

Employees : ತಮ್ಮ ಕಂಪನಿಯ ಕೆಲ ಉದ್ಯೋಗಿಗಳಿಗೆ ಕ್ರೂರವಾಗಿ ಹಿಂಸೆ ನೀಡಿರುವ ಆರೋಪ ಮಾರ್ಕೆಟಿಂಗ್ ಸಂಸ್ಥೆ ಹಿಂದೂಸ್ತಾನ್ ಪವರ್‌ಲಿಂಕ್ಸ್ ವಿರುದ್ಧ ಕೇಳಿಬಂದಿದೆ. ಕಿರುಕುಳ ನೀಡುತ್ತಿರುವ ಸಂಬಂಧ ವಿಡಿಯೋ ಮತ್ತು ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಟಾರ್ಗೆಟ್ ರೀಚ್ ಆಗಲು ಫೇಲ್ ಆದ ಉದ್ಯೋಗಿಗಳ ವಿರುದ್ಧ ಕಂಪನಿಯ ಮೇಲಧಿಕಾರಿಗಳು ಅಮಾನವೀಯವಾಗಿ ಮತ್ತು ಕ್ರೂರವಾಗಿ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ನಾಯಿಗಳಂತೆ ನೌಕರರ ಕುತ್ತಿಗೆಗೆ ಬೆಲ್ಟ್ ಕಟ್ಟಿ ನಡೆಸುವುದು, ನೀರು ಕುಡಿಸುವುದು ಮತ್ತು ನೆಲದಿಂದ ಕೊಳೆತ ಹಣ್ಣುಗಳನ್ನು ನೆಕ್ಕುವಂತೆ ಮಾಡುವುದು ಮುಂತಾದ ಚಿತ್ರಹಿಂಸೆಗಳನ್ನು ಉದ್ಯೋಗಿಗಳಿಗೆ ನೀಡಲಾಗುತ್ತಿತ್ತು.
ಈ ಹಿಂಸೆ ಇಷ್ಟಕ್ಕೆ ನಿಲ್ಲುವುದಿಲ್ಲ, ಉದ್ಯೋಗಿಗಳು ತಮ್ಮ ಪ್ಯಾಂಟ್ ತೆಗೆದು ಪರಸ್ಪರ ತಮ್ಮ ಮರ್ಮಾಂಗಗಳನ್ನು ಹಿಡಿದುಕೊಳ್ಳಬೇಕು. ಅಷ್ಟೇ ಅಲ್ಲ, ಕೋಣೆಯಲ್ಲಿ ನಾಯಿ ಮೂತ್ರ ವಿಸರ್ಜಿಸುತ್ತಿರುವಂತೆ ವರ್ತಿಸುವುದು, ಯಾರೋ ಅಗಿಯುತ್ತಾ ಉಗುಳುವ ಹಣ್ಣಿನ ತುಂಡನ್ನು ಎತ್ತಿಕೊಳ್ಳುವುದು ಮತ್ತು ನೆಲದ ಮೇಲೆ ನಾಣ್ಯವನ್ನು ಇಟ್ಟು ಅದನ್ನು ನೆಕ್ಕುವುದು ಮುಂತಾದ ಚಿತ್ರಹಿಂಸೆಗೆ ಟಾರ್ಗೆಟ್ ರೀಚ್ ಆಗದ ಉದ್ಯೋಗಿಗಳು ಗುರಿಯಾಗುತ್ತಾರೆ. ಈ ರೀತಿ ಮಾಡಿದರೆ, ಟಾರ್ಗೆಟ್ ರೀಚ್ ಆಗದ ಉದ್ಯೋಗಿಗಳು ಭಯದಿಂದಲೇ ಟಾರ್ಗೆಟ್ ರೀಚ್ ಆಗಲು ಹೆಚ್ಚು ಶ್ರಮಿಸುತ್ತಾರೆ ಎಂದು ಕಂಪನಿಯ ಮೇಲಧಿಕಾರಿಗಳು ಭಾವಿಸಿದ್ದರು.
ಇನ್ನು ಈ ಹಿಂಸೆಯ ವಿರುದ್ಧ ಮಾತನಾಡಲು ಕೂಡ ಅನೇಕ ಜನರು ಭಯಪಡುತ್ತಾರೆ. ಮಾತನಾಡಿದವರಿಗೆ ಸಾಮಾನ್ಯವಾಗಿ ಬೆದರಿಕೆ ಹಾಕಲಾಗುತ್ತದೆ. ಈ ಕಂಪನಿಯ ಉದ್ಯೋಗಿಗಳಿಗೆ ಆರು ಸಾವಿರದಿಂದ ಎಂಟು ಸಾವಿರ ರೂಪಾಯಿಗಳವರೆಗೆ ಸಂಬಳ ನೀಡಲಾಗುತ್ತದೆ. ಟಾರ್ಗೆಟ್ ರೀಚ್ ಆದರೆ, ಬಡ್ತಿ ಮತ್ತು ದೊಡ್ಡ ಸಂಬಳ ನೀಡುವ ಭರವಸೆವನ್ನು ನೀಡಿ ಕಿರುಕುಳ ನೀಡಲಾಗುತ್ತಿತ್ತು.
ಕೊಚ್ಚಿಯ ಕಾಲೂರು ಜನತಾ ರಸ್ತೆಯಲ್ಲಿರುವ ಕಂಪನಿಯ ಶಾಖೆಯ ದೃಶ್ಯಗಳು ಇದೀಗ ಬೆಳಕಿಗೆ ಬಂದಿದ್ದು, ಭಾರಿ ಆಕ್ರೋಶಕ್ಕೆ ಗುರಿಯಾಗಿದೆ. ಈ ಸಂಸ್ಥೆಯ ವಿರುದ್ಧ ಈ ಹಿಂದೆಯೂ ದೂರುಗಳು ದಾಖಲಾಗಿವೆ. ಮಹಿಳೆಯರು ಕೂಡ ಈ ಶೋಷಣೆಗೆ ಒಳಗಾಗಿದ್ದಾರೆ ಎನ್ನಲಾಗಿದೆ.
ಮಾರ್ಕೆಟಿಂಗ್ ಸಂಸ್ಥೆಯ ವಿರುದ್ಧ ಕಿರುಕುಳದ ದೂರು ದಾಖಲಾಗಿರುವ ಹಿಂದೆ ಮಾಜಿ ಮ್ಯಾನೇಜರ್ ಕೈವಾಡವಿದೆ ಎಂದು ದೃಶ್ಯದಲ್ಲಿರುವ ಯುವಕ ಹೇಳಿಕೆ ನೀಡಿದ್ದಾನೆ. ಈ ದೂರನ್ನು ಪ್ಲಾನ್ ಮಾಡಿಕೊಂಡೇ ಮಾಡಲಾಗಿದೆ ಎಂದು ಸಂತ್ರಸ್ತ ಯುವಕ ಕಾರ್ಮಿಕ ಇಲಾಖೆ ಮತ್ತು ಪೊಲೀಸರಿಗೆ ತನ್ನ ಹೇಳಿಕೆ ನೀಡಿದ್ದಾನೆ. ಮಾರ್ಕೆಟಿಂಗ್ ಸಂಸ್ಥೆಯಿಂದ ವಜಾಗೊಳಿಸಲಾದ ಮಾಜಿ ಮ್ಯಾನೇಜರ್ ಮನಾಫ್ ಈ ದೃಶ್ಯಗಳನ್ನು ತಿಂಗಳ ಹಿಂದೆ ಚಿತ್ರೀಕರಿಸಿದ್ದಾರೆ. ಈ ದೃಶ್ಯಗಳನ್ನು ತನಗೆ ತಿಳಿಯದೆ ಬಿಡುಗಡೆ ಮಾಡಲಾಗಿದೆ ಮತ್ತು ತಿಂಗಳ ಹಿಂದೆ ಚಿತ್ರೀಕರಿಸಿದ ದೃಶ್ಯಗಳನ್ನು ಸಂಸ್ಥೆಯ ಮಾಲೀಕರನ್ನು ಕೆಟ್ಟದಾಗಿ ಬಿಂಬಿಸಲು ಪ್ರಸಾರ ಮಾಡಲಾಗುತ್ತಿದೆ ಎಂದು ಯುವಕ ಹೇಳಿದ್ದಾನೆ. ಅಲ್ಲದೆ, ತಾನು ಇನ್ನೂ ಅದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವುದಾಗಿ ಆ ಯುವಕ ಹೇಳಿದ್ದಾನೆ.
ಕೇರಳದ ಕಾರ್ಮಿಕ ಸಚಿವ ವಿ. ಶಿವನ್‌ಕುಟ್ಟಿ ಈ ಘಟನೆಯ ಕುರಿತು ಕಾರ್ಮಿಕ ಅಧಿಕಾರಿಯಿಂದ ವರದಿ ಕೇಳಿದ್ದಾರೆ. ಇದು ಎಲ್ಲಿಯೂ ಸಂಭವಿಸಬಾರದಂತಹ ಘಟನೆಯಾಗಿದ್ದು, ಚಿತ್ರಹಿಂಸೆಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಇಂತಹ ಚಿತ್ರಹಿಂಸೆ ಪುನರಾವರ್ತನೆಯಾಗಬಾರದು. ಘಟನೆಯ ತನಿಖೆ ಮತ್ತು ವರದಿ ಸಲ್ಲಿಸುವ ಜವಾಬ್ದಾರಿಯನ್ನು ಎರ್ನಾಕುಲಂ ಕಾರ್ಮಿಕ ಅಧಿಕಾರಿಗೆ ವಹಿಸಲಾಗಿದೆ. ತನಿಖಾ ವರದಿಯ ಆಧಾರದ ಮೇಲೆ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಯಾವುದೇ ಸಂಸ್ಥೆಯು ಈ ರೀತಿ ಕಾರ್ಯನಿರ್ವಹಿಸಲು ಅನುಮತಿಸಲಾಗುವುದಿಲ್ಲ. ಯಾವುದೇ ಕಾರ್ಮಿಕರ ವಿರುದ್ಧ ಇಂತಹ ಘಟನೆ ಪುನರಾವರ್ತನೆಯಾಗಬಾರದು ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ. (ಏಜೆನ್ಸೀಸ್)