

| ರವಿ ಗೋಸಾವಿ ಬೆಳಗಾವಿ
‘ದುಪ್ಪಟ್ಟು ಬಡ್ಡಿ, ಹೂಡಿದ ಹಣ ತಿಂಗಳಲ್ಲೇ ದ್ವಿಗುಣ’ ಎಂಬ ಆಮಿಷವೊಡ್ಡಿ ನಡೆಯುತ್ತಿರುವ ವಂಚನೆಗೆ ಕಡಿವಾಣ ಹಾಕಬಲ್ಲ ಪ್ರಬಲ ಅಸ್ತ್ರ ‘ಬಡ್ಸ್ ಕಾಯ್ದೆ’ ಪ್ರಯೋಗವಾಗದೆ ಬತ್ತಳಿಕೆಯಲ್ಲೇ ಉಳಿದಂತಾಗಿದೆ. ಸರ್ಕಾರಿ ಸ್ವಾಮ್ಯ ಹಾಗೂ ಸಹಕಾರಿ ಕ್ಷೇತ್ರಕ್ಕೂ ಒಳಪಡದೆ ಹೂಡಿಕೆ ರೂಪದಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ, ವಂಚಿಸುತ್ತಿರುವ ಕಂಪನಿಗಳ ಮಾಲೀಕರ ವಿರುದ್ಧ ಕೇವಲ ಐಪಿಸಿ ಸೆಕ್ಷನ್ 420 ಅಡಿ ಕೇಸ್ ದಾಖಲಾದರೆ, ಸುಲಭವಾಗಿ ಬೇಲ್ ಪಡೆದು, ಮತ್ತದೆ ದಂಧೆ ನಡೆಸುತ್ತಾರೆ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ 2019ರಲ್ಲೇ ಅನಿಯಂತ್ರಿಕ ಠೇವಣಿ ಯೋಜನೆಗಳ ನಿಷೇಧ (ಬ್ಯಾನಿಂಗ್ ಆಫ್ ಅನ್ರೆಗ್ಯುಲೇಟೆಡ್ ಡೆಪಾಸಿಟ್ ಸ್ಕೀಮ್್ಸ) ಕಾಯಿದೆ ಜಾರಿಗೊಳಿಸಿದೆ. ಆದರೆ, ಈ ಬಗ್ಗೆ ಪೊಲೀಸ್ ಇಲಾಖೆಯಲ್ಲಿನ ಠಾಣಾ ಮಟ್ಟದ ಸಿಬ್ಬಂದಿಗೆ ಸಮರ್ಪಕ ಮಾಹಿತಿ ಇಲ್ಲದ್ದರಿಂದ ವಂಚಕರ ವಿರುದ್ಧ ಕೇವಲ ಸೆಕ್ಷನ್ 420 ಅಡಿ ಕೇಸ್ ದಾಖಲಾಗುತ್ತಿವೆ ಎನ್ನುತ್ತಾರೆ ಉನ್ನತ ಪೊಲೀಸ್ ಅಧಿಕಾರಿಗಳು.
ಕಾಯ್ದೆ ಜಾರಿಯಾದ ಬಳಿಕ ರಾಜ್ಯಾದ್ಯಂತ 4 ಸಾವಿರಕ್ಕೂ ಅಧಿಕ ವಂಚನೆ ಪ್ರಕರಣಗಳು ಬೆಳಕಿಗೆ ಬಂದರೂ, ಕೊಡಗು ಮತ್ತು ಬೆಳಗಾವಿ ಜಿಲ್ಲಾ ಪೊಲೀಸರು ಮಾತ್ರ ‘ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯ್ದೆ’ಯಡಿ ಎಫ್ಐಆರ್ ದಾಖಲಿಸಿದ್ದಾರೆ. ಸಾವಿರಾರು ವಂಚನೆ ಪ್ರಕರಣಗಳ ಪೈಕಿ ಬೆರಳೆಣಿಕೆಯಷ್ಟು ಮಾತ್ರ ನೂತನ ಕಾಯ್ದೆಯಡಿ ದಾಖಲಾಗಿವೆ. ಹೆಚ್ಚಿನ ಪ್ರಕರಣಗಳು ಐಟಿ ಆಕ್ಟ್ ಹಾಗೂ ಸೆಕ್ಷನ್ 420 ಅಡಿ ದಾಖಲಾಗಿರುವುದು ಬುಡ್ಸ್-2019 ಕಾಯ್ದೆ ಕುರಿತು ಖಾಕಿ ಪಡೆಗೆ ಜಾಗೃತಿ ಕೊರತೆ ಇರುವುದನ್ನು ಸ್ಪಷ್ಟಪಡಿಸುತ್ತದೆ.
ರಾಜ್ಯದಲ್ಲೂ 2020ರಲ್ಲಿ ಜಾರಿ: ಸಾರ್ವಜನಿಕರಿಂದ ಹೂಡಿಕೆ ಸಂಗ್ರಹಿಸುವ ಬೋಗಸ್ ಕಂಪನಿಗಳನ್ನು ಮಟ್ಟಹಾಕಲೆಂದು ಕೇಂದ್ರ ಸರ್ಕಾರ ಬಡ್ಸ್ ಜಾರಿಗೊಳಿಸಿದೆ. ಕಾಯ್ದೆಯಡಿ ದಾಖಲಾದ ಪ್ರಕರಣಗಳ ತನಿಖೆ ವಿಚಾರಣೆ ಅಧಿಕಾರವನ್ನು ವಿಶೇಷ ಪ್ರಾಧಿಕಾರಕ್ಕೆ ನೀಡಲಾಗಿದೆ. ಹೆಚ್ಚುತ್ತಿರುವ ವಂಚನೆ ತಡೆಯುವ ಉದ್ದೇಶದಿಂದ ಕರ್ನಾಟಕ ಸರ್ಕಾರ 2020 ನ.5ರಂದು ರಾಜ್ಯದಲ್ಲಿ ಅಧಿಕೃತವಾಗಿ ಈ ಕಾಯ್ದೆ ಜಾರಿಗೊಳಿಸಿ, ಆದೇಶಿಸಿತ್ತು. ಕಾಯ್ದೆಯಡಿ, ವಂಚನೆ ಮಾಡಿರುವ ಆರೋಪಿಗೆ ಸಂಬಂಧಿಸಿದ ಎಲ್ಲ ಆಸ್ತಿ ಮುಟ್ಟುಗೋಲು, ಖಾತೆ ಸ್ಥಗಿತ (ಫ್ರೀಜ್), ಡಿಜಿಟಲ್ ಲೆಕ್ಕ ಪರಿಶೋಧನೆ, ಮೌಲ್ಯ ನಿರ್ಧರಣೆ ಹಾಗೂ ಜಪ್ತಿ ಸ್ವತ್ತು ಬಿಡುಗಡೆಗೊಳಿಸುವುದಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳಿಗೆ ವಿಶೇಷ ಅಧಿಕಾರ ನೀಡಲಾಗಿದೆ.
ರಾಜ್ಯದಲ್ಲಿನ ಬಡ್ಸ್ ಪ್ರಕರಣಗಳು: ಗೋಕಾಕ ‘ಸ್ಟಾರ್ಟ್ವುನಿ ಇನ್’ ಚಿಕ್ಕೋಡಿಯ ಪಿನೊಮಿಕ್ ವೆಂಚರ್ಸ್ ಎಲ್ಎಲ್ಪಿ, ಟಿಳಕವಾಡಿಯ ‘ವೈಕಾ ರಿಟೇಲ್ ಆಂಡ್ ಟೆಕ್ನಾಲಾಜಿಸ್ ಪ್ರೖೆ.ಲಿ.’, ‘ಐಎಫ್ಟಿ ಕನ್ಸ್ಲ್ಟಂಟ್ ಎಲ್ಎಲ್ಪಿ’ ಕಂಪನಿಗಳ ವಿರುದ್ಧ ಬಡ್ಸ್ -2019ರ ಕಾಯ್ದೆಯಡಿ ಒಟ್ಟು 4 ಪ್ರಕರಣಗಳು ಬೆಳಗಾವಿ ಜಿಲ್ಲಾ ಪೊಲೀಸ್ ವ್ಯಾಪ್ತಿಯ ವಿವಿಧ ಠಾಣೆಗಳಲ್ಲಿ ದಾಖಲಾಗಿವೆ. ಈ ಕಂಪನಿಗಳು ಆನ್ಲೈನ್ ಮೂಲ ಹೊರಜಿಲ್ಲೆಯ ಜನರಿಂದ ಕೋಟ್ಯಂತರ ರೂ. ಸಂಗ್ರಹಿಸಿ, ವಂಚಿಸಿವೆ ಎಂಬ ಮಾಹಿತಿ ಇದೆ.
ಬಡ್ಸ್-19 ಕಾಯ್ದೆ ಕುರಿತು ಇಲಾಖೆ ಸಿಬ್ಬಂದಿಗೆ ಜಾಗೃತಿ ಮೂಡಿಸಲು ಕಾರ್ಯಾಗಾರ, ಕಾರ್ಯಕ್ರಮ ನಡೆಸಲಾಗಿದೆ. ಇನ್ನುಮುಂದೆ ರಾಜ್ಯಾದ್ಯಂತ ಕಾಯ್ದೆ ಕುರಿತು ನಮ್ಮ ಸಿಬ್ಬಂದಿಗೆ ಅರಿವು ಮೂಡಿಸಲು ವ್ಯವಸ್ಥೆ ಮಾಡಲಾಗುವುದು.
| ಆರಗ ಜ್ಞಾನೇಂದ್ರ ಗೃಹ ಸಚಿವ
ಇಂತಹ ಸ್ಕೀಮ್ಗಳ ಬಗ್ಗೆ ಜನ ಎಚ್ಚರಿಕೆ ವಹಿಸಬೇಕು. ಇವುಗಳು ಯಾವುದೇ ಸರ್ಕಾರದ ನಿಯಂತ್ರಣದಲ್ಲಿರುವುದಿಲ್ಲ. ಹೀಗಾಗಿ ಮೋಸ ಹೋಗುವ ಸಾಧ್ಯತೆ ಹೆಚ್ಚು. ಇಂಥ ಪ್ರಕರಣ ಗಮನಕ್ಕೆ ಬಂದ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು. ಬಡ್ಸ್-19 ಕಾಯ್ದೆ ಕುರಿತು ಜಿಲ್ಲೆಯ ಪೊಲೀಸರಿಗೆ ಸೆಪ್ಟೆಂಬರ್ನಲ್ಲಿ ಕಾರ್ಯಾಗಾರ ನಡೆಸಿ ಅರಿವು ಮೂಡಿಸಲಾಗಿದೆ.
| ಲಕ್ಷ್ಮಣ ನಿಂಬರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಬೆಳಗಾವಿ