ಸತ್ಯಜಿತ್​ರೇ 'ಪಥೇರ್​​ ಪಾಂಚಾಲಿ'; ಭಾರತದ ಅತ್ಯುತ್ತಮ ಸಾರ್ವಕಾಲಿಕ ಚಲನಚಿತ್ರ ಪ್ರಶಸ್ತಿ..!

fipppp
Published on

ಮುಂಬೈ: ಭಾರತೀಯ ಚಲನಚಿತ್ರದ ಅತ್ಯಂತ ಖ್ಯಾತ ನಿರ್ದೇಶಕ ಸತ್ಯಜಿತ್​​ ರೇ ಅವರ ಪ್ರಸಿದ್ಧ 'ಪಥೇರ್​​ ಪಾಂಚಾಲಿ' ಸಿನಿಮಾವನ್ನು ಇಂಟರ್​ನ್ಯಾಷನಲ್ ಫೆಡರೇಷನ್ ಆಫ್​​​ ಫಿಲ್ಮ್​​ ಕ್ರಿಟಿಕ್ಸ್​​​​​ (FIPRESCI) ಅತ್ಯುತ್ತಮ ಭಾರತೀಯ ಸಾರ್ವಕಾಲಿಕ ಚಲನಚಿತ್ರ ಎಂದು ಘೋಷಿಸಿದೆ. ಇದು 1955ರಲ್ಲಿ ತೆರೆಕಂಡಿದ್ದು, ಭಾರತೀಯ ಚಲನಚಿತ್ರದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂಟರ್​ನ್ಯಾಷನಲ್ ಫೆಡರೇಷನ್​​ ಆಫ್​​​ ಫಿಲ್ಮ್​​ ಕ್ರಿಟಿಕ್ಸ್​​​ ನ ಟಾಪ್​​ 10 ಸಿನಿಮಾಗಳ ಸರದಿಯಲ್ಲಿ ಮೊದಲ ಸ್ಥಾನವನ್ನು ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇಂಟರ್​ನ್ಯಾಷನಲ್ ಫೆಡರೇಷನ್​​ ಆಫ್​​​ ಫಿಲ್ಮ್​​ ಕ್ರಿಟಿಕ್ಸ್​​​ (FIPRESCI)- ಇಂಡಿಯಾ ಹೊರಡಿಸಿದ ಪತ್ರಿಕಾ ಪ್ರಕಟಣೆಯ ಪ್ರಕಾರ, 30 ಸದಸ್ಯರನ್ನು ಒಳಗೊಂಡ ಈ ಸಮೀಕ್ಷೆಯನ್ನು ಬಹಳ ಗುಪ್ತವಾಗಿ ನಡೆಸಲಾಗಿತ್ತು ಎನ್ನಲಾಗಿದೆ. ಇದು ಬಿಭೂತಿ ಭೂಷಣ್​ರ 1929ರಲ್ಲಿ ಬಂಗಾಳಿ ಭಾಷೆಯಲ್ಲಿ ಬರೆದ ಪಥೇರ್​​ ಪಾಂಚಾಲಿ ಎಂಬ ಕಾದಂಬರಿ ಆಧರಿತ ಚಿತ್ರವಾಗಿದೆ. ಇದನ್ನು ನಂತರ ಸತ್ಯಜಿತ್​​ ರೇ ತಮ್ಮ ನಿರ್ದೇಶನದ ಮೂಲಕ ತೆರೆಗೆ ತಂದರು. ಈ ಸಿನಿಮಾದಲ್ಲಿ ಸುಬೀರ್​​​ ಬ್ಯಾನರ್ಜಿ, ಕನು ಬ್ಯಾನರ್ಜಿ, ಕರುಣಾ ಬ್ಯಾನರ್ಜಿ, ಉಮಾದಾಸ್​​ ಗುಪ್ತ, ಪಿನಾಕಿ ಸೆಂಗುಪ್ತ ಮತ್ತು ಚುನಿಬಾಲಾ ದೇವಿ ನಟಿಸಿದ್ದಾರೆ.

ಇಂಟರ್​ನ್ಯಾಷನಲ್ ​​ ಫೆಡರೇಷನ್ ಆಫ್​​​ ಫಿಲ್ಮ್​​ ಕ್ರಿಟಿಕ್ಸ್​​ನ ಪಟ್ಟಿಯಲ್ಲಿ ರಿತ್ವಿಕ್​​ ಘಟಕ್​​ರವರ 1960ರ ಬಂಗಾಳಿ ಚಲನಚಿತ್ರ 'ಮೇಘೆ ಧಾಕಾ ತಾರಾ', ಮೃಣಾಲ್​​ ಸೇನ್​ರ 1969ರ 'ಭುವನ್​​ ಶೋಮ್​ ' ಹಿಂದಿ ನಾಟಕ, ಅಡೂರ್​​ ಗೋಪಾಲಕೃಷ್ಣರ 1981ರ ಮಲಯಾಳಂ 'ಎಲಿಪ್ಪತಯಂ' ನಾಟಕ , ಗಿರೀಶ್​​ ಕಾಸರವಳ್ಳಿಯವರ 1977ರ ಕನ್ನಡದ 'ಘಟಶ್ರಾದ್ಧ', ಎಂ.ಎಸ್​​.ಸತ್ಯುರವರ 1973ರ ಹಿಂದಿ 'ಗರ್ಮ್ ಹವಾ', ಶ್ಯಾಮ್​ ಬೆನಗಲ್​​​ರ 1974ರ ಹಿಂದಿ ಚಿತ್ರ 'ಅಂಕುರ್​​', ಗುರುದತ್​ರ 1954ರ ಹಿಂದಿಯ 'ಪ್ಯಾಸಾ' ಮತ್ತು 1975ರಲ್ಲಿ ರಮೇಶ್​​ ಸಿಪ್ಪಿ ನಿರ್ದೇಶನದ ಸೂಪರ್​​ ಹಿಟ್​​ ಸಿನಿಮಾ 'ಶೋಲೆ' ಮುಂತಾದ ಸಿನಿಮಾಗಳು ಸೇರಿದಂತೆ ಸತ್ಯಜಿತ್​​ ರೇ ಅವರ ಬಂಗಾಳಿ ಸಿನಿಮಾ 'ಚಾರುಲತಾ', ಕೂಡ ಸಾಲಿನಲ್ಲಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net