

ನವದೆಹಲಿ: ಗೃಹ ಸಚಿವಾಲಯ ಅನ್ಲಾಕ್ 4.0 ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ಶಾಲೆ ಮತ್ತು ಕಾಲೇಜುಗಳ ಪುನಾರಂಭದ ಬಗ್ಗೆ ಕೆಲವು ಸುದ್ದಿಗಳಿವೆ.
ಬಿಡುಗಡೆಯಾದ ಅಧಿಕೃತ ಪ್ರಕಟಣೆಯ ಪ್ರಕಾರ, ಸೆಪ್ಟೆಂಬರ್ 21 ರ ನಂತರ ವಿಶೇಷ ಸಂದರ್ಭಗಳಿಗಾಗಿ ಮಾತ್ರ, ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ ಶಾಲೆಗಳನ್ನು ತೆರೆಯಬಹುದು. ಆದರೆ ಅನ್ಲಾಕ್ 4.0 ಮಾರ್ಗಸೂಚಿಗಳ ಪ್ರಕಾರ, ಸೆಪ್ಟೆಂಬರ್ 30 ರವರೆಗೆ ಶಾಲೆಗಳು ಮತ್ತು ಕಾಲೇಜುಗಳಿಗೆ ನಿಯಮಿತ ತರಗತಿಗಳನ್ನು ನಡೆಸುವಂತಿಲ್ಲ.
ಸೆಪ್ಟೆಂಬರ್ 21 ರ ನಂತರ ಶಾಲೆಗಳು ಮತ್ತು ಇತರ ಶೈಕ್ಷಣಿಕ ಸಂಸ್ಥೆಗಳನ್ನು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ತೆರೆಯಬಹುದು. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಶೇ 50 ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ಆನ್‌ಲೈನ್ ಬೋಧನೆ / ಟೆಲಿ-ಕೌನ್ಸೆಲಿಂಗ್ ಕೆಲಸಕ್ಕಾಗಿ ಶಾಲೆಗೆ ಕರೆಯಬಹುದು. ಅಲ್ಲದೆ, 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳು, ತಮ್ಮ ಶಿಕ್ಷಕರಿಂದ ಮಾರ್ಗದರ್ಶನ ಪಡೆಯಲು ಸ್ವಯಂಪ್ರೇರಿತವಾಗಿ ಶಾಲೆಗಳಿಗೆ ಹಾಜರಾಗಬಹುದು.
ಕಾಲೇಜುಗಳಿಗೆ ಸಂಬಂಧಿಸಿದಂತೆ, ಪ್ರಯೋಗಾಲಯ ಮತ್ತು ಪ್ರಾಯೋಗಿಕ ಕೆಲಸದ ಅಗತ್ಯವಿರುವ ತಾಂತ್ರಿಕ ಮತ್ತು ವೃತ್ತಿಪರ ಕಾರ್ಯಕ್ರಮಗಳ ಸಂಶೋಧನಾ ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮಾತ್ರ ಉನ್ನತ ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ಅನುಮತಿ ನೀಡಲಾಗುತ್ತದೆ. ಆದಾಗ್ಯೂ, ಕಂಟೇನ್ಮೆಂಟ್ ವಲಯಗಳಲ್ಲಿ ಸೆಪ್ಟೆಂಬರ್ 30 ರವರೆಗೆ ಕಟ್ಟುನಿಟ್ಟಾದ ಲಾಕ್‌ಡೌನ್ ಮುಂದುವರಿಯುತ್ತದೆ.