

ಚಿತ್ತವೃತ್ತಿನಿರೋಧಕ್ಕೆ ಶಿವಯೋಗ ಅತ್ಯಂತ ಮಹತ್ವವಾದ ಸಾಧನ. ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರಿಂದ ಸ್ಥಾಪಿತವಾದ ಶಕ್ತಿ ವಿಶಿಷ್ಟಾದ್ವೈತ ಧರ್ಮ, ಆತ್ಮಶಕ್ತಿ ಮತ್ತು ಲಿಂಗ-ಅಂಗಗಳ ಸಾಮರಸ್ಯದ ವಿದ್ಯೆಯನ್ನು ಬೋಧಿಸುವ ಮುಖೇನ ಮಾನವನನ್ನು ಮಹಾ ದೇವನನ್ನಾಗಿಸುತ್ತದೆ. ಇಂಥ ಶಿವಯೋಗತ್ವ ಪಡೆದು ಈ ನಾಡನ್ನು ಬೆಳಗಿದವರಲ್ಲಿ ಉಜ್ಜಯಿನಿ ಪೀಠದ ಲಿಂ|| ಶ್ರೀ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಭಗವತ್ಪಾದರೂ ಒಬ್ಬರಾಗಿದ್ದಾರೆ.
ಉಜ್ಜಯಿನಿ ಪೀಠದ 107ನೇ ಜಗದಾಚಾರ್ಯರಾಗಿ ತನ್ನ ಯೋಗಸಾಧನೆಯ ಮುಖೇನ ಅನೇಕ ಪವಾಡಸದೃಶ ಕಾರ್ಯಗಳನ್ನು ಕೈಗೊಂಡು ಭಕ್ತರ ಮನದಲ್ಲಿ ನೆಲೆನಿಂತ ಕಾರಣಿಕ ಯೋಗ ಪುರುಷರೂ ಆಗಿದ್ದಾರೆ. ಶ್ರೀ ಭಗವತ್ಪಾದರು ಚಿತ್ರದುರ್ಗ ಜಿಲ್ಲೆಯ ಬಂಗಾರನಾಯಕನಹಳ್ಳಿ ಹಿರೇಮಠದ ವೇ|| ಚನ್ನಬಸವಯ್ಯ ಮತ್ತು ಸೌ|| ಗುರುಸಿದ್ದಮ್ಮನವರ ಪುಣ್ಯ ಉದರದಲ್ಲಿ ದಿನಾಂಕ: 01-02-1890ರಂದು ಜನಿಸಿ, 8ನೇ ವಯಸ್ಸಿನಲ್ಲಿಯೇ ಇಷ್ಟಲಿಂಗ ದೀಕ್ಷೆ, ಧಮೋಪದೇಶ ಪಡೆದು 1906ರಲ್ಲಿ ಶ್ರೀ ಉಜ್ಜಯಿನಿ ಸದ್ಧರ್ಮ ಪೀಠದ ಅಂದಿನ ಜಗದ್ಗುರುಗಳಾದ ಶ್ರೀ ಮರುಳಸಿದ್ಧ ಶಿವಾಚಾರ್ಯ ಭಗವತ್ಪಾದರ ಕೃಪಾಕಾರುಣ್ಯದ ದೃಷ್ಟಿಗೆ ಒಳಗಾಗಿ, ತನ್ನ 16ನೇ ವಯಸ್ಸಿನಲ್ಲಿಯೇ ಉಜ್ಜಯಿನಿ ಸದ್ಧರ್ಮ ಪೀಠವೇರಿದ ಮಹಾಮಹಿಮಶಾಲಿಗಳಾಗಿದ್ದಾರೆ.
ಪತಂಜಲಿ ಮಹರ್ಷಿಯ ಯೋಗ ಶಾಸ್ತ್ರ, ಷಡ್ದರ್ಶನಗಳ ಅಧ್ಯಯನ ಮತ್ತು ಶಿವಯೋಗಿ ಶಿವಾಚಾರ್ಯರ ಸಿದ್ಧಾಂತ ಶಿಖಾಮಣಿ ಹಾಗೂ ಭಗವದ್ಗೀತೆಯಂಥ ವಿಷಯಗಳ ಚಿಂತನೆಗಳೊಂದಿಗೆ, ಪ್ರಸಿದ್ಧ ವೀರಶೈವ ವಿದ್ವಾಂಸರಾದ ಗುರು ಸಿದ್ದಶಾಸ್ತ್ರಿ, ಚಂದ್ರಶೇಖರ ಶಾಸ್ತ್ರಿ, ಕಾಶಿ ವೀರಭದ್ರಶಾಸ್ತ್ರಿ, ಉಮಚಗಿ ಶಂಕರ ಶಾಸ್ತ್ರಿ ಮುಂತಾದವರಿಂದ ವೇದ- ಆಗಮ-ಜ್ಯೋತಿಷ್ಯ ವಿದ್ಯೆ, ಹಡಗಲಿ ಪುರಾಣಿಕ ಮಠದ ವಿರೂಪಾಕ್ಷ ಪಂಡಿತರಿಂದ ಸಂಗೀತ ಕಲಿತು, ಶಿವಕಲೆಯನ್ನು ಕರಗತ ಮಾಡಿಕೊಂಡ ಮಹಾ ಮೇಧಾವಿಗಳು. ಶ್ರೀ ಉಜ್ಜಯಿನಿ ಪರಿಸರದ ಕೆರೆ-ಬಾವಿಗಳ ನೀರಿನಲ್ಲಿ ಪದ್ಮಾಸನ ಹಾಕಿ ಮಂತ್ರಯೋಗ- ಹಠಯೋಗ- ಲಯಯೋಗ - ರಾಜಯೋಗ ಹಾಗೂ ಶಿವಯೋಗವನ್ನು ಸಾಧಿಸಿ ಜೀವನದ ಕಷ್ಟ-ನಷ್ಟಗಳಿಗೆ ಸಿಲುಕಿ ಬಾಯಿ ಬಿಡುವ ಭಕ್ತರಿಗೆ ತಮ್ಮ ತಪಃಶಕ್ತಿಯನ್ನು ಅನುಗ್ರಹಿಸುತ್ತಿದ್ದ ಅಪ್ರತಿಮ ಶಿವಯೋಗಿಗಳು.
ಶ್ರೀಮದ್ರಂಭಾಪುರಿ ಪೀಠಕ್ಕೆ ಬಂದಿದ್ದ ಆಪತ್ತನ್ನು ನಿವಾರಿಸಲು ಹಾಗೂ ಶ್ರೀ ರಂಭಾಪುರಿ ಪೀಠಕ್ಕೆ ನೂತನ ಪೀಠಾಚಾರ್ಯರನ್ನು ನೇಮಿಸಲು 1925ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಬುಕ್ಕಾಂಬುಧಿ ದಟ್ಟಾರಣ್ಯದ ಬೆಟ್ಟದ ಮೇಲೆ ಉಗ್ರ ತಪಸ್ಸನ್ನು ಕೈಗೊಂಡು ಸದಾ ಸಿದ್ದಾಂತಶಿಖಾಮಣಿ ಶ್ಲೋಕಗಳನ್ನು ಪಠಿಸುತ್ತಾ, ಶಿವಯೋಗ ಧ್ಯಾನಮಗ್ನರಾಗಿ ತಮ್ಮ ಯೋಗಿಕ ಶಕ್ತಿಯನ್ನು ಪಡೆದು ಅಷ್ಟಸಿದ್ಧಿಗಳನ್ನು ಸಾಧಿಸಿಕೊಂಡು ಶ್ರೀ ರಂಭಾಪುರಿ ಪೀಠದ ತೊಡಕನ್ನು ನಿವಾರಿಸಿ ದಿಗ್ವಿಜಯದ ಪತಾಕೆಯನ್ನು ಹಾರಿಸಿದವರು. ಶಕ್ತಿ ವಿಶಿಷ್ಟಾದ್ವೈತ ಸಿದ್ಧಾಂತದ ಪ್ರಬೋಧಕರಾಗಿ, ಉಜ್ಜಯಿನಿ ಸದ್ಧರ್ಮ ಪೀಠಕ್ಕೆ ಶಕ್ತಿ ತುಂಬಿದ ಪರಮ ತಪಸ್ವಿಗಳಾದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಭಗವತ್ಪಾದರು 1936ರಲ್ಲಿ ಉಜ್ಜಯಿನಿ ಶ್ರೀ ಮರುಳಸಿದ್ಧನ ಮಹಾಲಿಂಗದಲ್ಲಿ ಒಂದಾಗಿ ಲಿಂಗಾಂಗ ಸಾಮರಸ್ಯ ದಲ್ಲಿ ಬೆರೆತು ತಮ್ಮ ಚಿತ್ಪ್ರಭೆಯನ್ನು ಹಾಗೇ ಉಳಿಸಿಕೊಂಡವರು.
ಪ್ರಸ್ತುತ ಶ್ರೀ ಜಗದ್ಗುರು ಸಿದ್ದಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದರು, ಪ್ರತಿವರ್ಷ ಬುಕ್ಕಾಂಬುಧಿ ಬೆಟ್ಟದ ತಪೋಕ್ಷೇತ್ರದಲ್ಲಿ ಐದು ದಿನಗಳ ಇಷ್ಟಲಿಂಗಪೂಜೆ ಮತ್ತು ತಪೋನುಷ್ಠಾನ ಕೈಗೊಂಡು ಲಿಂ|| ಭಗವತ್ಪಾದರ ಪವಾಡ ಸದೃಶ ಕಾರ್ಯಗಳನ್ನು ಸಮಾಜಮುಖಿಯಾಗಿಸುತ್ತಿರುವುದು ಮತ್ತಷ್ಟು ವಿಶೇಷವಾಗಿದೆ. ಪ್ರಸ್ತುತ ಶ್ರೀ ಉಜ್ಜಯಿನಿ ಜಗದ್ಗುರುಗಳು ಜ. 12ರಿಂದ 16ರವರೆಗೆ ತಮ್ಮ13ನೇ ತಪೋನುಷ್ಠಾನ ಕೈಗೊಂಡಿದ್ದು, ಶ್ರೀ ಉಜ್ಜಯಿನಿ ಪೀಠದಲ್ಲಿ ಜ.17ರಂದು ಧಾರ್ವಿುಕ ವಿಧಿ-ವಿಧಾನಗಳೊಂದಿಗೆ 89ನೇ ಪುಣ್ಯಾರಾಧನೆಯನ್ನು ನೆರವೇರಿಸುತ್ತಾರೆ. ಹಾಗೇ ಜ. 19 ಮತ್ತು 20ರಂದು ಬಳ್ಳಾರಿಯಲ್ಲಿ ಲಿಂ|| ಜಗದ್ಗುರುಗಳ ನೆನಹು-ನಮನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ.
ಬುಕ್ಕಾಂಬುದಿ ತಪೋಕ್ಷೇತ್ರದ ಅಭಿವೃದ್ದಿಗಾಗಿ ಶ್ರೀಮದ್ ಉಜ್ಜಯಿನಿ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಟ್ರಸ್ಟ್ ಸ್ಥಾಪನೆ ಮಾಡಿ ಅದರ ಅಧ್ಯಕ್ಷರಾಗಿರುವ ಶ್ರೀ ರಂಭಾಪುರಿ ಜಗದ್ಗುರು ಡಾ ವೀರಸೋಮೇಶ್ವರ ರಾಜದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದರು ಜ. 17ರಂದು ಬುಕ್ಕಾಂಬುಧಿಯ ತಪೋಕ್ಷೇತ್ರದಲ್ಲಿ 89ನೇ ವರ್ಷದ ಪುಣ್ಯಾರಾಧನೆ ಹಾಗೂ ಜನಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಲಿದ್ದಾರೆ. ಪರಮ ತಪೋನಿಧಿ ಲಿಂ|| ಉಜ್ಜಯಿನಿ ಸಿದ್ಧಲಿಂಗ ಭಗವತ್ಪಾದರು ಬುಕ್ಕಾಂಬುಧಿಯಲ್ಲಿ ತಪೋನುಷ್ಠಾನಗೈದು ಇಂದಿಗೆ ನೂರು ವರ್ಷಗಳು ಸಂದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಅತ್ಯಂತ ಸ್ಮರಣೀಯವಾಗಿದೆ.