ಕರೊನಾಗೆ ಈ ಲಸಿಕೆ ತಗೊಂಡ್ರೆ ಮಂಗನಂತೆ ಬದಲಾಗ್ತರಂತೆ! ಭಾರೀ ಕೋಲಾಹಲ ಎಬ್ಬಿಸಿದೆ ಈ ಸುದ್ದಿ

Corona
Published on

ಲಂಡನ್​: ಮಹಾಮಾರಿ ಕರೊನಾಗೆ ಔಷಧಿ ಕಂಡುಹಿಡಿಯುವ ಪ್ರಯತ್ನ ಜಗತ್ತಿನೆಲ್ಲೆಡೆ ನಡೆಯುತ್ತಿರುವ ನಡುವೆಯೇ ಔಷಧ ವಿಚಾರವಾಗಿ ರಷ್ಯಾ ಮತ್ತು ಬ್ರಿಟನ್ ವಾಗ್ವಾದವೊಂದು ಶುರುವಾಗಿದೆ.

ಹೌದು, ಆಕ್ಸ್​ಫರ್ಡ್​ ಯೂನಿವರ್ಸಿಟಿ ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ ಕರೊನಾ ಲಸಿಕೆಯು ಜನರನ್ನು ಮಂಗಗಳಾಗಿ ಬದಲಾಯಿಸಲಿದೆ ಎಂದು ರಷ್ಯಾದಲ್ಲಿ ಭಾರಿ ಪ್ರಚಾರ ಮಾಡಲಾಗುತ್ತಿದ್ದು, ಇದು ಬ್ರಿಟನ್​ ಕೆಂಗಣ್ಣಿಗೆ ಗುರಿಯಾಗಿದೆ.

ಯುಕೆಯಲ್ಲಿ ತಯರಾಗುವ ಯಾವುದೇ ಲಸಿಕೆ ತುಂಬಾ ಅಪಾಯಕಾರಿ ಮತ್ತು ಚಿಂಪಾಂಜಿ ವೈರಸ್​ ಅನ್ನು ಬಳಸಲಾಗುತ್ತದೆ ಎಂದು ಸಾರುವ ಅನೇಕ ಚಿತ್ರಗಳು ರಷ್ಯಾದಲ್ಲಿ ಹರಿದಾಡುತ್ತಿದೆ. ಅಲ್ಲದೆ, ರಷ್ಯಾದ ಮಾಧ್ಯಮಗಳು ಸಹ ವಿಶೇಷ ಕಾರ್ಯಕ್ರಮಗಳಲ್ಲಿ ಬ್ರಿಟನ್​ ಲಸಿಕೆ ವಿರುದ್ಧ ಪ್ರಚಾರ ಮಾಡುತ್ತಿವೆ.

ಇನ್ನು ಬ್ರಿಟನ್​ ಪ್ರಧಾನಿ ಬೋರಿಸ್​ ಜಾನ್ಸನ್ ಅವರ ದೇಹಕ್ಕೆ ಮಂಗದ ಮುಖವನ್ನು ಎಡಿಟ್​ ಮಾಡಿ ಅಸ್ಟಾಜೆನೆಕಾ (ಲಸಿಕೆ ತಯಾರಿಸುತ್ತಿರುವ ಕಂಪನಿ) ಹೆಸರಿನ ಫೈಲ್​ ಹಿಡಿದು ನಡೆದು ಬರುತ್ತಿರುವ ಫೋಟೋವನ್ನು ಹರಿಬಿಡಲಾಗಿದೆ. ಮತ್ತೊಂದು ಫೋಟೋದಲ್ಲಿ ಅಮೆರಿಕ ಪ್ರಖ್ಯಾತ ಅಂಕಲ್​ ಸ್ಯಾಮ್​ ಪೋಸ್ಟರ್​ ಬಳಸಿಕೊಂಡು "ನೀವು ಮಂಕಿ ಲಸಿಕೆ ತೆಗೆದುಕೊಳ್ಳಬೇಕೆಂದು ನಾನು ಬಯಸುತ್ತೇನೆ" ಎಂದು ಹೇಳುತ್ತಿರುವಂತೆ ಚಿತ್ರಿಸಿದ್ದಾರೆ. ಮತ್ತೊಂದು ಚಿತ್ರದಲ್ಲಿ ಕಿಂಗ್​ಕಾಂಗ್​ ಲಸಿಕೆಯನ್ನು ವೆಲ್ಡಿಂಗ್​ ಮಾಡುತ್ತಿದ್ದು, ಅದಕ್ಕೆ ಯೋಚನೆ ಮಾಡಬೇಡಿ ಮಂಗದ ಲಸಿಕೆ ಉತ್ತಮ ಎಂದು ಅಡಿಬರಹ ಬರೆಯಲಾಗಿದೆ. ಹೀಗೆ ಸಾಕಷ್ಟು ಚಿತ್ರಗಳನ್ನು ಹರಿಬಿಡಲಾಗಿದೆ.

ಇನ್ನು ರಷ್ಯಾ ತನ್ನ ಸ್ಪುಟ್ನಿಕ್​ ವಿ ಲಸಿಕೆಯ ಮಾರುಕಟ್ಟೆಯನ್ನು ಭಾರತ ಮತ್ತು ಬ್ರೆಜಿಲ್​ನಲ್ಲಿ ವಿಸ್ತರಿಸಲು ಆಕ್ಸ್​ಫರ್ಡ್​ ಲಸಿಕೆಯನ್ನು ಗುರಿಯಾಗಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಾತನಾಡಿರುವ ಬ್ರಿಟನ್​ ವಿದೇಶಾಂಗ ಕಾರ್ಯದರ್ಶಿ ಡಾಮೊನಿಕ್​ ರಾಬ್​ ಇದು ನಿಜಕ್ಕೂ ಶೋಚನೀಯ ಎಂದು ರಷ್ಯಾ ನಡೆಯನ್ನು ಜರಿದಿದ್ದಾರೆ. ಇದು ತಪ್ಪು ಮಾಹಿತಿ ಹಾಗೂ ಅಪಪ್ರಚಾರವಾಗಿದ್ದು, ಇದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತೇವೆಂದು ಬ್ರಿಟನ್​ ಎಚ್ಚರಿಸಿದೆ.

ಉತ್ತಮ ಗುಣಮಟ್ಟದ ವಿಜ್ಞಾನ ಮತ್ತು ಸಂಶೋಧನೆಯಲ್ಲಿ ಯುಕೆ ವಿಶ್ವವಿಖ್ಯಾತ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ನಾವು ಒಂದು ರೀತಿಯಲ್ಲಿ ಅಂತಾರಾಷ್ಟ್ರೀಯ ಮಾನದಂಡವಾಗಿದೆ. ಆದರೆ, ರಷ್ಯಾ ತಪ್ಪು ಮಾಹಿತಿ ಹರಡುತ್ತಿದೆ ಎಂಬ ಸರಣಿ ದಾಖಲೆ ನಮ್ಮ ಬಳಿ ಇದೆ ಎಂದು ಡಾಮೊನಿಕ್​ ರಾಬ್​ ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net