ಅನಧಿಕೃತವಾಗಿ ರೈಲ್ವೆ ಟಿಕೆಟ್ ಬುಕಿಂಗ್

smg crime 2
ಅನಧಿಕೃತವಾಗಿ ಆನ್‌ಲೈನ್‌ನಲ್ಲಿ ರೈಲ್ವೆ ಟಿಕೆಟ್ ಕಾಯ್ದಿರಿಸುತ್ತಿದ್ದ ಆರೋಪಿಗಳೊಂದಿಗೆ ಆರ್‌ಪಿಎಫ್ ಸಿಬ್ಬಂದಿ.
Published on

ಶಿವಮೊಗ್ಗ: ರೈಲ್ವೆ ಇಲಾಖೆಯಿಂದ ಅನುಮತಿ ಪಡೆಯದೆ ಅನಧಿಕೃತವಾಗಿ ಆನ್‌ಲೈನ್‌ನಲ್ಲಿ ರೈಲ್ವೆ ಟಿಕೆಟ್ ಬುಕಿಂಗ್ ಮಾಡುವುದಲ್ಲದೆ, ಪ್ರಯಾಣಿಕರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದ ಆರೋಪದ ಮೇರೆಗೆ ತಾಳಗುಪ್ಪದ ಮೂರು ಸೈಬರ್ ಸೆಂಟರ್‌ಗಳ ವಿರುದ್ಧ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ತಾಳಗುಪ್ಪ ರೇಣುಕಾ ಸೈಬರ್ ಸೆಂಟರ್‌ನ ಗಣೇಶ್‌ರಾಮ್ ನಾಯಕ್(31), ಸಂವಹನ ಮೊಬೈಲ್ಸ್‌ನ ರೇವಣ್ಣಪ್ಪ(36) ಹಾಗೂ ಆರ್ಯ ಸೈಬರ್‌ನ ಪ್ರಶಾಂತ್ ಹೆಗಡೆ(46) ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ದಾಳಿ ವೇಳೆ 2.50 ಲಕ್ಷ ರೂ. ಮೌಲ್ಯದ ಇ-ಟಿಕೆಟ್‌ಗಳು, 1.25 ಲಕ್ಷ ರೂ. ಮೌಲ್ಯದ ಕಂಪ್ಯೂಟರ್, ಪ್ರಿಂಟರ್, ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಖಾಸಗಿ ವ್ಯಕ್ತಿಗಳು ತಿಂಗಳಿಗೆ ಇಷ್ಟೇ ಬಾರಿ ಆನ್‌ಲೈನ್ ಮೂಲಕ ಟಿಕೆಟ್ ಪಡೆಯಬಹುದೆಂದು ರೈಲ್ವೆ ಇಲಾಖೆ ನಿಗದಿಪಡಿಸಿದೆ. ಸಾರ್ವಜನಿಕರಿಗೆ ರೈಲ್ವೆ ಟಿಕೆಟ್ ನೀಡಲು ಆನ್‌ಲೈನ್ ಸೇವೆ ಒದಗಿಸುವವರು ರೈಲ್ವೆ ಇಲಾಖೆಯಿಂದ ಅನುಮತಿ ಪಡೆಯಬೇಕಾದ್ದು ಅವಶ್ಯ. ನಿಗದಿತ ಶುಲ್ಕವನ್ನು ರೈಲ್ವೆ ಇಲಾಖೆಗೆ ಪಾವತಿಸಬೇಕು.
ಭಾರತೀಯ ರೈಲ್ವೆಯಿಂದ ಸೂಚನೆ ಬಂದ ಹಿನ್ನೆಲೆಯಲ್ಲಿ ಮೈಸೂರು ವಿಭಾಗದ ರೈಲ್ವೆ ಸಂರಕ್ಷಣಾ ಪಡೆ ಕಾರ್ಯಾಚರಣೆ ನಡೆಸಿದ್ದು, ತಾಂತ್ರಿಕತೆ ಆಧರಿಸಿ ನಡೆದ ತನಿಖೆಯಲ್ಲಿ ಅನಧಿಕೃತ ಟಿಕೆಟ್ ಕೌಂಟರ್‌ಗಳ ಬಣ್ಣ ಬಯಲಾಗಿದೆ. ಅಪರಾಧ ನಿರೀಕ್ಷಕ ಎಂ.ನಿಶಾದ್, ಎಸ್‌ಐ ಬಿ.ಚಂದ್ರಶೇಖರ್, ವೆಂಕಟೇಶ್ ಮತ್ತು ಈಶ್ವರ್ ರಾವ್ ಅವರನ್ನೊಳಗೊಂಡ ತಂಡ ಸೋಮವಾರ ದಾಳಿ ನಡೆಸಿದೆ. ತಂಡದಲ್ಲಿ ಆರ್‌ಪಿಎಫ್ ಸಿಬ್ಬಂದಿ ಡಿ.ಚೇತನ್, ಎ.ಪ್ರವೀಣ್, ಇಳಂಗೋವನ್, ಶ್ರೀಲಕ್ಷ್ಮೀ ಪಿ. ಸೋಮನ್, ಎಂ.ಎಸ್.ತನುಜಾ ಕಾರ್ಯನಿರ್ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net