

ನವದೆಹಲಿ: ಅತ್ತ ಕೇಂದ್ರ ಸರ್ಕಾರ ಆನ್ಲಾಕ್ 2.0 ಬಗ್ಗೆ ಮಾರ್ಗಸೂಚಿಗಳನ್ನು ಸಿದ್ಧಪಡಿಸುವಲ್ಲಿ ಬ್ಯುಸಿಯಾಗಿದ್ದರೆ, ರಾಜ್ಯಗಳ ಕಥೆಯೇ ಬೇರೆಯಾಗಿದೆ. ಒಂದಾದ ಮೇಲೊಂದರಂತೆ ರಾಜ್ಯಗಳು ಲಾಕ್ಡೌನ್ ವಿಸ್ತರಣೆ ಮಾಡುತ್ತಿವೆ.
ಮಹಾರಾಷ್ಟ್ರದಲ್ಲಿ ರಾಜ್ಯಾದ್ಯಂತ ಜುಲೈ 31ರವರೆಗೆ ಲಾಕ್ಡೌನ್ ವಿಸ್ತರಿಸಿದ ಬೆನ್ನಲ್ಲೇ ತಮಿಳುನಾಡು ಕೂಡ ಇಷ್ಟೇ ಅವಧಿಗೆ ಕಟ್ಟುನಿಟ್ಟಿನ ಲಾಕ್ಡೌನ್ ಮುಂದುವರಿಸುವುದಾಗಿ ಘೋಷಿಸಿದೆ.
ಮಹಾರಾಷ್ಟ್ರದಲ್ಲಿ ಕರೊನಾ ಪ್ರಕರಣಗಳ ಸಂಖ್ಯೆ 1,64,626ಕ್ಕೆ ತಲುಪಿದ್ದರೆ, ತಮಿಳುನಾಡಿನಲ್ಲಿ ಒಟ್ಟು ಕೇಸ್ಗಳು 82,275 ದಾಟಿದೆ. ಹೊಸ ಪ್ರಕರಣಗಳ ಹೆಚ್ಚಳ ನಿಯಂತ್ರಣಕ್ಕೆ ಸಿಗದೇ ಇರುವ ಕಾರಣ ಕಟ್ಟುನಿಟ್ಟಿನ ಕ್ರಮಕ್ಕೆ ಈ ರಾಜ್ಯಗಳು ಮುಂದಾಗಿವೆ.
ಇವೆರಡು ರಾಜ್ಯಗಳಲ್ಲದೇ, ಪಶ್ಚಿಮ ಬಂಗಾಳ, ಜಾರ್ಖಂಡ್, ಮಣಿಪುರ, ಹರಿಯಾಣ ಹಾಗೂ ಅಸ್ಸಾಮ್ನಲ್ಲೂ ಲಾಕ್ಡೌನ್ ವಿಸ್ತರಿಸಿ ಅಲ್ಲಿನ ರಾಜ್ಯ ಸರ್ಕಾರಗಳು ಆದೇಶ ಹೊರಡಿಸಿವೆ.
ಅಸ್ಸಾಮ್ನ ಗುವಾಹಟಿಯಲ್ಲೂ ಜುಲೈ 15ರವರೆಗೆ ಎರಡು ವಾರಗಳ ಕರ್ಫ್ಯೂ ವಿಧಿಸಲಾಗಿದೆ. ಹರಿಯಾಣ, ಮಣಿಪುರದಲ್ಲೂ ಜುಲೈ 15ರವರೆಗೆ ಲಾಕ್ಡೌನ್ ಇರಲಿದೆ. ಪಶ್ಚಿಮ ಬಂಗಾಳ, ಜಾರ್ಖಂಡ್ನಲ್ಲಿ ಜುಲೈ 31ರವರೆಗೆ ನಿರ್ಬಂಧ ವಿಧಿಸಲಾಗಿದೆ.