

ನವದೆಹಲಿ: ಶಾಲೆ- ಕಾಲೇಜುಗಳು ಸೇರಿ ಎಲ್ಲ ಶಿಕ್ಷಣ ಸಂಸ್ಥೆಗಳು ಹಾಗೂ ಕೋಚಿಂಗ್ ಸೆಂಟರ್ಗಳು ಜು.31ರವರೆಗೆ ಮುಚ್ಚಿರಲಿವೆ. ಆದರೆ, ಆನ್ಲೈನ್ ಶಿಕ್ಷಣ ಹಾಗೂ ತರಗತಿಗೆ ಅನುಮತಿ ನೀಡಲಾಗಿದೆ.
ಕೇಂದ್ರ ಗೃಹ ಇಲಾಖೆ ಅನ್ಲಾಕ್ 2.0 ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಶಿಕ್ಷಣ ಸಂಸ್ಥೆಗಳ ಆರಂಭಕ್ಕೆ ಅನುಮತಿ ನೀಡಿಲ್ಲ. ಆದರೆ, ಆನ್ಲೈನ್ ತರಗತಿ ನಡೆಸುವುದನ್ನು ಉತ್ತೇಜಿಸಿದೆ.
ಕೇಂದ್ರ ಹಾಗೂ ರಾಜ್ಯಗಳ ಸರ್ಕಾರಗಳ ತರಬೇತಿ ಕೇಮದ್ರಗಳನ್ನು ಜುಲೈ 15ಕ್ಕೆ ಆರಂಭಿಸಬಹುದು ಎಂದು ಹೇಳಿದ್ದರೂ ಅದಕ್ಕೂ ಪ್ರತ್ಯೇಕವಾಗಿ ಪ್ರಾಮಾಣಿತ ಕಾರ್ಯಾಚರಣೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದೆ.
ಇದಲ್ಲದೆ ಮೆಟ್ರೋ, ಅಂತಾರಾಷ್ಟ್ರೀಯ ವಿಮಾನ ಸಂಚಾರಕ್ಕೂ ಅನುಮತಿ ನೀಡಿಲ್ಲ. ಚಿತ್ರಮಂದಿರಗಳು, ಜಿಮ್ಗಳು, ಸ್ವಿಮ್ಮಿಂಗ್ ಪೂಲ್, ಎಂಟರಟೇನ್ಮೆಂಟ್ ಪಾರ್ಕ್ಸ್, ರಂಗ ಮಂದಿರಗಳು, ಬಾರ್ ಮೊದಲಾದವುಗಳ ಮೇಲಿದ್ದ ನಿರ್ಬಂಧ ಮುಂದುವರಿಸಿದೆ.
ಸಾರ್ವಜನಿಕ ಸಭೆ, ಸಮಾರಂಭ, ರಾಜಕೀಯ, ಧಾರ್ಮಿಕ ಕಾರ್ಯಕ್ರಮಗಳಿಗೂ ಅವಕಾಶವಿಲ್ಲ. ಈ ಎಲ್ಲ ಚಟುವಟಿಕೆಗಳ ಆರಂಭಕ್ಕೆ ದಿನಾಂಕವನ್ನು ಪ್ರತ್ಯೇಕವಾಗಿ ತಿಳಿಸಲಾಗುವುದು ಹಾಗೂ ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗುತ್ತದೆ ಎಂದು ಕೇಂದ್ರ ಗೃಹ ಇಲಾಖೆ ಹೊರಡಿಸಿದ ಆದೇಶದಲ್ಲಿ ಮಾಹಿತಿ ನೀಡಿದೆ.
ಕಂಟೇನ್ಮೆಂಟ್ ಪ್ರದೇಶದಲ್ಲಿ ಲಾಕ್ಡೌನ್ ಮುಂದುವರಿಯಲಿದೆ. ಆದರೆ, ರಾಜ್ಯ ಸರ್ಕಾರಗಳು ಪರಿಸ್ಥಿತಿಗೆ ಅನುಗುಣವಾಗಿ ಹೆಚ್ಚುವರಿ ನಿರ್ಬಂಧಗಳನ್ನು ವಿಧಿಸಬಹುದು. ರಾತ್ರಿ 10ರಿಂದ ಬೆಳಗ್ಗಿನ ಐದು ಗಂಟೆವರೆಗೆ ದೇಶಾದ್ಯಂತ ಕರ್ಫ್ಯೂ ಜಾರಿಯಲ್ಲಿರುತ್ತದೆ.