

ಸಾಗರ: ಕ್ಷೇತ್ರದಲ್ಲಿ ಶಾಸಕರು ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಸಹಿಸಲಾಗದೆ ಬಿಜೆಪಿಯ ಕೆಲವರು ಶಾಸಕರು ಹಾಗೂ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಸೋಮಶೇಖರ ಲ್ಯಾವಿಗೆರೆ ದೂರಿದರು.
ಬಿಜೆಪಿಯ ಕೆಲವರು ಅಕ್ರಮ ಕಲ್ಲುಕ್ವಾರಿಯಲ್ಲಿ ನಾನು ಭಾಗಿಯಾಗಿದ್ದೇನೆ ಎಂದು ಬಿಂಬಿಸಿ ಕೆಟ್ಟಹೆಸರು ತರುವ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಆನಂದಪುರದಲ್ಲಿ ನಡೆಯುತ್ತಿರುವ ಕಲ್ಲುಕ್ವಾರಿಗೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಾಗರ ತಾಲೂಕಿನ ಲ್ಯಾವಿಗೆರೆ ಗ್ರಾಮದ ಸರ್ವೇ ನಂ. 78ರಲ್ಲಿ ಅನೇಕ ವರ್ಷಗಳಿಂದ ಕಲ್ಲುಕ್ವಾರಿ ನಡೆಯುತ್ತಿದೆ. ಆನಂದಪುರ, ತ್ಯಾಗರ್ತಿ ಭಾಗದಲ್ಲಿ ಅಡಕೆ ತೋಟ ಮಾಡಲು ಕೆಲವು ರೈತರು ತಮ್ಮ ಜಮೀನಿನ ಮಣ್ಣು ತೆಗೆಸಲು ಕಲ್ಲುಕ್ವಾರಿ ನಡೆಸುವವರಿಗೆ ತಾತ್ಕಾಲಿಕವಾಗಿ ನೀಡುತ್ತಾರೆ. ಮಣ್ಣು ಸಮತಟ್ಟಾದ ಮೇಲೆ ವಾಪಸ್ ಪಡೆದು ತೋಟ ಮಾಡುತ್ತಾರೆ. ಸುಮಾರು 5 ಸಾವಿರ ಕುಟುಂಬ ಕಲ್ಲುಕ್ವಾರೆ ಮೂಲಕ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಸುಳ್ಳುಸುದ್ದಿ ಹರಡುವುದರಿಂದ ಕ್ವಾರಿ ಮೇಲೆ ದಾಳಿ ನಡೆದು ಅವರ ಬದುಕು ಬೀದಿಗೆ ಬೀಳುವ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ಚೇತನ್‌ರಾಜ್ ಕಣ್ಣೂರು ಮಾತನಾಡಿ, ಈ ಹಿಂದೆ ಶಾಸಕರು ಅಭಿವೃದ್ಧಿಗೆ ಹಣ ತರುತ್ತಿಲ್ಲ ಎಂದು ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದರು. ಈಗ ಹಳ್ಳಿಹಳ್ಳಿಗಳಲ್ಲಿ ಕಾಮಗಾರಿಗಳು ಆರಂಭವಾಗಿವೆ. ಬಿಜೆಪಿಯವರಿಗೆ ಟೀಕೆ ಮಾಡಲು ವಿಷಯವೇ ಇಲ್ಲದಂತಾಗಿದೆ. ಸದ್ಯದಲ್ಲೇ ತಾಪಂ, ಜಿಪಂ ಚುನಾವಣೆಗಳು ಬರಲಿವೆ. ಹಾಗಾಗಿ ಶಾಸಕರಿಗೆ ಕೆಟ್ಟ ಹೆಸರು ತರಲು ಬಿಜೆಪಿಯ ಕೆಲವರು ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ದೂರಿದರು.
ಪ್ರಮುಖರಾದ ಉಮೇಶ್, ಕಿರಣ್, ಚೌಡಪ್ಪ, ಲೋಕೇಶ್, ಶರತ್ ನಾಗಪ್ಪ ಸುದ್ದಿಗೋಷ್ಠಿಯಲ್ಲಿದ್ದರು.