. ಅಧಿಕೃತ ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯದ ಕೊರತೆ ಹಾಗೂ ಭದ್ರತೆಗೆ ತೊಡಕು ಉಂಟಾಗಿದೆ. ಹಾಗಾಗಿ ಅನಧಿಕೃತ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವ ಮೂಲಕ ವಿದ್ಯಾರ್ಥಿನಿಲಯಗಳಲ್ಲಿ ಸೌಹಾರ್ದತೆ, ಶಿಸ್ತು ಹಾಗೂ ಶೈಕ್ಷಣಿಕ ವಾತಾವರಣ ಕಾಪಾಡುವ ಕೆಲಸವಾಗಬೇಕು ಎಂದು ವಿವಿ ಕುಲಸಚಿವರು ಸೂಚಿಸಿದ್ದಾರೆ.