

Navaratri : ಮುಟ್ಟಿನ ಸಮಸ್ಯೆಯಿಂದಾಗಿ ನವರಾತ್ರಿ ಪೂಜೆ ಮಾಡಲು ಸಾಧ್ಯವಾಗದಿದ್ದಕ್ಕೆ ಮನನೊಂದು ಮಹಿಳೆಯೊಬ್ಬರು ಸಾವಿಗೆ ಶರಣಾಗಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ತ್ಸಾನ್ಸಿಯಲ್ಲಿ ನಡೆದಿದೆ.
ಮೃತಳನ್ನು ಪ್ರಿಯಾಂಶಾ ಸೋನಿ ಎಂದು ಗುರುತಿಸಲಾಗಿದೆ. ಈಕೆ ತನ್ನ ಪತಿ ಮುಕೇಶ್ ಸೋನಿ ಮತ್ತು ಮಕ್ಕಳಾದ ಜಾನ್ವಿ (ಮೂರುವರೆ ವರ್ಷ) ಮತ್ತು ಮಾನ್ವಿ (ಎರಡೂವರೆ ವರ್ಷ) ಜತೆ ವಾಸಿಸುತ್ತಿದ್ದರು. ಮುಕೇಶ್ ತನ್ನ ಪತ್ನಿಯ ಆತ್ಮಹತ್ಯೆಗೆ ಕಾರಣವನ್ನು ಸಹ ವಿವರಿಸಿದ್ದಾರೆ.
ಪ್ರಿಯಾಂಶಾ ನಿಜವಾಗಿಯೂ ನವರಾತ್ರಿ ಪೂಜೆ ಮಾಡಲು ಬಯಸಿದ್ದಳು. ಅದಕ್ಕೆ ಬೇಕಾದ ಎಲ್ಲಾ ರೀತಿಯ ಸಿದ್ಧತೆಗಳನ್ನು ಆಕೆ ಮಾಡಿಕೊಂಡಿದ್ದಳು. ಆದರೆ, ನವರಾತ್ರಿ ಪೂಜೆಯ ಮೊದಲ ದಿನವೇ ಅವಳ ಋತುಚಕ್ರ ಪ್ರಾರಂಭವಾಯಿತು. ಇದರಿಂದಾಗಿ ಆಕೆ ಪೂಜೆ ಮಾಡಲು ಸಾಧ್ಯವಾಗಲಿಲ್ಲ. ಇದು ಪ್ರಿಯಾಂಶಾಖಳನ್ನು ಮಾನಸಿಕವಾಗಿ ಕುಗ್ಗಿಸಿತು. ಅದರಿಂದ ಹೊರಬರಲು ಸಾಧ್ಯವಾಗಲಿಲ್ಲ ಎಂದು ಮುಕೇಶ್ ಹೇಳಿದ್ದಾರೆ.
ದೇವಿ ಬಂದ ನಂತರ ಪೂಜೆ ಆರಂಭವಾಗುತ್ತದೆ ಎಂದು ಪ್ರಿಯಾಂಶಾ ಹೇಳುತ್ತಲೇ ಇದ್ದಳು. ಎಲ್ಲಾ ಪೂಜಾ ಸಾಮಗ್ರಿಗಳನ್ನು ತರಲು ನನಗೆ ಹೇಳಿದ್ದಳು. ಆಕೆ ಹೇಳಿದಂತೆಯೇ ನಾನು ಮಾಡಿದೆ. ಆದರೆ, ಮೊದಲ ದಿನವೇ ಅವಳಿಗೆ ಮುಟ್ಟಾಯಿತು. ಇದರಿಂದ ಬೇಸರಗೊಂಡಳು. ಇದು ಕಾಮನ್, ಎಲ್ಲಾ ಮಹಿಳೆಯರಿಗೂ ಇದು ಸಂಭವಿಸುತ್ತದೆ. ಈ ಬಗ್ಗೆ ಯೋಚಿಸಬೇಡ. ಮುಂದಿನ ನವರಾತ್ರಿಯಲ್ಲಿ ಮಾಡಿದರಾಯಿತು ಎಂದು ಸಮಾಧಾನ ಮಾಡಿದೆ. ಆದರೂ ಆಕೆ ಈ ದುಡುಕಿನ ನಿರ್ಧಾರ ತೆಗೆದುಕೊಂಡಳು ಎಂದು ಮುಕೇಶ್ ತಿಳಿಸಿದ್ದಾರೆ.
ನವರಾತ್ರಿ ಪೂಜೆ ಆರಂಭವಾದ ಮರುದಿನ ಮಹಿಳೆ ವಿಷ ಸೇವಿಸಿದಳು. ತಕ್ಷಣ ಆಕೆಯನ್ನು ತ್ಸಾನ್ಸಿಯ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು. ಆಕೆಯ ಆರೋಗ್ಯ ಸುಧಾರಿಸಿದ ನಂತರ ಮಹಿಳೆಯನ್ನು ಮನೆಗೆ ಕರೆತರಲಾಯಿತು. ಈ ಮಧ್ಯೆ, ಪ್ರಿಯಾಂಶಾ ಅವರ ಆರೋಗ್ಯ ಹದಗೆಟ್ಟಾಗ, ಆಕೆಯನ್ನು ಮತ್ತೆ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಆಕೆಯ ಜೀವವನ್ನು ಉಳಿಸಲು ಸಾಧ್ಯವಾಗಲಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಕೊತ್ವಾಲಿ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)