

ನವದೆಹಲಿ: ಇಷ್ಟುದಿನ ಭಾರತದ ಬಗ್ಗೆ ಹಿಂದೊಂದು, ಮುಂದೊಂದು ಮಾತನಾಡುತ್ತಿದ್ದ ಯೂಕ್ರೇನ್ ಇದೀಗ ಭಾರತದ ಮನವೊಲಿಕೆಗೆ ಮುಂದಾಗಿದೆ. ಯೂಕ್ರೇನ್ ಉಪ ವಿದೇಶಾಂಗ ಸಚಿವೆ ಎಮಿನಿ ಝಪರೋವಾ ನಾಲ್ಕು ದಿನಗಳ ವಿಶೇಷ ಭೇಟಿಗೆ ಆಗಮಿಸಿದ್ದು "ಭಾರತ ವಿಶ್ವಗುರು ವಿನ ಸ್ಥಾನ ಅಲಂಕರಿಸಿದೆ" ಎಂದಿದ್ದಾರೆ.
ಈ ಸಂದರ್ಭದಲ್ಲಿ ಅವರು ಟ್ವೀಟ್ ಕೂಡ ಮಾಡಿದ್ದು “ಹಲವು ಋಷಿಗಳು, ಸಂತರು ಮತ್ತು ಗುರುಗಳಿಗೆ ಜನ್ಮ ನೀಡಿದ ಭೂಮಿಗೆ ಭೇಟಿ ನೀಡಲು ಸಂತೋಷವಾಗಿದೆ. ಇಂದು ಭಾರತ ವಿಶ್ವಗುರು, ಜಾಗತಿಕ ಶಿಕ್ಷಕ ಮತ್ತು ತೀರ್ಪುಗಾರನಾಗಲು ಬಯಸಿದೆ. ನಮ್ಮ ವಿಷಯದಲ್ಲಿ, ನಮಗೆ ಸ್ಪಷ್ಟವಾದ ಚಿತ್ರಣ ಸಿಕ್ಕಿದೆ. ಮುಗ್ಧ ಬಲಿಪಶುವಿನ ವಿರುದ್ಧ ಆಕ್ರಮಣಕಾರಿ ರಷ್ಯಾ ನಿಂತಿದೆ. ನಿಜವಾದ ವಿಶ್ವಗುರುವಿಗೆ ಉಕ್ರೇನ್‌ಗೆ ಬೆಂಬಲ ನೀಡುವುದು ಮಾತ್ರ ಸರಿಯಾದ ಆಯ್ಕೆಯಾಗಿದೆ" ಎಂದು ಸೋಮವಾರ ತಮ್ಮ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಯೂಕ್ರೇನ್ನ ಸಚಿವರೊಬ್ಬರು ಇದೇ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡುತ್ತಿರುವುದು ವಿಶೇಷ. ರಷ್ಯಾ- ಯೂಕ್ರೇನ್ ನಡುವೆ ಯುದ್ಧ ಆರಂಭವಾದ ನಂತರ ಇದೇ ಮೊದಲು ಪೂರ್ವ ಯುರೋಪ್ನ ರಾಷ್ಟ್ರದ ಪ್ರತಿನಿಧಿಯೊಬ್ಬರು ಭಾರತಕ್ಕೆ ಆಗಮಿಸಿದ್ದಾರೆ. ಎಮಿನಿ ಝಪರೋವಾ ಮೊದಲಿಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಸಂಜಯ್ ವರ್ಮಾ ಅವರೊಂದಿಗೆ ಚರ್ಚೆ ನಡೆಸಿದರು. ಈ ವೇಳೆ ಭಾರತದ ಸಾಧನೆಯನ್ನು ಹಾಡಿ ಹೊಗಳಿದ್ದಾರೆ.
ಸಂಜಯ್ ವರ್ಮಾ ಅವರೊಂದಿಗಿನ ಅವರ ಭೇಟಿಯ ಸಮಯದಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಚರ್ಚಿಸಿದ್ದು ಯೂಕ್ರೇನ್‌ನಲ್ಲಿನ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಹಾಗೂ ಅವರಿಬ್ಬರ ಆಸಕ್ತಿಯ ಜಾಗತಿಕ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.
ಕಳೆದ ವರ್ಷ ಫೆಬ್ರವರಿಯಲ್ಲಿ ಸಂಘರ್ಷ ಪ್ರಾರಂಭವಾದಾಗಿನಿಂದ, ಪ್ರಧಾನಿ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಹಲವಾರು ಬಾರಿ ಮಾತನಾಡಿದರು.
ಕಳೆದ ವರ್ಷ ಅಕ್ಟೋಬರ್ 4 ರಂದು ಝೆಲೆನ್ಸ್ಕಿಯೊಂದಿಗಿನ ದೂರವಾಣಿ ಸಂಭಾಷಣೆಯಲ್ಲಿ ಮೋದಿ ಅವರು "ಯಾವುದೇ ಮಿಲಿಟರಿ ಪರಿಹಾರ" ಸಾಧ್ಯವಿಲ್ಲ. ಶಾಂತಿ ಪ್ರಯತ್ನಕ್ಕೆ ಕೊಡುಗೆ ನೀಡಲು ಭಾರತ ಸಿದ್ಧವಾಗಿದೆ ಎಂದು ಹೇಳಿದ್ದರು. ಯೂಕ್ರೇನ್ ಮೇಲಿನ ರಷ್ಯಾದ ಆಕ್ರಮಣವನ್ನು ಭಾರತ ಇನ್ನೂ ಸ್ಪಷ್ಟವಾಗಿ ಖಂಡಿಸಿಲ್ಲ. ರಾಜತಾಂತ್ರಿಕತೆ ಮತ್ತು ಮಾತುಕತೆಯ ಮೂಲಕ ಬಿಕ್ಕಟ್ಟನ್ನು ಪರಿಹರಿಸಬೇಕು ಎಂದು ಭಾರತದ ಅಧಿಕೃತ ಹೇಳಿಕೆಯಾಗಿದೆ. (ಏಜೆನ್ಸೀಸ್)