

UK Man : ರಸ್ತೆಗಳಲ್ಲಿನ ಗುಂಡಿಗಳು ವಾಹನ ಸವಾರರಿಗೆ ತುಂಬಾ ತೊಂದರೆ ಉಂಟುಮಾಡುತ್ತವೆ ಎಂಬುದು ಎಲ್ಲರಿಗೂ ಗೊತ್ತಿದೆ. ರಸ್ತೆಗುಂಡಿಗಳಲ್ಲಿ ಬಿದ್ದು ಕೆಲವರು ಗಾಯಗೊಂಡರೆ, ಇನ್ನು ಕೆಲವರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ನಮ್ಮ ದೇಶದಲ್ಲಿ ಇಂತಹ ಘಟನೆಗಳು ಸಾಮಾನ್ಯ. ಹೀಗಾಗಿ ರಸ್ತೆಗುಂಡಿಗಳನ್ನು ಸರಿಪಡಿಸುವಂತೆ ಆಗ್ರಹಿಸಿ ಅನೇಕರು ಪ್ರತಿಭಟನೆ ನಡೆಸುವುದನ್ನು ನೀವು ನೋಡಿರುತ್ತೀರಿ.
ಈ ಹಿಂದೆ ಕೇರಳದಲ್ಲಿ ಯುವತಿಯೊಬ್ಬಳು ತನ್ನ ಪ್ರೀವೆಡ್ಡಿಂಗ್ ಶೂಟ್ ಅನ್ನು ರಸ್ತೆಗುಂಡಿಯ ಬಳಿ ಮಾಡಿಸಿ, ವಿನೂತನವಾಗಿ ಪ್ರತಿಭಟನೆ ನಡೆಸಿದ್ದಳು. ಈ ವೇಳೆ ಆಕೆಗೆ ನೆಟ್ಟಿಗರು ಬಹುಪರಾಕ್ ಹಾಕಿದ್ದರು. ಅದೇ ರೀತಿ, ರಸ್ತೆಗಳಲ್ಲಿನ ಗುಂಡಿಗಳಿಂದ ಬೇಸತ್ತ ಯುವಕನೊಬ್ಬ ಇದೀಗ ವಿನೂತನವಾಗಿ ಪ್ರತಿಭಟಿಸಿದ್ದಾನೆ. ರಸ್ತೆ ಗುಂಡಿಯಲ್ಲಿ ಸಂಗ್ರಹವಾದ ನೀರಿನಲ್ಲಿ ಮಾನವನಂತಹ ನಕಲಿ ಆಕೃತಿಯನ್ನು ತಲೆಕೆಳಗಾಗಿ ಇರಿಸಿ ರಸ್ತೆಯ ಕಳಪೆ ಸ್ಥಿತಿಯನ್ನು ಎತ್ತಿ ತೋರಿಸಿದ್ದಾನೆ. ಅಚ್ಚರಿಯ ಸಂಗತಿ ಏನೆಂದರೆ, ಈ ಘಟನೆ ನಡೆದಿರುವುದು ಲಂಡನ್‌ನಲ್ಲಿ. ಇದಕ್ಕೆ ಸಂಬಂಧಿಸಿದ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ.
ರಸ್ತೆಗಳ ಕಳಪೆ ಸ್ಥಿತಿಯ ಬಗ್ಗೆ ಗಮನ ಸೆಳೆಯಲು ನಕಲಿ ಗೊಂಬೆಯನ್ನು ತಲೆಯನ್ನು ನೀರಿನಲ್ಲಿ ಮುಳುಗಿಸಿ ಕಾಲುಗಳನ್ನು ಮೇಲಕ್ಕೆತ್ತಿ ಗುಂಡಿಯಲ್ಲಿ ಇಟ್ಟಿದ್ದಾನೆ. ಜೀನ್ಸ್ ಪ್ಯಾಂಟ್‌ಗೆ ಬಟ್ಟೆಯ ತುಂಡುಗಳನ್ನು ತುಂಬಿಸಿ, ಸ್ಥಿರತೆಯನ್ನು ಕಾಪಾಡಿಕೊಳ್ಳಲು ಕೋಲುಗಳನ್ನು ಅದರೊಳಗೆ ಸೇರಿಸಿದ್ದಾನೆ. ಹೀಗಾಗಿ ಮೊದಲು ನೋಡಿದವರು ಮನುಷ್ಯನೇ ಆ ರೀತಿ ನಿಂತಿದ್ದಾನೆ ಅನಿಸುತ್ತೆ. ಆದರೆ, ರಸ್ತೆಗುಂಡಿಯಲ್ಲಿ ಗೊಂಬೆಯನ್ನು ತಲೆಕೆಳಗಾಗಿ ಇಟ್ಟಿದ್ದೇನೆ ಸ್ವತಃ ಆ ಯುವಕನೇ ಹೇಳಿಕೊಂಡಿದ್ದಾನೆ. ಅದಕ್ಕೆ ಕಾರಣ ಯುವಕನಿರುವ ಸಫೊಲ್ಕ್ ಗಡಿಯ ಸಮೀಪವಿರುವ ಕೇಂಬ್ರಿಡ್ಜ್‌ಶೈರ್‌ನ ಕ್ಯಾಸಲ್ ಕ್ಯಾಂಪ್ಸ್ ಹಳ್ಳಿಯ ಹ್ಯಾವರ್‌ಹಿಲ್ ರಸ್ತೆಯಲ್ಲಿ ಗುಂಡಿಗಳು ವ್ಯಾಪಕವಾಗಿ ಹರಡಿದ್ದು, ತೀವ್ರ ತೊಂದರೆಯಾಗುತ್ತಿದೆ. ಹೀಗಾಗಿ ಸರ್ಕಾರದ ಗಮನ ಸೆಳೆಯಲು ಈ ರೀತಿ ಮಾಡಿದ್ದಾನೆ.
ಆ ಯುವಕನ ಹೆಸರು ಜೇಮ್ಸ್. ರಸ್ತೆಯಲ್ಲಿರುವ ಗುಂಡಿ ಎಂಟು ತಿಂಗಳಿನಿಂದಲೂ ಇದೆ. ಇದರಿಂದ ವಾಹನ ಸವಾರರಿಗೆ ತೊಂದರೆಯಾಗಿದೆ. ಇದುವರೆಗೂ ಯಾವುದೇ ಅಧಿಕಾರಿಗಳು ಗಮನ ಹರಿಸದ ಕಾರಣ ಅವರು ಹೀಗೆ ಮಾಡಿದ್ದೇನೆ. ಇದೀಗ ಈ ವಿಷಯ ಅಧಿಕಾರಿಗಳ ಗಮನಕ್ಕೆ ಬಂದಿದೆ. ಕೇಂಬ್ರಿಡ್ಜ್‌ಶೈರ್ ಕೌಂಟಿ ಕೌನ್ಸಿಲ್ ಹೆದ್ದಾರಿ ಅಧಿಕಾರಿಗಳಲ್ಲಿ ಒಬ್ಬರು ರಸ್ತೆಯನ್ನು ಪರಿಶೀಲಿಸುತ್ತೇವೆ ಮತ್ತು ಅಗತ್ಯವಿದ್ದರೆ ದುರಸ್ತಿ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಜೇಮ್ಸ್ ತಿಳಿಸಿದ್ದಾನೆ. (ಏಜೆನ್ಸೀಸ್)