

ನವದೆಹಲಿ: ತಮಿಳುನಾಡು ಸಿಎಂ ಪುತ್ರ, ಅಲ್ಲಿನ ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಕುರಿತು ನೀಡಿದ್ದ ಅವಹೇಳನಕಾರಿ ಹೇಳಿಕೆ ದೇಶಾದ್ಯಂತ ವಿವಾದ ಸೃಷ್ಟಿಸಿದೆ. ಉದಯನಿಧಿ ಹೇಳಿಕೆಯನ್ನು ಆಕ್ಷೇಪಿಸಿ ಹಿಂದೂಗಳಿಂದ ಆಕ್ರೋಶ ವ್ಯಕ್ತವಾಗಿದ್ದು, ಇದೀಗ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಕೂಡ ಪರೋಕ್ಷವಾಗಿ ಇದರ ಕುರಿತು ದನಿಗೂಡಿಸಿದ್ದಾರೆ.
ಜಿ-20 ಶೃಂಗಸಭೆ ಸಲುವಾಗಿ ಭಾರತಕ್ಕೆ ಆಗಮಿಸಿರುವ ಬ್ರಿಟನ್ ಪ್ರಧಾನಿ, ಇನ್ಫೊಸಿಸ್ನ ಸುಧಾಮೂರ್ತಿ- ನಾರಾಯಣಮೂರ್ತಿ ದಂಪತಿಯ ಅಳಿಯ ರಿಷಿ ಸುನಕ್, ನಾನೊಬ್ಬ ಹೆಮ್ಮೆಯ ಹಿಂದೂ ಎಂದು ಹೇಳಿಕೊಂಡಿದ್ದಾರೆ. ಮಾಧ್ಯಮದವರ ಜತೆ ಮಾತನಾಡಿದ ಅವರು, ನಾನು ಹಿಂದೂವಾಗಿಯೇ ಬೆಳೆದಿದ್ದೇನೆ, ಅದಕ್ಕೇ ಹೀಗಿದ್ದೇನೆ ಎಂದಿದ್ದಾರೆ.
ಇತ್ತೀಚೆಗೆ ರಕ್ಷಾ ಬಂಧನವನ್ನೂ ಆಚರಿಸಿದ್ದೇನೆ. ಸಹೋದರಿಯರು ರಾಖಿ ಕಟ್ಟಿದ್ದಾರೆ. ಕಾರಣಾಂತರದಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಲು ಆಗಿರಲಿಲ್ಲ. ಆದರೆ ಭಾರತದಲ್ಲಿ ಇರುವ ಈ ಸಮಯದಲ್ಲಿ ದೇವಸ್ಥಾನಕ್ಕೂ ಭೇಟಿ ನೀಡಲಿದ್ದೇನೆ, ಇದು ನನಗೆ ಮುಖ್ಯ ಸಂಗತಿ ಎಂದೂ ಅವರು ಹೇಳಿದ್ದಾರೆ.
ದೇಶಕ್ಕೆ ಭಾರತ ಎಂದು ಹೆಸರಿಡುವ ಕುರಿತು, ವಸುಧೈವ ಕುಟುಂಬಕಂ ಧ್ಯೇಯದೊಂದಿಗೆ ನಡೆಯಲಿರುವ ಜಿ-20 ಶೃಂಗಸಭೆ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಇದೊಂದು ಒಳ್ಳೆಯ ಯೋಚನೆ ಎಂದಿದ್ದಾರೆ. ಒಂದು ಕುಟುಂಬ ಎಂದು ಹೇಳಿದಾಗ ಪ್ರಧಾನಿ ಮೋದಿ ಅವರು ವಿವರಿಸಿದಂತೆ ಯುಕೆ ಮತ್ತು ಭಾರತ ಮಧ್ಯೆ ನಾನು ಒಂದು ಜೀವಂತ ಸೇತು. ಭಾರತ ಮೂಲದ ನನ್ನಂಥ 20 ಲಕ್ಷ ಮಂದಿ ಯುಕೆನಲ್ಲಿದ್ದಾರೆ, ನನ್ನ ಪೂರ್ವಜರಿರುವ ಭಾರತಕ್ಕೆ ನಾನು ಈಗ ಬ್ರಿಟನ್ ಪ್ರಧಾನಿಯಾಗಿ ಆಗಮಿಸಿ ಭಾಗಿ ಆಗುತ್ತಿರುವುದು ನನಗೆ ವಿಶೇಷ ಅನಿಸುತ್ತಿದೆ ಎಂದಿದ್ದಾರೆ.