

ನಾವು ನಿತ್ಯವೂ ಸೇವಿಸುತ್ತಿರುವ ಆಹಾರ ಪದಾರ್ಥಗಳಲ್ಲಿ ಬಹುತೇಕ ತಿಂಡಿ-ತಿನಿಸುಗಳು ಉತ್ತಮ ಆರೋಗ್ಯಕ್ಕೆ ಪೂರಕವಾಗಿಲ್ಲ ಎಂಬ ಮಾತು ಹಲವಾರು ವರ್ಷಗಳಿಂದ ಕೇಳಿಬರುತ್ತಿದೆ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಒಂದು ವರದಿಯ ಪ್ರಕಾರ, ಆಹಾರದ ಐದನೇ ಒಂದು ಭಾಗ ಕಲಬೆರಕೆಗೆ ಒಳಗಾಗಿರುವುದು ಕಂಡುಬಂದಿದೆ. ಅದರಲ್ಲಿ ಆರೋಗ್ಯಕ್ಕೆ ಅಗತ್ಯವಾಗಿ ಬೇಕಾದ ಸತ್ವ ಇರುವುದಿಲ್ಲ. ಅಷ್ಟೇ ಆಗಿದ್ದರೆ ಪರವಾಗಿಲ್ಲ ಎನ್ನಬಹುದಿತ್ತು. ಅದು ಅಷ್ಟಕ್ಕೇ ನಿಲ್ಲದೆ, ಆರೋಗ್ಯಕ್ಕೆ ಮಾರಕವಾದ ರಾಸಾಯನಿಕಗಳೂ ಆ ಆಹಾರದಲ್ಲಿ ಸೇರಿಕೊಂಡಿರುವುದು ಆತಂಕಕಾರಿ ವಿಷಯವಾಗಿ ಪರಿಣಮಿಸಿದೆ. ತಡವಾಗಿಯಾದರೂ ಇತ್ತೀಚೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ವಿಷಯದಲ್ಲಿ ಎಚ್ಚೆತ್ತುಕೊಂಡಿವೆ.
ಒಂದೊಂದೇ ಪದಾರ್ಥಗಳ ಗುಣಮಟ್ಟ ಪರೀಕ್ಷೆಗೆ ಮುಂದಾಗುತ್ತಿವೆ. ರಾಸಾಯನಿಕ ಮತ್ತು ಬಣ್ಣಗಳ ಕಲಬೆರಕೆ ಕಂಡುಬಂದಿರುವ ಪ್ರಕರಣಗಳಲ್ಲಿ ಕಠಿಣ ಕ್ರಮಕ್ಕೂ ಮುಂದಾಗುತ್ತಿವೆ. ಇದಕ್ಕೆ ಇತ್ತೀಚಿನ ಉದಾಹರಣೆ ಎಂದರೆ ಕರ್ನಾಟಕವೂ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಕಾಟನ್ ಕ್ಯಾಂಡಿ (ಬಾಂಬೆ ಮಿಠಾಯಿ) ಮತ್ತು ಗೋಬಿ ಮಂಚೂರಿಯನ್ನಲ್ಲಿ ಬಣ್ಣದ ಬಳಕೆಯನ್ನು ನಿಷೇಧಿಸಿದ್ದು. ನಂತರ ರಾಜ್ಯದಲ್ಲಿ ಫಿಶ್, ಕಬಾಬ್ಗಳಲ್ಲಿ ರಾಸಾಯನಿಕ ಬಣ್ಣ ಬಳಸುವುದರ ಮೇಲೆಯೂ ಸರ್ಕಾರ ನಿಷೇಧ ಹೇರಿದೆ. ಇದೀಗ ಜನಸಾಮಾನ್ಯರ ಹೃದಯಕ್ಕೆ ಮತ್ತಷ್ಟು ಹತ್ತಿರವಾದ ಪಾನಿಪುರಿ, ಮಸಾಲಾಪುರಿಯಲ್ಲೂ ರಾಸಾಯನಿಕ ಮಿಶ್ರಿತ ಬಣ್ಣ ಬಳಸುತ್ತಿರುವ ಕಳವಳಕಾರಿ ಸಂಗತಿ ಬಯಲಾಗಿದೆ. ಆಹಾರ ಮತ್ತು ಸುರಕ್ಷತಾ ಗುಣಮಟ್ಟ ಇಲಾಖೆ ರಾಜ್ಯಾದ್ಯಂತ 260 ಪ್ರದೇಶಗಳಲ್ಲಿ ಪಾನಿಪುರಿ ಹಾಗೂ ಮಸಾಲಾಪುರಿ ಮಾದರಿ ಸಂಗ್ರಹಿಸಿ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿತ್ತು.
ಆ ಪೈಕಿ 41 ಮಾದರಿಗಳಲ್ಲಿ ಕೃತಕ ಬಣ್ಣ ಪತ್ತೆಯಾಗಿದೆ. ರುಚಿ ಹೆಚ್ಚಿಸುವ ಖಟ್ಟಾ-ಮೀಠಾ ಸಾಸ್ನಲ್ಲಿ ಆರೋಗ್ಯಕ್ಕೆ ಹಾನಿಕಾರಕವಾದ ರಾಸಾಯನಿಕ ಅಂಶ ಪತ್ತೆಯಾಗಿದೆ. ಈ ರಾಸಾಯನಿಕಗಳು ಮನುಷ್ಯನ ಜೀರ್ಣಾಂಗ ವ್ಯವಸ್ಥೆ ಮೇಲೆ ತೀವ್ರ ಪರಿಣಾಮ ಬೀರಲಿದ್ದು, ಮಿದುಳಿನ ಆರೋಗ್ಯವೂ ಹದಗೆಡಲಿದೆ. ಉಳಿದಂತೆ 18 ಮಾದರಿಗಳು ಕಳಪೆ ಗುಣಮಟ್ಟದಿಂದ ಕೂಡಿರುವುದು ದೃಢಪಟ್ಟಿದೆ. ಇದನ್ನು ಹಿರಿಯ ಅಧಿಕಾರಿಗಳೇ ಖಚಿತಪಡಿಸಿದ್ದು, ಸದ್ಯದಲ್ಲೇ ಇವುಗಳಲ್ಲಿಯೂ ಬಣ್ಣ ಬಳಸುವುದನ್ನು ನಿಷೇಧಿಸಿ ಆದೇಶ ಹೊರಬೀಳುವ ಸಾಧ್ಯತೆ ಇದೆ. ಇವೆಲ್ಲಕ್ಕಿಂತ ಮಿಗಿಲಾಗಿ, ತಿಂಡಿಗಳನ್ನು ಕರಿಯುವುದಕ್ಕೆ ಒಮ್ಮೆ ಬಳಸಿದ ಎಣ್ಣೆಯನ್ನೇ ಪದೇಪದೆ ಬಳಸುತ್ತಿರುವುದು ಹಲವೆಡೆ ರೂಢಿಯಲ್ಲಿದೆ. ಇದು ಕ್ಯಾನ್ಸರ್ನಂತಹ ಮಾರಕ ಕಾಯಿಲೆಗೆ ದಾರಿ ಮಾಡಿಕೊಡುತ್ತದೆ ಎಂದು ತಜ್ಞರು ಎಚ್ಚರಿಸಿದ್ದರೂ ಈ ಪಿಡುಗು ನಿಂತಿಲ್ಲ.
ದೊಡ್ಡ ಹೋಟೆಲ್ನವರು ಬಳಸಿದ ಎಣ್ಣೆಯನ್ನೇ ಸಣ್ಣ ಹೋಟೆಲ್ನವರು ತಂದು ಮತ್ತೆ ಮತ್ತೆ ಬಳಸುತ್ತಾರೆ ಎಂಬ ಆರೋಪ ಇದೆ. ಇನ್ನು ಮಾವು- ಬಾಳೆಯನ್ನು ಬೇಗ ಹಣ್ಣು ಮಾಡಲು ರಾಸಾಯನಿಕ ಮಿಶ್ರಿತ ನೀರನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಆ ರಾಸಾಯನಿಕದಿಂದಾಗಿ ಮಾವು-ಬಾಳೆ ಆಕರ್ಷಕ ಹಳದಿ ಬಣ್ಣದಲ್ಲಿ ಕಂಗೊಳಿಸುತ್ತವೆ. ಆದರೆ ಒಳಗೆ ಪೂರ್ತಿ ಹಣ್ಣಾಗಿರುವುದಿಲ್ಲ. ಇದು ಆರ್ಥಿಕವಾಗಿ ಮಾಡುವ ಮೋಸ ಮಾತ್ರವಲ್ಲ, ಆರೋಗ್ಯಕ್ಕೆ ಕೂಡ ಮಾರಕ. ಇದರ ಬಗ್ಗೆಯೂ ಆಹಾರ ಇಲಾಖೆ ಅಧಿಕಾರಿಗಳು ತನಿಖೆ ನಡೆಸಿ, ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ. ಅಸುರಕ್ಷಿತ ಆಹಾರ ಮಾರಾಟಕ್ಕೆ ಸಮರೋಪಾದಿಯಲ್ಲಿ ತಡೆ ಒಡ್ಡಬೇಕಾಗಿದೆ.