ಮಿಲನಕ್ಕಾಗಿ ಸಂಗಾತಿ ಹುಡುಕುತ್ತಿದ್ದ ಜಿಂಕೆ ಮುಂದೆ ನಿಂತು ಸೆಲ್ಫಿಗೆ ಯತ್ನ: ಯುವತಿ ಗತಿ ಏನಾಯ್ತು ನೋಡಿ!

Deer
Published on

ಲಂಡನ್​: ಸಂಗಾತಿ ಅರಸಿ ಪಾರ್ಕಿನಲ್ಲಿ ಅಲೆದಾಡುತ್ತಿದ್ದ ಕಾಡು ಜಿಂಕೆಯ ಬಳಿ ಸೆಲ್ಫಿ ತೆಗೆಯಲು ಹೋದ ಯುವತಿಯೊಬ್ಬಳ ಮೇಲೆ ಜಿಂಕೆ ದಾಳಿ ಮಾಡಿರುವ ಘಟನೆ ಸೌಥ್​ವೆಸ್ಟ್​ ಲಂಡನ್​ನ ರಿಚ್​ಮಂಡ್​ ಜಿಂಕೆ ಪಾರ್ಕಿನಲ್ಲಿ ನಡೆದಿದೆ.

ಆಕಾಶ ನೀಲಿ ಬಣ್ಣದ ಉಡುಪು ಧರಿಸಿ, ತಲೆಯಲ್ಲಿ ಹೂ ಮುಡಿದ ಯುವತಿಯೊಬ್ಬಳು ತನ್ನ ಇನ್​ಸ್ಟಾಗ್ರಾಂ ಫೋಟೋಗಾಗಿ ಅಕ್ಟೋಬರ್​ 11ರಂದು ಪಾರ್ಕಿನಲ್ಲಿ ಜಿಂಕೆಯ ಮುಂದೆ ನಿಂತು ಸೆಲ್ಫಿ ತೆಗೆಯಲು ಮುಂದಾಗಿದ್ದಳು. ಮೊದಲೇ ಸಂತಾನೋತ್ಪತಿ ಕಾಲವಾಗಿದ್ದರಿಂದ ತನ್ನ ಸಂಗಾತಿಗಾಗಿ ಅಲೆದಾಡುತ್ತಾ ಒಂಟಿ ಜಿಂಕೆ ತುಂಬಾ ದಣಿದಿತ್ತು. ಯುವತಿ ಸೆಲ್ಫಿಗಾಗಿ ಯತ್ನಿಸುತ್ತಿದ್ದಂತೆ ಆಕೆಯನ್ನು ನೋಡಿದ ಜಿಂಕೆ ಕೋಪದಿಂದಲೇ ಮುಂದಿನ ತನ್ನೆರಡು ಕಾಲುಗಳನ್ನು ಮೇಲೆತ್ತಿ ಯುವತಿಯ ಹಿಂಬದಿಗೆ ಗುದ್ದಿ ಮುಂದಕ್ಕೆ ಬೀಳಿಸಿದೆ.

ಸದ್ಯ ಹತ್ತಿರದಲ್ಲೇ ರಾಯಲ್ ಪಾರ್ಕಿನ ಪೊಲೀಸರು ಇದ್ದುದ್ದರಿಂದ ಅನಾಹುತವನ್ನು ತಪ್ಪಿಸಿದ್ದಾರೆ. ಆದರೂ ಯುವತಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇದರ ಬೆನ್ನಲ್ಲೇ ಎಚ್ಚರಿಕೆ ನೀಡಿರುವ ಪೊಲೀಸರು ಡಿಸ್ನಿ ಫೌನ್​ನಲ್ಲಿ ಬರುವ ಬಿಂಬಿ​ ಪಾತ್ರದಂತೆ ತುಂಬಾ ಮುದ್ದು ಪ್ರಾಣಿ ಅಂದುಕೊಂಡಿದ್ದೀರಾ? ಕೋಪ ಬಂದರೆ ಗಾಯಗೊಳಿಸಲಿದೆ. ಹೀಗಾಗಿ ಸುಮಾರು 50 ಮೀಟರ್​ ಅಂತರವನ್ನು ಕಾಯ್ದುಕೊಳ್ಳುವಂತೆ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಸಿದ್ದಾರೆ.

ಯಾರಾದರೂ ಸರಿ ಮೊದಲು ಪ್ರಕೃತಿಗೆ ಗೌರವ ಕೊಡಬೇಕು ಎಂದು ಸಾಕಷ್ಟು ಮಂದಿ ಯುವತಿಯ ವಿರುದ್ಧ ಕಿಡಿಕಾರಿದ್ದಾರೆ. ಇನ್ನು ಕೆಲವರು ಸಂತಾನೋತ್ಪತಿ ಕಾಲದಲ್ಲಿ ಜಿಂಕೆ ಪಾರ್ಕ್​ನ್ನು ತೆರೆಯಲೇಬಾರದು ಎಂದು ಯುವತಿಯ ಬೆನ್ನಿಗೆ ನಿಂತಿದ್ದಾರೆ.

ಸಂತಾನೋತ್ಪತಿ ಕಾಲದಲ್ಲಿ ಸಾವಿರಾರು ಜಿಂಕೆಗಳು ಪಾರ್ಕಿನ ಸುತ್ತ ಸುತ್ತುತ್ತಿರುತ್ತವಂತೆ. ಈ ವೇಳೆ ಒಂದು ಹೆಣ್ಣು ಜಿಂಕೆಗಾಗಿ ಎರಡು ಜಿಂಕೆಗಳು ಎದುರಾದರೆ, ಎರಡು ಸಹ ಕೊಂಬುಗಳಲ್ಲಿ ಲಾಕ್​ ಮಾಡುವ ಮೂಲಕ ಸಂಗಾತಿಗಾಗಿ ಯುದ್ಧಕ್ಕೆ ಮುಂದಾಗುತ್ತವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net