

ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರೂ ಕೆಲವೆಡೆ ಅಸ್ಪ ೃಶ್ಯತೆ ಆಚರಣೆ ಇನ್ನೂ ಜೀವಂತವಿರುವುದು ದುರದೃಷ್ಟಕರ ಸಂಗತಿ. ಪರಿಶಿಷ್ಟರನ್ನು ಹೋಟೆಲ್ಗಳ ಒಳಗೆ ಬರದಂತೆ ತಡೆಯುವುದು, ಸಲೂನ್ಗಳಲ್ಲಿ ಹೇರ್ ಕಟ್ ಮಾಡಲು ನಿರಾಕರಿಸುವುದು, ದೇವಸ್ಥಾನ ಪ್ರವೇಶಕ್ಕೆ ಆಸ್ಪದ ನೀಡದಿರುವುದು ಮುಂತಾದ ಘಟನೆಗಳು ದೇಶದ ನಾನಾ ಭಾಗಗಳಲ್ಲಿ ಆಗಾಗ ವರದಿಯಾಗುತ್ತಲೇ ಇವೆ. ಅಂಥದೊಂದು ಘಟನೆ ಈಗ ಕರ್ನಾಟಕದಲ್ಲೂ ನಡೆದಿದೆ. ಮಂಡ್ಯ ಜಿಲ್ಲೆಯ ಹನಕೆರೆ ಗ್ರಾಮದ ಶ್ರೀ ಕಾಲಭೈರವೇಶ್ವರ ದೇವಸ್ಥಾನದೊಳಕ್ಕೆ ಪ್ರವೇಶಿಸಲು ತಮಗೆ ಅವಕಾಶ ನೀಡುತ್ತಿಲ್ಲವೆಂದು ಅಲ್ಲಿನ ಪರಿಶಿಷ್ಟರು ತಾಲೂಕು ಆಡಳಿತಕ್ಕೆ ಕೆಲವು ತಿಂಗಳುಗಳ ಹಿಂದೆ ದೂರು ಸಲ್ಲಿಸಿದ್ದರು. ದೇವಸ್ಥಾನದ ಜೀಣೋದ್ಧಾರ ನಡೆದು, ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಬಂದ ಬಳಿಕ ಈ ಅಸ್ಪ ೃಶ್ಯತೆ ಆಚರಣೆಯ ಸಮಸ್ಯೆ ಪ್ರಾರಂಭವಾಗಿದೆ ಎಂದು ಹೇಳಲಾಗುತ್ತಿದೆ.
ಹಿರಿಯ ಅಧಿಕಾರಿಗಳು ಗ್ರಾಮಕ್ಕೆ ಆಗಮಿಸಿ, ಎರಡು ಬಾರಿ ಉಭಯ ಬಣಗಳ ಮಧ್ಯೆ ಶಾಂತಿಸಭೆ ನಡೆಸಿ, ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಿದ್ದರು. ಆದರೆ ಯಾವುದೇ ಕಾರಣಕ್ಕೂ ದಲಿತರು ದೇವಸ್ಥಾನ ಪ್ರವೇಶಿಸುವುದಕ್ಕೆ ಅವಕಾಶ ನೀಡುವುದಿಲ್ಲವೆಂದು ಕೆಲವರು ಪಟ್ಟು ಹಿಡಿದ ಕಾರಣ ಶಾಂತಿಸಭೆಗಳು ವಿಫಲವಾದವು. ಈ ಹಿನ್ನೆಲೆಯಲ್ಲಿ ಭಾನುವಾರ ದಲಿತರು ದೇವಸ್ಥಾನ ಪ್ರವೇಶಕ್ಕೆ ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು. ಆದರೆ ಸವರ್ಣೀಯರು ಒಪ್ಪದ ಕಾರಣ, ಕೆಲ ಕಾಲ ತ್ವೇಷಮಯ ಸ್ಥಿತಿ ಉಂಟಾಗಿತ್ತು. ಬಳಿಕ, ಅಧಿಕಾರಿಗಳ ಉಪಸ್ಥಿತಿಯಲ್ಲಿ ಪರಿಶಿಷ್ಟರಿಂದ ದೇಗುಲ ಪ್ರವೇಶ, ಪೂಜೆ ಸಾಧ್ಯವಾಗಿದೆ. ಈ ಸಂದರ್ಭದಲ್ಲಿ ದೇವರ ಉತ್ಸವ ಮೂರ್ತಿಯನ್ನೇ ಕೆಲವು ಸವರ್ಣೀಯರು ಬೇರೆಡೆಗೆ ತೆಗೆದುಕೊಂಡು ಹೋಗಿ ಇಟ್ಟಿರುವುದು ಖೇದ, ಆಶ್ಚರ್ಯ ತರುವ ಸಂಗತಿಯಾಗಿದೆ. ಈಗಲೂ ಗ್ರಾಮದಲ್ಲಿ ತ್ವೇಷಮಯ ಪರಿಸ್ಥಿತಿ ನೆಲೆಸಿದೆ ಎನ್ನಲಾಗಿದ್ದು, ಎರಡೂ ಕಡೆಯ ಜನರು ಸೇಡಿನ ಕ್ರಮಕ್ಕೆ ಮುಂದಾಗದಂತೆ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಹಿರಿಯ ಅಧಿಕಾರಿಗಳು ಎಚ್ಚರ ವಹಿಸಬೇಕಾಗಿದೆ. ಗ್ರಾಮಸ್ಥರು, ಅದರಲ್ಲೂ ವಿಶೇಷವಾಗಿ ಯುವಕರು, ಇತರ ಧರ್ಮ-ಜಾತಿಗಳ ಜನರ ಬಗ್ಗೆ ಸಹಿಷ್ಣುತೆ, ಸಂವೇದನಾಶೀಲತೆ ಬೆಳೆಸಿಕೊಳ್ಳುವಂತೆ ಅವರಲ್ಲಿ ಅರಿವು ಮೂಡಿಸುವ ಕೆಲಸವಾಗಬೇಕಿದೆ.
ಇಂತಹ ಸಮಸ್ಯೆಗಳನ್ನು ಪ್ರಾರಂಭಿಕ ಹಂತದಲ್ಲೇ ಪರಿಹರಿಸುವುದು ಉತ್ತಮ. ಇಲ್ಲದಿದ್ದರೆ ಇವು ಜನಮಾನಸದಲ್ಲಿ ಬೃಹತ್ತಾಗಿ ಬೆಳೆದು ಅಹಿತಕರ ಘಟನೆಗಳಿಗೆ ದಾರಿ ಮಾಡಿಕೊಡುತ್ತವೆ. ಅಸ್ಪ ೃಶ್ಯತೆಯನ್ನು ಆಚರಿಸುವ ಪ್ರತಿ ಸಮುದಾಯದಲ್ಲೂ ಸಂವೇದನಾಶೀಲ ವ್ಯಕ್ತಿಗಳು ಇದ್ದೇ ಇರುತ್ತಾರೆ. ಇಂಥ ಸಂದರ್ಭದಲ್ಲಿ ಜಾಗೃತಿ ಮೂಡಿಸಲು ಅಂಥವರ ಸಹಾಯವನ್ನು ಪಡೆಯಬೇಕು. ಧರ್ಮಗಳಲ್ಲಿ ಇರಬಹುದಾದ ದೋಷಗಳನ್ನು ಆಯಾ ಧರ್ವಿುಯರೇ ನಿವಾರಿಸಬೇಕು. ಅಸ್ಪ ೃಶ್ಯತೆ ಆಚರಿಸುವುದೆಂದರೆ ಮನುಷ್ಯತ್ವದಿಂದ ವಿಮುಖವಾದಂತೆ. ಈ ಆಧುನಿಕ ಯುಗದಲ್ಲೂ ಜಾತಿ-ಧರ್ಮದ ಹೆಸರಿನಲ್ಲಿ ಕೆಲವರನ್ನು ಅವಮಾನಿಸುವುದು, ಬಹಿಷ್ಕರಿಸುವುದು, ಸಮಾಜದಿಂದ ದೂರ ಇರಿಸುವುದು ಯಾರಿಗೂ ಶೋಭೆ ತರುವ ನಡವಳಿಕೆಯಲ್ಲ. ಅದು ಅಪರಾಧವೂ ಹೌದು. ದೇಶದ ಸಂವಿಧಾನದಲ್ಲಿ ಸಮಾನತೆಗೆ ಮೊದಲ ಆದ್ಯತೆ ನೀಡಲಾಗಿದೆ. ಅದರ ಆಶಯಗಳಿಗೆ ಅನುಗುಣವಾಗಿ ನಡೆದುಕೊಳ್ಳುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ.