ನೋಟ್​ಬುಕ್​ ಸಂಭ್ರಮಾಚರಣೆಗಾಗಿ ದಿಗ್ವೇಶ್​ ರಾಥಿಗೆ ಶೇ. 50 ದಂಡ; ಇನ್ನೊಂದು ಡಿಮೆರಿಟ್​ ಅಂಕ ಪಡೆದರೆ ನಿಷೇಧ!

web rathi
Published on

ಲಖನೌ: ಲಖನೌ ಸೂಪರ್​ಜೈಂಟ್ಸ್​ ತಂಡದ ಸ್ಪಿನ್ನರ್​ ದಿಗ್ವೇಶ್​ ರಾಥಿ "ನೋಟ್​ಬುಕ್​' ಸಂಭ್ರಮಾಚರಣೆಯನ್ನು ಮುಂಬೈ ವಿರುದ್ಧದ ಪಂದ್ಯದಲ್ಲೂ ಪುನರಾವರ್ತಿಸಿ ಐಪಿಎಲ್​ ನೀತಿ ಸಂಹಿತೆ ಉಲ್ಲಂಘಿಸಿರುವುದಕ್ಕಾಗಿ ಪಂದ್ಯ ಸಂಭಾವನೆಯ ಶೇ. 50 ಅಂದರೆ 3.75 ಲಕ್ಷ ರೂ. ದಂಡ ಶಿಕ್ಷೆಗೆ ಗುರಿಯಾಗಿದ್ದಾರೆ. ಜತೆಗೆ 2ನೇ ಬಾರಿ ನೀತಿಸಂಹಿತೆ ಉಲ್ಲಂಘಿಸಿದ್ದಕ್ಕೆ 2 ಡಿಮೆರಿಟ್​ ಅಂಕ ನೀಡಲಾಗಿದೆ.

ನಮನ್​ ಧೀರ್​ ವಿಕೆಟ್​ ಕಬಳಿಸಿದ ಬಳಿಕ ರಾಥಿ ಈ ರೀತಿ ಸಂಭ್ರಮಿಸಿದ್ದರು. ಈ ಮುನ್ನ ಪಂಜಾಬ್​ ವಿರುದ್ಧದ ಪಂದ್ಯದಲ್ಲಿ ಪ್ರಿಯಾಂಶ್​ ಆರ್ಯ ವಿಕೆಟ್​ ಕಬಳಿಸಿದ ಬಳಿಕ ಇದೇ ರೀತಿ ಸಂಭ್ರಮಿಸಿದ್ದಕ್ಕಾಗಿ ಪಂದ್ಯ ಸಂಭಾವನೆಯ ಶೇ. 25 ಅಂದರೆ 1.87 ಲಕ್ಷ ರೂ. ದಂಡ ಶಿಕ್ಷೆಗೆ ಗುರಿಯಾಗಿದ್ದರು.

ಕಳೆದ ಮೆಗಾ ಹರಾಜಿನಲ್ಲಿ ದಿಗ್ವೇಶ್​ ರಾಥಿ 30 ಲಕ್ಷ ರೂ.ಗೆ ಲಖನೌ ತಂಡ ಸೇರಿದ್ದರು. ಜತೆಗೆ ಐಪಿಎಲ್​ ಹೊಸ ನಿಯಮದಂತೆ ಪ್ರತಿ ಪಂದ್ಯಕ್ಕೆ ಬಿಸಿಸಿಐನಿಂದ 7.5 ಲಕ್ಷ ರೂ. ಸಂಭಾವನೆ ಪಡೆಯಲಿದ್ದಾರೆ. ಈ ಪೈಕಿ ಇದುವರೆಗೆ 5.62 ಲಕ್ಷ ರೂ. ದಂಡ ತೆತ್ತಿದ್ದಾರೆ. ಇದಲ್ಲದೆ ಅವರ ಒಟ್ಟು ಡಿಮೆರಿಟ್​ ಅಂಕ ಈಗ 3ಕ್ಕೇರಿದ್ದು, ಇನ್ನೊಂದು ಅಂಕ ಗಳಿಸಿದರೆ 1 ಪಂದ್ಯ ನಿಷೇಧ ಶಿಕ್ಷೆಗೂ ಗುರಿಯಾಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net