ಸಾಗರ: ಪರಿಸರ ಹೋರಾಟಗಾರ ಅನಂತ ಹೆಗಡೆ ಅಶೀಸರ ಅವರು ಕೆಪಿಸಿ ಭೂಮಿಯನ್ನು ಅರಣ್ಯ ಇಲಾಖೆ ಸ್ವಾಧೀನಕ್ಕೆ ಕೊಡಿ ಎಂದು ನೀಡಿರುವ ಹೇಳಿಕೆ ಅಸಮಂಜಸ. ಅವರು ರೈತರ ಸಮಸ್ಯೆ ಅರಿತು ಮಾತನಾಡಬೇಕು ಎಂದು ಎಚ್ಚರಿಸುತ್ತೇನೆ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಹೇಳಿದರು.
ಅಶೀಸರ ಅವರು ಮಾಹಿತಿ ಇಲ್ಲದೆ ಇಂತಹ ಹೇಳಿಕೆ ಕೊಡುವುದನ್ನು ತಕ್ಷಣ ನಿಲ್ಲಿಸಬೇಕು. ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣ ಸಂದರ್ಭ ಕೆಪಿಸಿ ಒಂದಷ್ಟು ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದು, ಅದು ಮುಳುಗಡೆಯಾಗಿಲ್ಲ. ರೈತರು ಅಕ್ಕಪಕ್ಕದಲ್ಲಿ ಉಳುಮೆ ಮಾಡಿ ಆ ಜಮೀನನ್ನು ತಮ್ಮ ಸ್ವಾಧೀನದಲ್ಲಿ ಇರಿಸಿಕೊಂಡಿದ್ದಾರೆ. ಆದರೆ ಅಶೀಸರ ಅವರು 20 ಸಾವಿರ ಎಕರೆ ಕೆಪಿಸಿ ಭೂಮಿ ಇದೆ. ಅದನ್ನು ಅರಣ್ಯ ಇಲಾಖೆ ವಶಪಡಿಸಿಕೊಳ್ಳಲಿ ಎಂದು ಮನವಿ ನೀಡಿದ್ದರಿಂದ ಸರ್ಕಾರ ಮತ್ತು ಅರಣ್ಯ ಇಲಾಖೆ ಎಚ್ಚರಗೊಂಡಿದೆ. ಇದರಿಂದ ರೈತರಿಗೆ ಯಾವುದೇ ಸಂದರ್ಭದಲ್ಲಿ ತೊಂದರೆ ಕೊಡಬಹುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಯಾರೋ ಕೆಲವರು ನೀಡಿದ ಮಾಹಿತಿಯನ್ನೇ ಸತ್ಯ ಎಂದು ನಂಬಿ ಮನವಿ ಕೊಟ್ಟಿದ್ದಾರೆ. ಬಾಯಿ ಚಪಲಕ್ಕೆ ಇಂತಹ ಹೇಳಿಕೆ ನೀಡಿದರೆ ರೈತರ ಆತಂಕಕ್ಕೆ ಕಾರಣವಾಗುತ್ತದೆ. ಅಲ್ಲದೆ, ಸ್ಥಳೀಯವಾಗಿ ನಾವು ರೈತರ ವಿರೋಧ ಎದುರಿಸಬೇಕಾಗುತ್ತದೆ. ಸರ್ಕಾರ ಕೆಪಿಸಿ ವಶಪಡಿಸಿಕೊಂಡು ಉಪಯೋಗಿಸದೆ ಇರುವ ಭೂಮಿಯನ್ನು ರೈತರಿಗೆ ವಾಪಸ್ ನೀಡಬೇಕು. ಸ್ಥಳೀಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಅರಣ್ಯ ಇಲಾಖೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರು ಎಸ್‌ಐಟಿ ರಚನೆ ಮಾಡಿ ಜಿಲ್ಲೆಯಲ್ಲಿ ಎರಡ್ಮೂರು ಗುಂಟೆಯಿಂದ 5 ಎಕರೆವರೆಗೆ ರೈತರ ಜಮೀನು ವಶಪಡಿಸಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಹೊಸ ಒತ್ತುವರಿಗೆ ನಾವ್ಯಾರೂ ಬೆಂಬಲ ಕೊಡುವುದಿಲ್ಲ. ಆದರೆ ಹಿಂದಿನಿಂದಲೂ ಉಳುಮೆ ಮಾಡಿಕೊಂಡು ಬರುತ್ತಿರುವ ಜಮೀನು ವಶಪಡಿಸಿಕೊಳ್ಳಲು ಹೊಸ ಕಾಯ್ದೆ ಜಾರಿಗೆ ತರುವ ಅಧಿಕಾರಿಗಳ ಕ್ರಮ ಖಂಡನೀಯ. ತಕ್ಷಣ ಸುತ್ತೋಲೆಯನ್ನು ವಾಪಸ್ ಪಡೆಯಬೇಕು. ಬಗರ್‌ಹುಕುಂ, ಅರಣ್ಯಹಕ್ಕು ವಾಸಿಗಳಿಗೆ ನೋಟಿಸ್ ಕೊಡುತ್ತಿರುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಮಾತು ಮರೆತ ಶಾಸಕ: ಸಾಗರ ಮತ್ತು ಹೊಸನಗರ ತಾಲೂಕಿನಲ್ಲಿ ಸುಮಾರು 13 ಸಾವಿರ ರೈತರು ಕೆಪಿಸಿ ಭೂಮಿ ಉಳುಮೆ ಮಾಡುತ್ತಿದ್ದಾರೆ. ಈತನಕ ಉಪಯೋಗಿಸದಿರುವ ಭೂಮಿಯನ್ನು ರೈತರಿಗೆ ವಾಪಸ್ ಕೊಟ್ಟಿಲ್ಲ. ರೈತರಿಗೆ 25 ವರ್ಷಗಳ ಕಾಲ ಲೀಸ್ ಆಧಾರದ ಮೇಲೆ ಭೂಮಿ ಕೊಡಿ ಎನ್ನುವುದು ನಮ್ಮ ಬೇಡಿಕೆ ಎಂದು ತಾಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಹೇಳಿದರು. ಚುನಾವಣೆಯಲ್ಲಿ ಗೆದ್ದರೆ ಕೆಪಿಸಿ ಭೂಮಿಯನ್ನು ರೈತರಿಗೆ ವಾಪಸ್ ಕೊಡಿಸುತ್ತೇನೆ ಎಂದು ಗೋಪಾಲಕೃಷ್ಣ ಬೇಳೂರು ಭರವಸೆ ನೀಡಿದ್ದು ಮರೆತಂತಿದೆ. ಕೆಪಿಸಿ ಭೂಮಿಯನ್ನು ಅರಣ್ಯ ಇಲಾಖೆ ವಶಪಡಿಸಿಕೊಳ್ಳಲಿ ಎಂದು ಮನವಿ ನೀಡಿರುವುದು ಸರಿಯಲ್ಲ ಎಂದರು.