

ಹುಬ್ಬಳ್ಳಿ: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಪಿಎಸ್ಐ ಹುದ್ದೆ ನೇಮಕಾತಿ ಹಗರಣ ಬಗೆದಷ್ಟು ಆಳ ಎಂಬಂತಾಗಿದೆ. ಇದೀಗ ಪಿಎಸ್ಐ ನೌಕರಿಗೆ ಆಸೆ ಪಟ್ಟು ಯುವಕನೊಬ್ಬ ಬರೋಬ್ಬರಿ 11.90 ಲಕ್ಷ ರೂ. ಕೊಟ್ಟು ಕೈ ಸುಟ್ಟುಕೊಂಡ ಪ್ರಕರಣ ಬೆಳಕಿಗೆ ಬಂದಿದೆ.
ಹುಬ್ಬಳ್ಳಿ ತಾಲೂಕಿನ ಇಂಗಳಹಳ್ಳಿಯ ವಿರೂಪಾಕ್ಷಪ್ಪ ಮಜ್ಜಿಗೌಡರ ಹಣ ಕಳೆದುಕೊಂಡವರು. ವಿರೂಪಾಕ್ಷಪ್ಪ ಅವರು ಸೈನ್ಯದಲ್ಲಿ ಕೆಲಸ ಮಾಡುತ್ತಿದ್ದರು. ಆ ವೇಳೆ ಹೊನ್ನಪ್ಪ ಮೇಟಿ ಮತ್ತು ಈರಪ್ಪ ಬೂದಿಹಾಳ ಎಂಬುವರ ಪರಿಚಯವಾಗಿತ್ತು. ನಂತರ ಅವರಿಬ್ಬರೂ 15 ಲಕ್ಷ ರೂ. ನೀಡಿದರೆ ಪಿಎಸ್ಐ ನೌಕರಿ ಕೊಡಿಸುವುದಾಗಿ ನಂಬಿಸಿ ವಿರೂಪಾಕ್ಷಪ್ಪ ಮಜ್ಜಿಗೌಡರ ಬಳಿಯಿಂದ 11.90 ಲಕ್ಷ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದರು.
ಹಣವನ್ನು ಪಡೆದುಕೊಂಡ ನಂತರ ಆರೋಪಿಗಳಿಬ್ಬರೂ ಉದ್ಯೋಗ ಕೊಡಿಸದೆ ವಂಚಿಸಿದ್ದಾರೆ. ವಾಪಸ್ ಹಣ ಕೊಡುವಂತೆ ಕೇಳಿದಾಗ ಕೇವಲ 85 ಸಾವಿರ ರೂಪಾಯಿ ಅನ್ನು ವಿರೂಪಾಕ್ಷಪ್ಪ ಮಜ್ಜಿಗೌಡರರಿಗೆ ಮರಳಿಸಿದ್ದಾರೆ. ಉಳಿದ ಹಣ ಕೊಡದೇ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತು ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ರಾಯಚೂರು ಜಿಲ್ಲೆ ಲಿಂಗಸೂರು ತಾಲೂಕಿನ ನಾಗರಾಳ ಗ್ರಾಮದ ಹೊನ್ನಪ್ಪ ಮೇಟಿ ಮತ್ತು ವಿಜಯಪುರ ಜಿಲ್ಲೆ ವಿವೇಕಾನಂದ ನಗರದ ಈರಪ್ಪ ಬೂದಿಹಾಳ ಎಂಬ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.